Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ತಲೆಮಾರುಗಳ ಅಂತರ
ವಿಶೇಷ ಲೇಖನ

ತಲೆಮಾರುಗಳ ಅಂತರ

By Updated:No Comments8 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವೀಣಾಂತರಂಗ “– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್

ತಲೆಮಾರುಗಳ ಅಂತರ

ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದ ಅಜ್ಜ ಮೊಮ್ಮಗನ ಸಂವಾದದ ವಿಷಯವೊಂದು ಮನಸ್ಸಿಗೆ ಬಹಳಷ್ಟು ಹಿಡಿಸಿ ನನ್ನ ಭಾವನೆಗಳನ್ನು ಕೂಡ ಅದರಲ್ಲಿ ಬೆರೆಸಿ ತಲೆಮಾರುಗಳ ಅಂತರದ ಒಂದು ಸುಂದರ ಚಿತ್ರಣವನ್ನು ನಿಮ್ಮ ಮುಂದಿರಿಸಿದ್ದೇನೆ.

ಹರೆಯದ ಯುವಕನೊಬ್ಬ ತನ್ನ ಅಜ್ಜನನ್ನು
“. ಅದು ಹೇಗೆ ನೀವು ತಂತ್ರಜ್ಞಾನವಿಲ್ಲದ ಸಮಯದಲ್ಲಿ ಜೀವನ ಸಾಗಿಸುತ್ತಿದ್ದಿರಿ ಎಂದು ನನಗೆ ಸೋಜಿಗವಾಗುತ್ತದೆ ಅಜ್ಜ! ಕಂಪ್ಯೂಟರ್, ಟಿವಿ, ಇಂಟರ್ನೆಟ್, ಕಾರುಗಳು, ಏರ್ ಕಂಡೀಷನರ್ಗಳು, ಮೊಬೈಲ್ಗಳು, ವಿವಿಧ ಬಗೆಯ ವಿದ್ಯುನ್ಮಾನ ಯಂತ್ರಗಳು ಇಲ್ಲದೆ ಅದು ಹೇಗೆ ಅಷ್ಟು ವರ್ಷಗಳ ಕಾಲ ನೀವು ಜೀವಿಸಿದಿರಿ ಎಂದು ನೆನೆದರೆ ಆಶ್ಚರ್ಯವಾಗುತ್ತದೆ ಎಂದು ಹೇಳಿದ.

ನಸುನಗುತ್ತಾ ಅಜ್ಜ “ಯಾವ ರೀತಿ ಇಂದಿನ ಪೀಳಿಗೆಯ ನೀವು ಪ್ರಾರ್ಥನೆ ಮಾಡದೆ, ಸಹಾನುಭೂತಿ ಇಲ್ಲದೆ, ಗೌರವಾದರೆಗಳಿಲ್ಲದೆ, ಮೌಲ್ಯಯುತ ಶಿಕ್ಷಣವಿಲ್ಲದೆ, ಮಾನವೀಯ
ಅಂತಃಕರಣವಿಲ್ಲದೇ, ಒಳ್ಳೆಯ ವಿಚಾರಧಾರೆಗಳಿಲ್ಲದೆ ಲಜ್ಜೆಗಳಿಲ್ಲದೆ ವ್ಯಕ್ತಿತ್ವರಹಿತರಾಗಿ ಬದುಕುತ್ತಿರುವಿರೋ ಅಂತೆಯೇ ನಾವು ಬದುಕಿದ್ದೆವು” ಎಂದು ಉತ್ತರಿಸಿದರು .

ಮತ್ತೆ ಮುಂದುವರೆದು ಅಜ್ಜ ಹೀಗೆ ಹೇಳಿದರು..ಮಗು, ಕೆಲ ದಶಕಗಳ ಹಿಂದೆ ಹುಟ್ಟಿದ ನಾವುಗಳು ಅತ್ಯಂತ ಪುಣ್ಯವಂತರು ನಮ್ಮ ಬದುಕು ಉತ್ತಮ ಬದುಕಿಗೆ ಜೀವಂತ ಉದಾಹರಣೆ.
ಆಟವಾಡುವಾಗ, ಸೈಕಲ್ ಇಲ್ಲವೇ ಗಾಡಿ ಓಡಿಸುವಾಗ ಹೆಲ್ಮೆಟ್ ಧರಿಸದವರು… ಅಸಲಿಗೆ ಅಂದು ಗಾಡಿಗಳೇ ಇರಲಿಲ್ಲ ಬಿಡು!.

ಶಾಲೆ ಬಿಟ್ಟ ಮೇಲೆ ಮನೆಗೆ ಬಂದು ಪಾಟಿಚೀಲ ಎಸೆದವರೆ ಆಟಕ್ಕೆ ಹೊರಟರೆ ಸೂರ್ಯ ಮುಳುಗಿ ಕತ್ತಲಾಗುವವರೆಗೆ ಮನೆ ಸೇರುತ್ತಿರಲಿಲ್ಲ. ಕತ್ತಲಾದ ಮೇಲೆ ಮನೆಗೆ ಬಂದು ಕೈ ಕಾಲು ಮುಖತೊಳೆದು ದೇವರಿಗೆ ನಮಸ್ಕರಿಸಿ ಪ್ರಾರ್ಥನೆ ಮಾಡಿ ನಮ್ಮ ನಮ್ಮ ಮನೆ ಪಾಠಗಳನ್ನು ನಾವೇ ಬರೆದುಕೊಳ್ಳುತ್ತಿದ್ದೆವು. ಅಪ್ಪನ ಶಿಸ್ತು, ಅಮ್ಮನ ರಕ್ಷೆ ನಮಗಿರುತ್ತಿತ್ತು. ಅಪ್ಪನೆಡೆ ಒಂದು ಭಯ ಮಿಶ್ರಿತ ಗೌರವ ಹೊಂದಿದ್ದು ಅಪ್ಪ ಮನೆಗೆ ಕಾಲಿಟ್ಟರೆ ಸೂಜಿ ಬಿದ್ದರೂ ಕೇಳಿಸುವಂತಹ ನಿಶ್ಯಬ್ದ ಮನೆಯನ್ನು ಆಳುತ್ತಿತ್ತು.

