ವಿಜಯಪುರ: ಭಾರತದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ದೇಶ ಭಕ್ತರು, ಹೋರಾಟಗಾರರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಪೂರ್ವಜರಲ್ಲಿದ್ದ ಸ್ವದೇಶಾಭಿಮಾನದ ಕಿಚ್ಚು ಹಾಗೂ ಶ್ರದ್ಧೆಯ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದ್ದು ಅದನ್ನು ಮುಂದಿನ ಪೀಳಿಗೆಗೂ ತಿಳಿಸಿ ಕೊಡುವ ಪ್ರಯತ್ನ ನಮ್ಮಿಂದ ನಡೆಯಬೇಕಿದೆ ಎಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಲ್.ಚವ್ಹಾಣ ಹೇಳಿದರು.
ನಗರದ ಬಂಜಾರ ಶಿಕ್ಷಣ ಸಂಸ್ಥೆಯಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಹೋರಾಡಿದ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ದೇಶದ ಪ್ರಗತಿ ಮತ್ತು ಉನ್ನತಿಗೆ ನಾವೆಲ್ಲರೂ ನಮ್ಮಿಂದ ಸಾಧ್ಯವಾಗುವಷ್ಟು ರೀತಿಯಲ್ಲಿ ಸಹಕರಿಸುವಂತಾಗಬೇಕು.ಇದು ಸ್ವಾತಂತ್ರೋತ್ಸವಕ್ಕೆ ನೀಡುವ ಕೊಡುಗೆಯಾಗಲಿದೆ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್ ಬಿ ಪವಾರ ಮಾತನಾಡಿ,ಆಗಸ್ಟ್ 15, ಬ್ರಿಟಿಷರ ಕಪಿಮುಷ್ಠಿಯಿಂದ ನಮಗೆ ಸ್ವಾತಂತ್ರ್ಯ ದೊರೆತ ದಿನ.ಹೋರಾಟಗಾರರ ನೆತ್ತರ ಹನಿಗಳಿಂದಾಗಿ ನಾವಿಂದು ನೆಮ್ಮದಿಯಾಗಿ ಉಸಿರಾಡುವಂತಾಗಿದೆ. ೨೦೦ ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾದ ಭಾರತ ಪ್ರಜಾಸತ್ತಾತ್ಮಕ ಸಾರ್ವಭೌಮ ರಾಷ್ಟ್ರವಾಯಿತು ಎಂದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಬಂಜಾರ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ ಬಿ ಪೂಜಾರಿ, ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಇ ಡಿ ಲಮಾಣಿ, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸಂದೀಪ ರಾಠೋಡ ಹಾಗೂ ಪದವಿ, ಬಿಎಡ್, ಬಿಪಿಎಡ್ ಕಾಲೇಜುಗಳ ಪ್ರಾಚಾರ್ಯರು, ಶಿಕ್ಷಕ ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

