ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕರೆ
ವಿಜಯಪುರ: ಬಾಲ ಮಂದಿರದಲ್ಲಿರುವ ಪ್ರತಿಭಾವಂತ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ನಾಗರಿಕ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ನಾಡಿನ ಮಕ್ಕಳ ಶ್ರೇಯೋಭಿವೃದ್ಧಿಯ ಜೊತೆಗೆ ಬಾಲ ಮಂದಿರ ಮಕ್ಕಳಿಗಾಗಿ ವಿಶೇಷ ಯೋಜನೆಗಳನ್ನು ಕೈಗೊಳ್ಳಲಿದೆ. ಆ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಲಿದ್ದೇನೆ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಗುರುವಾರ ಅವರು ನಗರದ ಬಾಲಕರ ಬಾಲ ಮಂದಿರದಲ್ಲಿ 78ನೆಯ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
“ನಾನು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸದೆ ಅಲ್ಲಿಯ ಅಧಿಕಾರಿಗಳಿಗೆ ಕೇಂದ್ರ ಕಚೇರಿಯ ದ್ವಜಾರೋಹಣ ನೆರವೇರಿಸುವಂತೆ ತಿಳಿಸಿ, ಬಾಲ ಮಂದಿರದ ಮಕ್ಕಳೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಲು ನಿರ್ಧರಿಸಿದ್ದೆ. ಈ ಮಕ್ಕಳಲ್ಲಿರುವ ಶಿಸ್ತು ಅವರ ಕಣ್ಣುಗಳಲ್ಲಿರುವ ಹೊಳಪನ್ನು ನೋಡಿದಾಗ ತುಂಬಾ ಸಂತೋಷವಾಗಿದೆ. ಬಾಲ ಮಂದಿರದ ಮಕ್ಕಳಿಗೆ ಆತ್ಮ ವಿಶ್ವಾಸವನ್ನು ತುಂಬಿ, ಪ್ರೀತಿ-ಕಕ್ಕುಲತೆ ಕಾಳಜಿಯನ್ನು ತೋರಿದರೆ ಅವರು ಈ ನಾಡಿನ ಭವಿಷ್ಯದ ಆಶಾಕಿರಣಗಳಾಗುವುದರಲ್ಲಿ ಸಂಶಯವಿಲ್ಲ ಎಂದು ಬಬಲೇಶ್ವರ ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ ಹಾಗೂ ಅಧೀಕ್ಷಕಿ ಸುಪರ್ನಾ ಜಾಧವ ಪಾಲ್ಗೊಂಡಿದ್ದರು.
ಸಿಬ್ಬಂದಿ ವರ್ಗ ಹಾಗೂ ಮುದ್ದು ಮಕ್ಕಳು ಇದ್ದರು.
ಸ್ವಾತಂತ್ರ್ಯೋತ್ಸವದ ವಿಶೇಷ ಅತಿಥಿಯಾಗಿ ಬಂದು ತಮಗೆ ಹೊಸ ಉತ್ಸಾಹ ಮತ್ತು ಭರವಸೆಯನ್ನು ಮೂಡಿಸಿದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರನ್ನು ಆಕರ್ಷಕ ಪಥಸಂಚಲನದ ಮೂಲಕ ಮಕ್ಕಳು ಸ್ವಾಗತಿಸಿದ್ದು ವಿಶೇಷವಾಗಿತ್ತು.