ಬೆಳಗಿನ ತಿಂಡಿಗೆ ಇಡ್ಲಿ ದೋಸೆಯೇ ಆಗಬೇಕೆಂದಿರಲಿಲ್ಲ. ಚಹಾ ಕಾಫಿ ಅಂತೂ ಬಲು ದೂರ… ಅಸಲಿಗೆ ತಿಂಡಿಯ ಕಾನ್ಸೆಪ್ಟೇ ಇರಲಿಲ್ಲ, ಚಿಕ್ಕ ಮಕ್ಕಳಿಗೆ ಮಾತ್ರ ರಾತ್ರಿ ಮನೆಯಲ್ಲಿ ಎಲ್ಲರೂ ಉಂಡ ಮೇಲೆ ಮಿಕ್ಕಿದ ಅನ್ನಕ್ಕೆ ತುಸು ಎಣ್ಣೆ ವಿವಿಧ ಬಗೆಯ ಚಟ್ನಿಪುಡಿಗಳು ಉಪ್ಪಿನಕಾಯಿ ಕಲಸಿ ಕೈಗೆ ತುತ್ತು ಹಾಕಿದರೆ ಆಹಾ ಸ್ವರ್ಗಕ್ಕೆ ಮೂರೇ ಗೇಣು. ಆಗೊಮ್ಮೆ ಈಗೊಮ್ಮೆ ಮನೆಗೆ ನೆಂಟರು ಬಂದಾಗ ಸಿಹಿ ಅಡುಗೆ, ಅಮಾವಾಸ್ಯೆ ಹುಣ್ಣಿಮೆಗಳಲ್ಲಿ ಮಾತ್ರ ಹೋಳಿಗೆ, ಹುಗ್ಗಿಗಳ ಭರ್ಜರಿ ಊಟ. ಬೆಳಗಿನ ಜಾವವೇ ಅಮಾವಾಸ್ಯೆ ಹುಣ್ಣಿಮೆಗಳನ್ನು ಹೊರತುಪಡಿಸಿ ಎಲ್ಲರ ಮನೆಗಳಲ್ಲಿ ಪಟ ಪಟ ಎಂದು ರೊಟ್ಟಿ ಬಡಿಯುವ ಶಬ್ದ. ಹಿಂದಿನ ದಿನ ಹೊಲದ ಬದುವಿನಲ್ಲಿ ಬೆಳೆದ ತರಕಾರಿಗಳನ್ನು, ಸೊಪ್ಪುಗಳ ಪಲ್ಯ, ಇಲ್ಲವೇ ಬೇಳೆ, ಕಾಳುಗಳನ್ನು ಕುದಿಸಿದ ಗಡಿಗೆಯಿಂದಲೇ ಆಗ ತಾನೆ ಬಡಿದು ಬೇಯಿಸಿದ ಬಿಸಿಬಿಸಿಯಾದ ರೊಟ್ಟಿಗಳನ್ನು ಕೈಯಲ್ಲಿ ತಟ್ಟಿಯಂತೆ ಹಿಡಿದು ಅದರಲ್ಲಿ ಪಲ್ಯ ಇಲ್ಲವೇ ಕಾಳನ್ನು ಹಾಕಿಸಿಕೊಂಡು ಮೇಲೆ ಒಂದು ಚಮಚದಷ್ಟು ಬೆಳ್ಳುಳ್ಳಿ ಖಾರ, ಇಲ್ಲವೇ ಹಸಿ ಮೆಣಸಿನಕಾಯಿ ಹಿಂಡಿ ಹಾಕಿ ಅದಕ್ಕೆ ತುಸುವೇ ಕಾಯಿಸಿದ ಎಣ್ಣೆ ಕಲಸಿ ತಿಂದರೆ ಆಹಾ! ಏಳೆಂಟು ರೊಟ್ಟಿಗಳು ಸಲೀಸಾಗಿ ಹೊಟ್ಟೆಯಲ್ಲಿ ಇಳಿಯುತ್ತಿದ್ದವು.ನಮ್ಮ ಅಮ್ಮಂದಿರೂ ಅಷ್ಟೇ! ಅಳೆದು ತೂಗಿ ರೊಟ್ಟಿ ಮಾಡುತ್ತಿರಲಿಲ್ಲ. ಬಡಿಯ ಕೈಲೆ ನಾಕ್ ರೊಟ್ಟಿ ಹೆಚ್ಚಿಗೆ ಬಡಿ ಎಂಬ ತತ್ವವುಳ್ಳವರು. ಒಮ್ಮೆ ರೊಟ್ಟಿ ತಿಂದರೆ ರಾತ್ರಿಯೇ ಮುಂದಿನ ಊಟ.

ನಾವು ನಮ್ಮ ನಿಜವಾದ ಸ್ನೇಹಿತರೊಂದಿಗೆ ಆಟವಾಡಿದ್ದೇವೆಯೇ ಹೊರತು ಭ್ರಮೆಯ ಜಗತ್ತಿನ ಹೀರೋಗಳೊಂದಿಗಲ್ಲ. ನಮ್ಮ ಆಟ ದೈಹಿಕ ಶ್ರಮವನ್ನು ಒಳಗೊಂಡಿದ್ದು ನಮ್ಮಲ್ಲಿ ಪರಸ್ಪರ ಸಹೋದರ ಭಾವ, ಹೊಂದಾಣಿಕೆಗೆ ಬರವಿರಲಿಲ್ಲ.
ಹೋಳಿ ಹಬ್ಬದಲ್ಲಿ ಜಾತಿ ಭೇದವಿಲ್ಲದೆ ಸ್ನೇಹಿತರೊಡಗೂಡಿ ಕಾಮನ ಸುಟ್ಟು, ಮರುದಿನ ಮುಂಜಾನೆ ಬಣ್ಣ ಎರಚಿ ಸಂತಸ ಪಟ್ಟದ್ದಿದೆ. ಮೊಹರಂನಲ್ಲಿ ತಾಯಂದಿರ ಹರಕೆಗೆ ಫಕೀರರಾದರೆ ಅಲೆ ದೇವರ ಹೊತ್ತು ಮೆರೆದದ್ದೂ ಇದೆ.

ಯಾರದೋ ಮನೆಯ ಹುಣಸೆ ಹಣ್ಣಿಗೆ ಮತ್ತಾರದೋ ಮನೆಯ ಜೀರಿಗೆ ಬೆಲ್ಲ ಉಪ್ಪು ಕಾರ ತಂದು ಕಲ್ಲಿನ ಮೇಲೆ ಕುಟ್ಟಿ ಕಡ್ಡಿಗೆ ಚುಚ್ಚಿ ಮೆದ್ದದ್ದಿದೆ.
ಊರ ಹೊರಗಿನ ತೋಪುಗಳಲ್ಲಿನ ಮಾವಿನ ಹಣ್ಣು, ಪೇರಲ ಕಾಯಿ, ತೋಟದಲ್ಲಿನ ತೆಂಗಿನ ಎಳನೀರು ಎಲ್ಲದರ ರುಚಿ ನೋಡಿದ್ದೇವೆ.

ಆಟವಾಡಿ ದಣಿದಾಗ ಕೆರೆ, ಹೊಳೆ,ಹಳ್ಳ ಬಾವಿಗಳ ನೀರನ್ನು ಕುಡಿದಿದ್ದೇವೆಯೇ ಹೊರತು ಬಾಟಲಿನಲ್ಲಿ ಪ್ಯಾಕ್ ಮಾಡಲ್ಪಟ್ಟ ಮಿನರಲ್ ವಾಟರನ್ನಲ್ಲ. ಒಂದೇ ತಟ್ಟೆಯಲ್ಲಿ ಊಟ ಒಂದೇ ಗ್ಲಾಸಿನಲ್ಲಿ ನೀರು ಕಚ್ಚಿ ಕುಡಿದರೂ ನಾವೆಂದೂ ಚಿಂತಿಸಿಲ್ಲ ಮತ್ತು ನಮಗೆ ಯಾವುದೇ ಆರೋಗ್ಯ ಸಂಬಂಧಿ ತೊಂದರೆಗಳಾಗಿರಲಿಲ್ಲ ಎಂದು ಹೇಳಿದರೆ ನೀನು ನಂಬಲಿಕ್ಕಿಲ್ಲ ಬಿಡು!

ಈಗಿನಂತೆ ಆಗ ಯಾವುದೇ ವಾಹನಗಳಾಗಲಿ,ರಸ್ತೆ ಸೌಕರ್ಯಗಳಾಗಲಿ ಇರಲಿಲ್ಲ, ಬರಿಗಾಲಿನಲ್ಲಿಯೇ ಮೈಲಿಗಟ್ಟಲೆ ನಡೆಯುತ್ತಿದ್ದೆವು.ಮನೆಯಲ್ಲಿ ಮಾಡಿದ ರೊಟ್ಟಿ ಚಟ್ನಿ, ಹೊಲದ ಬದಿಯಲ್ಲಿ ಸಿಗುವ ಸೊಪ್ಪು, ಹೊಲದಲ್ಲಿ ಬೆಳೆಯುವ ತರಕಾರಿ, ಅಕ್ಕಡಿ ಕಾಳುಗಳು ಜೋಳ, ಗೋದಿ,ನವಣೆ ನಮ್ಮ ಮುಖ್ಯ ಆಹಾರಗಳಾಗಿದ್ದವು ಅಪೌಷ್ಟಿಕತೆ ನಮ್ಮನ್ನೆಂದೂ ಕಾಡಲಿಲ್ಲ.

ನಾವೇ ತಯಾರಿಸಿದ ಕಟ್ಟಿಗೆಯ ಸಾಮಾನುಗಳು ನಮ್ಮ ಆಟಿಕೆಗಳಾಗಿದ್ದವು. ಬಡಿಗೆ, ಕೋಲು, ಕಲ್ಲು, ತೆಂಗಿನ ಹೆಡೆ, ಹಳೆಯ ಸೈಕಲ್ ಗಾಲಿ, ಕಟ್ಟಿಗೆಯಿಂದ ತಯಾರಿಸಿದ ಚಿಣಿ ಪಣಿ, ಗೋಲಿ, ಗಜ್ಜುಗ, ಬುಗುರಿ, ಗುಂಡ ಕವಡೆಯ ಬದಲಾಗಿ ತೇಯ್ದ ಹುಣಿಸೆ ಬೀಜಗಳು ನಮ್ಮ ಆಟಿಕೆಗಳಾಗಿದ್ದವು.
ನಿಮ್ಮಂತೆ ನಾವು ಸ್ವಿಮ್ಮಿಂಗ್ ಪೂಲ್ ಗಳಿಗೆ ಹೋಗಿ ಈಜು ಕಲಿತಿಲ್ಲ ಬದಲಾಗಿ ಊರಿನ ದೊಡ್ಡ ಬಾವಿಗಳು ಹೊಳೆ ಹಳ್ಳಗಳೇ ನಮ್ಮ ಈಜು ತಾಣಗಳು. ಜೋಳದ ದಂಟಿನ ಪೆಂಡಿಯನ್ನು ಇಲ್ಲವೇ ತಗಡಿನ ಡಬ್ಬಿಯನ್ನು ಬೆನ್ನಿಗೆ ಕಟ್ಟಿಕೊಂಡು ಈಜು ಹೊಡೆಯುವುದನ್ನು ನಾವು ಕಲಿತಿದ್ದೆವು.

ಹೊಲದಲ್ಲಿಯೂ ಕೂಡ ನಾವು ಅಪ್ಪನೊಂದಿಗೆ ಕೈಗೂಡುತ್ತಿದ್ದೆವು. ಬಿತ್ತುವ, ಕಳೆ ತೆಗೆಯುವ, ರಾಶಿ ಮಾಡುವ ಸಮಯದಲ್ಲಿ ಶಾಲೆಗೆ ಕಡ್ಡಾಯವಾಗಿ ರಜೆ ಹಾಕುತ್ತಿದ್ದೆವು. ಶಾಲೆಯ ಶಿಕ್ಷಕರು ಕೂಡ ನಮಗೆ ವಿನಾಯತಿ ನೀಡುತ್ತಿದ್ದರು. ಮನೆಯಲ್ಲಿ ದನ ಕರುಗಳು ಇದ್ದರೆ ರಜೆಯಲ್ಲಿ ದನ ಕಾಯುವ ಕೆಲಸ ಕೂಡ ನಮ್ಮದೇ, ವಾರಿಗೆಯ ಹತ್ತಾರು ಜನ ಹುಡುಗರು ದನ ಕಾಯಲು ನಮ್ಮ ನಮ್ಮ ದನಗಳನ್ನು ತಿರುವಿಕೊಂಡು ಹೊರಟು ಒಂದೆಡೆ ಅವುಗಳನ್ನು ಮೇಯಲು ಬಿಟ್ಟು, ಮರದಡಿಯಲ್ಲಿ ಊಟ ಆಟ ಹರಟೆ ಎಲ್ಲವೂ ನಡೆಯುತ್ತಿತ್ತು.

ನಮ್ಮ ಪಾಲಕರು ಶ್ರೀಮಂತರಾಗಿರಲಿಲ್ಲ ನಿಜ ಆದರೆ ನಮಗೆ ಅಪಾರ ಪ್ರೀತಿ, ಸಮಯ ಮತ್ತು ಕೆಲಸದ ಮಹತ್ವವನ್ನು ತಿಳಿಸಿಕೊಟ್ಟರು. ಸಂಬಂಧಗಳ ನಡುವಿನ ಮಾರ್ದವತೆಯನ್ನು, ಪ್ರೀತಿ ವಿಶ್ವಾಸಗಳನ್ನು ಅವರು ಕಲಿಸಲಿಲ್ಲ ಬದಲಾಗಿ ನಡೆದು ತೋರಿಸಿದರು. ಅಪ್ಪನ ಹೆಗಲೇರಿ ಹತ್ತಿರದ ಊರಿನ ಜಾತ್ರೆ, ಸಂತೆಗಳಲ್ಲಿ ಪೀಪಿ, ಬೆಂಡು ಬತ್ತಾಸು, ಹೆಣ್ಣು ಮಕ್ಕಳಾದರೆ ಬಳೆ ಟೇಪುಗಳನ್ನು ಕೊಡಿಸಿಕೊಂಡು ಬರುವುದು ಬಹುದೊಡ್ಡ ಲಕ್ಸುರಿಯಾಗಿತ್ತು ನಮ್ಮ ಪಾಲಿಗೆ. ವರ್ಷಕ್ಕೊಮ್ಮೆ ಯುಗಾದಿಗೆ ಒಂದು ಜೊತೆ ಬಟ್ಟೆ ಕೊಡಿಸಿದರೆ ನಮ್ಮ ಸಂತಸಕ್ಕೆ ಪಾರವೇ ಇರಲಿಲ್ಲ. ಮನೆಯ ಎಲ್ಲಾ ಮಕ್ಕಳಿಗೂ ಒಂದೇ ತಾನಿನ ಬಟ್ಟೆ ಹರಿದು ಅದರಲ್ಲಿಯೇ ಅಂಗಿ ಹೊಲಿಸಿದರೆ, ಮತ್ತೊಂದು ದಪ್ಪನೆಯ ಬಟ್ಟೆಯ ತಾನಿನಲ್ಲಿ ಎಲ್ಲರಿಗೂ ಚೊಣ್ಣ ಹೊಲಿಸುತ್ತಿದ್ದರು.

ತಿಂಗಳಿಗೊಮ್ಮೆ ಊರ ಹೊರಗಿನ ಆಲದ ಮರ ಇಲ್ಲವೇ ಬೇವಿನ ಮರದ ಕೆಳಗೆ ಕುಳಿತು ಚೌರ ಮಾಡುವ ಬೀರಪ್ಪಜ್ಜನ ಬಳಿ ಅಪ್ಪ ಗುಂಡು ಹೊಡೆಸಲು ತಾಕೀತು ಮಾಡಿ ಮನೆಗೆ ಹೋದರೆ ಆತನನ್ನು ಕಾಡಿ ಬೇಡಿ, ಅಪ್ಪಾರ್ ಬೈತಾರ ಅನ್ನೋ ಹೆದರಿಕೆಯನ್ನು ಹೊರತುಪಡಿಸಿ ತುಸು ಹೆಚ್ಚು ಕೂದಲು ಬಿಡಿಸಿಕೊಂಡು ಕ್ರಾಪ್ ಕಟ್ ಮಾಡಿಸಿಕೊಂಡು ಬಂದರೆ, ತನ್ನ ಮೀಸೆ ಅಡಿಯಲ್ಲಿ ನಗುತ್ತಾ ಹುಸಿಮುನಿಸನ್ನು ತೋರುವ ಅಪ್ಪ “ಮುಂದಿನ ಸಲ ಪೂರ್ತಿ ಗಾಂಧಿ ಕಟ್ ಮಾಡಿಸಬೇಕು ನೋಡು” ಎಂದು ಹೇಳಿದಾಗ ಯುದ್ಧವನ್ನೇ ಗೆದ್ದಷ್ಟು ಸಂತಸದಿಂದ ತಲೆಯಾಡಿಸಿ ಹಿತ್ತಲಿಗೆ ಹೋಗಿ ತಲೆ ಸ್ನಾನ ಮಾಡಿ ಒಳಗೆ ಬಂದು ದೇವರಿಗೆ ನಮಿಸಿ ತಲೆಯ ಬಾಚಿ ಮಾಡಿನಲ್ಲಿರುವ ಹಳೆಯ ಮಾಸಿದ ಕನ್ನಡಿಯಲ್ಲಿ ಕ್ರಾಪ್ ಕೂದಲನ್ನು ಮೃದುವಾಗಿ ತಟ್ಟಿದರೆ ಅದುವೇ ನಮ್ಮ ಸಿಂಗಾರ.

ಮಾತಾಡಲು ಸೆಲ್ ಫೋನ್ ಗಳು ಇಲ್ಲದ ಆ ಕಾಲದಲ್ಲಿ ನಿಜವಾದ ಸ್ನೇಹಿತರೊಂದಿಗೆ ಮನ ಬಿಚ್ಚಿ ಮಾತಾಡಲು, ಒಡನಾಡಲು, ಆಟವಾಡಲು ಸಾಕಷ್ಟು ಸಮಯ ನಮಗಿತ್ತು. ಬೇಕೆಂದಾಗ ಹೇಳದೆ ಕೇಳದೆ ಸ್ನೇಹಿತರ ಮನೆಗೆ ಹೋಗಿ ಅವರ ಮನೆಯಲ್ಲಿ ಮಾಡಿದ ಅಡುಗೆಯನ್ನು ಪಟ್ಟಾಗಿ ಉಂಡು ಹರಟೆ ಹೊಡೆದು ಬರುತ್ತಿದ್ದೆವು. ಅವರೂ ಅಷ್ಟೇ ಅಯ್ಯೋ, ಊಟದ ಸಮಯಕ್ಕೆ ಬಂದರಲ್ಲ ಎಂದು ಹೆದರುತ್ತಿರಲಿಲ್ಲ. ತಮ್ಮ ಮಕ್ಕಳಷ್ಟೇ ಪ್ರೀತಿಯಿಂದ ನಮಗೂ ಬಡಿಸಿ ಸಂತಸ ಪಡುತ್ತಿದ್ದರು.
ಅಪ್ಪ, ಅಮ್ಮ, ಅತ್ತೆ, ಮಾವ, ಅಜ್ಜ, ಅಜ್ಜಿ,ಚಿಕ್ಕಪ್ಪ, ಚಿಕ್ಕಮ್ಮ ಮುಂತಾದ ಸಂಬಂಧಗಳಲ್ಲಿ ಪ್ರೀತಿ, ವಿಶ್ವಾಸ, ಆತ್ಮೀಯತೆಗಳಿದ್ದವು. ಮನೆಯ ಹಿರಿಯರು ಹೇಳಿದ ಮಾತುಗಳು ಕಡ್ಡಾಯವಾಗಿ ಪಾಲಿಸಲೇಬೇಕಾದ ವೇದ ವಾಕ್ಯಗಳಾಗಿದ್ದವು.

ಫೋಟೋ ತೆಗೆಸಿಕೊಳ್ಳುವುದು ನಮಗೆ ದುಬಾರಿ ಹವ್ಯಾಸವಾಗಿತ್ತು. ಆಗ ಯಾವಾಗಲೋ ಒಮ್ಮೆ ಮನೆ ಮಂದಿಯೆಲ್ಲ ಒಂದು ಫ್ಯಾಮಿಲಿ ಫೋಟೋಗೆ ಪೋಸ್ ಕೊಡುತ್ತಿದ್ದೆವು. ಅದನ್ನು ಮನೆಯ ಪಡಸಾಲೆಯಲ್ಲಿ ಕಟ್ಟು ಹಾಕಿಸಿ ನೇತು ಹಾಕಿರುತ್ತಿದ್ದೆವು. ಪದವೀಧರರಾದರೆ ಮಾತ್ರ ಕಡ್ಡಾಯವಾಗಿ ಕರಿಕೋಟು ಧರಿಸಿ ತಲೆಯ ಮೇಲೆ ಹ್ಯಾಟ್ ಹಾಕಿಕೊಂಡು ಕೈಯಲ್ಲಿ ಪದವಿ ಸರ್ಟಿಫಿಕೇಟ್ ನ್ನು ಹಿಡಿದುಕೊಂಡ ಕಪ್ಪು ಬಿಳುಪಿನ ಚಿತ್ರ ಕುಟುಂಬದ ಹೆಮ್ಮೆಯಾಗಿ ಮನೆಯ ಪಡಸಾಲೆಯಲ್ಲಿ ಪ್ರದರ್ಶಿತವಾಗುತ್ತಿತ್ತು. ಚಿತ್ರಗಳು ಕಪ್ಪು ಬಿಳುಪಾಗಿದ್ದರೂ ಅವುಗಳು ನಮ್ಮ ಬಾಲ್ಯದ ಬದುಕಿನ ಬಣ್ಣದ ನೆನಪಿನ ಚಿತ್ತಾರಗಳಾಗಿದ್ದವು.

ತಂದೆ ತಾಯಿಯರನ್ನು ದೇವರ ಸ್ವರೂಪ ಎಂದು ಭಾವಿಸಿದ ತಲೆಮಾರು ನಮ್ಮದು. ನನ್ನ ಎಷ್ಟೋ ಸ್ನೇಹಿತರು ಮನೆಯ ಮತ್ತು ದೇವರ ಪೂಜೆಯ ಉಸ್ತುವಾರಿ ವಹಿಸಿಕೊಳ್ಳಲು ಒಂದೆರಡು ವರ್ಷ ಶಾಲೆ ಬಿಟ್ಟದ್ದು ಉಂಟು. ಅಂದು ನಮ್ಮ ಪಾಲಕರ ಮಾತನ್ನು ಕೇಳಿದ ನಾವು ಇಂದು ನಮ್ಮ ಮಕ್ಕಳ ಮಾತನ್ನು ಪಾಲಿಸುತ್ತಿರುವ ಮೊದಲ ಪೀಳಿಗೆಯವರಾಗಿದ್ದೇವೆ. ನಮ್ಮ ತಪ್ಪುಗಳನ್ನು ತಿದ್ದಲು ನಮ್ಮ ಪಾಲಕರೇ ಆಗಬೇಕೆಂದಿರಲಿಲ್ಲ.. ಊರಿನ ಯಾರು ಬೇಕಾದರೂ ನಮ್ಮ ಕಿವಿ ಹಿಂಡಿ ಬೈದು ಬುದ್ಧಿ ಹೇಳುತ್ತಿದ್ದರು.ಅದನ್ನು ಮನೆಗೆ ಬಂದು ಹೇಳುತ್ತಲೂ ಇರಲಿಲ್ಲ ನಾವು, ಹಾಗೇನಾದರೂ ಹೇಳಿದರೆ ಇನ್ನೂ ನಾಲ್ಕು ಏಟು ಹೆಚ್ಚಾಗಿ ಬೀಳುತ್ತಿತ್ತು ಅಷ್ಟೇ!.

ಹೆಣ್ಣುಮಕ್ಕಳೊಂದಿಗೆ ಸ್ನೇಹವಂತೂ ದೂರ…ಕಣ್ಣೆತ್ತಿ ಮಾತನಾಡುತ್ತಿರಲಿಲ್ಲ ಕೂಡ. ಎಷ್ಟೋ ಜನರು ತಾವು ಯಾವುದಾದರೂ ಹುಡುಗಿಯನ್ನು ಇಷ್ಟಪಟ್ಟರೂ ಕೂಡ ಅದನ್ನು ಹೇಳಿಕೊಳ್ಳಲಾಗದೆ, ಪತ್ರ ಬರೆದು ತಿಳಿಸಲೂ ಆಗದೆ ಒದ್ದಾಡುತ್ತಿದ್ದರು. ಮತ್ತೆ ಕೆಲವೊಮ್ಮೆ ಆಕೆಯ ಮದುವೆಯಲ್ಲಿ ಹೆಣ್ಣಿನ ಕಡೆಯವರಾಗಿ ಓಡಾಡುತ್ತಿದ್ದರು. ಋಣಾನುಬಂಧವಿಲ್ಲ ಎಂಬುದೊಂದೇ ಅವರ ಮಾತಾಗಿತ್ತು… ಈಗಿನವರಂತೆ ಪ್ರೀತಿಸುವ, ಬೇಡವಾದರೆ ಕೈಬಿಡುವ, ಕೊಲೆ ಮಾಡುವ ಎಸಿಡ್ ಎರಚುವ ಜಾಯಮಾನ ಅಂದಿನವರಲ್ಲಿರಲಿಲ್ಲ. ಹರೆಯದ ಪ್ರೀತಿಯನ್ನು ಬಹುಮೂಲ್ಯ ಆಸ್ತಿ ಎಂಬಂತೆ ತಮ್ಮ ನೆನಪಿನ ಕಣಜಗಳಲ್ಲಿ ಜತನವಾಗಿ ಇಟ್ಟುಕೊಳ್ಳುತ್ತಿದ್ದರು ಅಂದಿನ ಜನ.

ಮೂರು ತಲೆಮಾರಿನ ಜನ ಒಟ್ಟಾಗಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದೆವು. ಇನ್ನು ನಮ್ಮ ಮನೆಗಳು ಗಟ್ಟಿ ಮುಟ್ಟಾದ ಕಂಬಗಳ ಮೇಲೆ ಅಡುಗೆಮನೆ ದೇವರಮನೆ, ಪಡಸಾಲೆ, ವಾರಪಡಸಾಲೆ, ಮುಖ್ಯವಾಗಿ ದನದ ಹಕ್ಕಿಯನ್ನು ಹೊಂದಿರುತ್ತಿದ್ದವು. ವಾರಪಡಸಾಲೆಯಲ್ಲಿ ಒಂದೆರಡು ವರ್ಷಗಳ ಜೋಳ ಗೋದಿ ಅಕ್ಕಡಿಕಾಳುಗಳ ಚೀಲಗಳ ನಿಟ್ಟು, ಒಕ್ಕಲುತನಕ್ಕೆ ಬೇಕಾಗುವ ಸಣ್ಣಪುಟ್ಟ ಸಾಮಾನುಗಳು, ಚೀಲ, ಪುಟ್ಟಿ, ಸೇರು, ಮೊರ, ಕೆರೆಸಿ ಮನೆಯ ಮುಂದಿನ ಕಟ್ಟೆಯ ಮೇಲೆ ಒಂದು ಬಂಕದ ಕೋಣೆ ಇದ್ದರೆ ಅದು ಆ ಮನೆಯ ಅತಿಹೆಚ್ಚಿನ ಲಕ್ಸ್ಯೂರಿ. ವಾರಕ್ಕೊಮ್ಮೆ ಮನೆಯ ಒಳ ಹೊರಗಿನ ನೆಲವನ್ನು ಸಗಣಿಯಿಂದ ಸಾಧಿಸಿದರೆ, ಅಂಚುಗಳಲ್ಲಿ ಸುಣ್ಣದ ಮತ್ತು ಕೆಮ್ಮಣ್ಣು ಪಟ್ಟಿಯನ್ನು ಎಳೆದು ಸುಂದರಗೊಳಿಸುತ್ತಿದ್ದರು. ಪ್ರತಿ ಮನೆಯ ಮಕ್ಕಳು ಶನಿವಾರ ದಿನ ಸ್ನಾನ ಮಾಡಿ ಮಡಿಬಟ್ಟೆಯುಟ್ಟು ಒಂದು ಸಣ್ಣ ಲೋಟದಲ್ಲಿ ಎಣ್ಣೆ ಬತ್ತಿ ಎರಡು ಊದಿನ ಕಡ್ಡಿ ಹಿಡಿದು ಊರ ಮುಂದಣ ಹನುಮಪ್ಪನ ಗುಡಿಗೆ ಹೋಗುತ್ತಿದ್ದೆವು. ಬಹುಶಹ ಅಂದಿಗೂ ಇಂದಿಗೂ ಎಂದೆಂದಿಗೂ ಸಲ್ಲುವ ಯುನಿವರ್ಸಲ್ ದೇವರು ಹನುಮಪ್ಪ ಮಾತ್ರ ಎಂದೆನಿಸುತ್ತದೆ.

ಹಬ್ಬ ಹರಿದಿನಗಳಲ್ಲಿ ದನ ಕರುಗಳನ್ನು ಹತ್ತಿರದ ಕೆರೆ ಹಳ್ಳಗಳಿಗೆ ತೆಗೆದುಕೊಂಡೊಯ್ದು ಅವುಗಳ ಮೈ ತೊಳೆದು ಮನೆಗೆ ತಂದು ಅವುಗಳ ಕೋಡುಗಳಿಗೆ ಬಣ್ಣ ಹಚ್ಚಿ ಸಿಂಗಾರ ಮಾಡಿ, ಬಣ್ಣ ಬಣ್ಣದ ರಿಬ್ಬನ್ ಕಟ್ಟಿ ಸಂಭ್ರಮಿಸಿದರೆ ಮತ್ತೆ ಕಾರ ಹುಣ್ಣಿಮೆಯಂತಹ ಪ್ರತ್ಯೇಕ ಹಬ್ಬಗಳಲ್ಲಿ ದನಗಳಿಗೆ ಓಟದ ಸ್ಪರ್ಧೆ ನಡೆಸಿ
ಗೆದ್ದ ಹೋರಿಯನ್ನು ಇಡೀ ಊರಲ್ಲಿ ಮೆರವಣಿಗೆ ಮಾಡುತ್ತಿದ್ದೆವು. ಇನ್ನು ಮಣ್ಣೆತ್ತಿನ ಅಮಾವಾಸ್ಯೆಯ ದಿನ ನಮ್ಮ ರೈತಾಪಿ ಬದುಕಿಗೆ ನೆರವಾಗುವ ಮಣ್ಣಿನ ಎತ್ತುಗಳ ಪ್ರತಿರೂಪವನ್ನು ನಾವೆಲ್ಲ ಮಕ್ಕಳು ಸೇರಿ ತಯಾರಿಸಲು ಹಳ್ಳದ ದಂಡೆಯಿಂದ ಹದವಾಗಿ ಜಿಗುಟು ಮಣ್ಣನ್ನು ತಂದು ಹದವಾಗಿ ನಾದಿ ಮುದ್ದಾದ ಬಸವಣ್ಣನ ಮೂರ್ತಿಗಳನ್ನು ತಯಾರಿಸಿ ಪೂಜಿಸಲು ಅಮ್ಮನ ಬಳಿ ಕೊಡುತ್ತಿದ್ದೆವು.

ಇನ್ನು ಬೇಸಿಗೆ ರಜದಲ್ಲಿ ಮನೆಗೆ ವರ್ಷಕ್ಕೆ ಬೇಕಾಗುವ ಕಟ್ಟಿಗೆ ತಂದು ಹಾಕುವುದು, ದಂದಕ್ಕಿ ( ದನದ ಹಕ್ಕಿ) ಯ ಕಸ ಹೊಡೆಯಲು ಬೇಕಾಗುವ ಬರಲುಗಳನ್ನು ತಯಾರಿಸುವ ಬಂದರಕಿ ಕಟ್ಟಿಗೆಯನ್ನು ಸಂಗ್ರಹಿಸುವುದು ಕೂಡ ನಮ್ಮ ಕೆಲಸವಾಗಿತ್ತು. ಊರಿಗೆ ಹತ್ತಿರದ ಗುಡ್ಡಗಾಡಿನಲ್ಲಿ ಸಿಗುವ ಕಟುಗ( ಒಂದು ರೀತಿಯ ಗರುಸಿನಂತಹ ವಸ್ತು )ನ್ನು ತಂದು ದನದ ಹಕ್ಕಿಯನ್ನು ಸಮತಟ್ಟಾಗಿಸಿ ದನ ಕರುಗಳು ಆರಾಮಾಗಿ ಮಲಗಲು ಅನುಕೂಲವಾಗುವಂತೆ ಮಾಡುತ್ತಿದ್ದೆವು. ದನ ಕರುಗಳು, ನಾಯಿ, ಕುರಿ, ಕೋಳಿ ಹೀಗೆ ಮನೆಯಲ್ಲಿ ಎಲ್ಲ ಪ್ರಕಾರದ ಜೀವಿಗಳೊಂದಿಗೆ ನಮ್ಮ ಸಹ ಜೀವನ ಸಾಗುತ್ತಿತ್ತು.

ಇನ್ನು ವರ್ಷಕ್ಕೊಮ್ಮೆ ಊರ ಜಾತ್ರೆ,ಉತ್ಸವಗಳಲ್ಲಿ ಆಡುವ ದೊಡ್ಡಾಟ, ಬಯಲಾಟ,ನಾಟಕಗಳು ನಮ್ಮ ಪಾಲಿನ ಅತಿ ದೊಡ್ಡ ಮನರಂಜನೆಗಳಾದರೆ, ಪ್ರತಿ ವಾರದ ಸಂತೆಯಲ್ಲಿ ಹಾವಾಡಿಗರು, ಕರಡಿ ಕುಣಿತದವರು, ಸುಡುಗಾಡ ಸಿದ್ದರು, ಭವಿಷ್ಯ ಹೇಳುವ ಬಾಲಬಸವರು, ಮುಳ್ಳಾವಿಗೆಯ ಮೇಲೆ ಗಂಟೆಗಟ್ಟಲೆ ನಿಲ್ಲುವ ಸನ್ಯಾಸಿಗಳು, ವೇಷಗಾರರು, ದೊಂಬರಾಟಗಾರರು,ಮೋಡಿ-ಕಣ್ ಕಟ್ಟು ಮಾಡುವವರು, ದುರ್ಗ ಮುರುಗಿಗಳು, ಆಗಾಗ ಪೆಟ್ಟಿಗೆಯೊಂದರಲ್ಲಿ ಮಾಯಾ ಬಜಾರ್ ತೋರಿಸುವವನು ಬಾಂಬೈ ಬಜಾರ ನೋಡು ಎಂದು ರಾಗವಾಗಿ ಹೇಳುತ್ತಾ ಮನೆಯ ಬಳಿ ಸುಳಿಯುವವರು ನಮಗೆ ಮನರಂಜನೆ ನೀಡುತ್ತಿದ್ದರು. ಬೆನ್ನಿಗೆ ಮಗುವನ್ನು ಕಟ್ಟಿಕೊಂಡು ತಲೆಯ ಮೇಲೆ ದೇವಿಯ ಮೂರ್ತಿಯ ಪುಟ್ಟಿಯನ್ನು ಹೊತ್ತ ಹೆಣ್ಣು ಮಕ್ಕಳು ಕೊರಳಿಗೆ ನೇತು ಹಾಕಿಕೊಂಡ ಡೋಲನ್ನು ಬಾರಿಸುತ್ತಾ ಬಂದರೆ ಓಡಿ ಹೋಗಿ ಆಕೆಯ ಮುಂದೆ ನಾವು ನಿಲ್ಲುತ್ತಿದ್ದೆವು… ಕೆಲವೊಮ್ಮೆ ಆಕೆಗೆ ಗೊತ್ತಿಲ್ಲದೆ ಹತ್ತಿಗೆ ಕೊಬ್ಬರಿ ಎಣ್ಣೆ ಸವರಿ ಆಕೆಯ ಡೋಲಿನ ಚರ್ಮಕ್ಕೆ ಹಚ್ಚಿ ಆಕೆ ಬಾರಿಸಿದಾಗ ಶಬ್ದ ಬಾರದಂತೆ ಆದಾಗ ಆಕೆ ಪರದಾಡುವುದನ್ನು ನೋಡಿ ಮುಸಿಮುಸಿ ನಕ್ಕು ಆಕೆಯ ಬೈಗುಳಿಗೆ ನಾವು ಪಾತ್ರರಾದರೆ, ಮನೆಯಲ್ಲಿನ ಅಜ್ಜಿ, ಅಮ್ಮಂದಿರು ಆಕೆಯ ಜೋಳಿಗೆಗೆ ತುಸು ಹೆಚ್ಛೇ ಜೋಳ ಹಾಕಿ ಸಮಾಧಾನ ಮಾಡುತ್ತಿದ್ದರು.

ಸಾಯಂಕಾಲದ ಸಮಯದಲ್ಲಿ ಸೊಳ್ಳೆ ಓಡಿಸಲು ದಂದಕ್ಕಿಯಲ್ಲಿ ಒಂದು ಪುಟ್ಟಿಯಲ್ಲಿ ಹಾಕಿ ಉರಿ ಹಚ್ಚಿ ಹೊಗೆ ಎಬ್ಬಿಸುವುದರಿಂದ ಸೊಳ್ಳೆ ಕ್ರಿಮಿ ಕೀಟಗಳ ಬಾಧೆಯಿಂದ ತಪ್ಪಿಸಿಕೊಳ್ಳಲು ಊರ ಹೊರಗಣ ಗುಡ್ಡಗಳಲ್ಲಿರುವ ದೇವಸ್ಥಾನಗಳನ್ನು ನೋಡಲು ಹೋದಾಗ ಅಲ್ಲಿ ದೊರೆಯುವ ತೆಪ್ಪ ಎಂಬ ಹಸಿ ಇಲ್ಲವೇ ಒಣ ಹುಲ್ಲನ್ನು ಆಯ್ದು ತರುವ ಕೆಲಸ ನಮ್ಮದೇ.

ಈಗ ಹೇಳು! ವಿದ್ಯುನ್ಮಾನ ಯಂತ್ರಗಳೇ ಜೀವನ ಎಂದುಕೊಂಡು ಯಂತ್ರಗಳ ಜೊತೆ ಯಂತ್ರವಾಗಿ ಜೀವನ ಸಾಗಿಸುತ್ತಿರುವ ನೀವು ನಮ್ಮಷ್ಟು ಜೀವಂತಿಕೆಯ ಬದುಕನ್ನು ಸಾಧಿಸುತ್ತಿದ್ದೀರಾ ಎಂದು?
ನಮ್ಮ ಆಟ ಪಾಠ, ಊಟ ನೋಟ ಬದುಕಿನ ಒಳನೋಟ ಮನರಂಜನೆಗಳು ನಾವು ಇರುವ ಪರಿಸರದಲ್ಲಿಯೇ ಇದ್ದವು.

ಸುಧೀರ್ಘವಾಗಿ ವಿವರಿಸಿದ ಅಜ್ಜನ ಮೇಲೆ ಅಭಿಮಾನ ಉಕ್ಕಿದ ಮೊಮ್ಮಗ ಆತನನ್ನು ಪ್ರೀತಿಯಿಂದ ತಬ್ಬಿ ಅಜ್ಜಾ! ಅದೆಷ್ಟು ಚಂದದ ಬಾಲ್ಯ ನಿಮ್ಮದು… ರಿಯಲಿ ಯು ಹ್ಯಾವ್ ಹ್ಯಾಡ್ ವಂಡರ್ಫುಲ್ ಗೋಲ್ಡನ್ ಡೇಸ್! ಎಂದು ಖುಷಿಯಿಂದ ಹೇಳಿದರೆ ಅಜ್ಜ ಮೊಮ್ಮಗನ ಮೈದಡವಿ ಕೆಲ ಘಳಿಗೆಗಳ ಕಾಲ ನನ್ನನ್ನು ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಲು ನೀನು ಕಾರಣವಾದೆ ಎಂದು ಆರ್ದ್ರರಾಗಿ ಹೇಳಿದರು.

“ಮಗು! ನಾವು ಎರಡು ತಲೆಮಾರುಗಳ ನಡುವಿನ ಅಂತರವನ್ನು ಅರಿತವರಾಗಿದ್ದೇವೆ. ನಮ್ಮ ಜ್ಞಾನದ ಉಪಯೋಗ ಪಡೆದುಕೊಳ್ಳಿ, ನಮ್ಮಿಂದ ಕಲಿಯಿರಿ.. ಬಹುಶಹ ನಮ್ಮಂತೆ ನೀವು ಬದುಕಲು ಸಾಧ್ಯವಿಲ್ಲ,ಆದರೆ ನಮ್ಮ ಅನುಭವಗಳು ನಿಮಗೆ ದಾರಿ ದೀಪಗಳಾಗುತ್ತವೆ, ಹಳೆಯದೆಲ್ಲವೂ ತಪ್ಪು,ಹೊಸದೆಲ್ಲವೂ ಸರಿ ಎಂಬ ಭಾವನೆ ನಿಜವಲ್ಲ. ಹಳೆಯ ಮತ್ತು ಹೊಸ ವಿಷಯಗಳ ಸಂಗಮ ನೀವಾಗಬೇಕು. ಹಳೆಯ ಮೌಲ್ಯಗಳ ಜೊತೆ ಜೊತೆಗೆ ಆಧುನಿಕ ವಿಚಾರಧಾರೆಯ ಧನಾತ್ಮಕ ಅಂಶಗಳ ಮಾನವೀಯ ಪ್ರಜ್ಞೆ ನಿಮ್ಮದಾಗಬೇಕು. ಅಂತಹ ಅದ್ಭುತ ಜನಾಂಗ ನೀವಾಗುತ್ತೀರಲ್ಲವೇ ಎಂದು ಅಜ್ಜ ಪ್ರೀತಿಯಿಂದ ಮೊಮ್ಮಗನ ಮೈದಡವಿದಾಗ ಖಂಡಿತವಾಗಿಯೂ ಅಜ್ಜ ಎಂದು ತನ್ನ ಬಲ ಹೆಬ್ಬೆರಳನ್ನು ಮೇಲೆ ಮಾಡಿದ ಮೊಮ್ಮಗ.

– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.