- ಸಿದ್ಧಾಪುರ ಶಿವಕುಮಾರ್

ಹೆಸರು ನಾಗಣ್ಣ. ಚಿತ್ರದುರ್ಗದ ವಾಸಿ. ವಯಸ್ಸು ಅರವತ್ತು ದಾಟಿದೆಯಾದರೂ, ಎತ್ತರವಿಲ್ಲದ ದೈಹಿಕತೆ ಮತ್ತು ಲವಲವಿಕೆ ಅದನ್ನು ಮರೆಮಾಚಿದೆ. ವೃತ್ತಿಯಿಂದ ಬೀದಿ ವ್ಯಾಪಾರಿ. ಜೊತೆಗೆ ಪೋಟೋ ಪ್ರೇಂ ಕಟ್ಟೊದು ಬರುತ್ತೆ. ಸ್ವಭಾತಃ ಸ್ವಾಭಿಮಾನಿ. ಹಾಸ್ಯಪ್ರಜ್ಞೆಯ ಪಂಚಿಂಗ್ ಮಾತುಗಳಿಂದ ನಗಿಸುವುದು ಗೊತ್ತು. ದಿನದ ದುಡುಮೆಯೇ ಜೀವನಕ್ಕೆ ಆಧಾರ. ನಾಗಣ್ಣಗೆ ಗಂಡು ಮಕ್ಕಳಿಲ್ಲ. ಒಬ್ಬ ಮಗಳು ಇದ್ದಾಳೆ. ಆಕೆಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದಾರೆ. ಬೆಂಗಳೂರಿನಲ್ಲಿ ಗಂಡನ ಜೊತೆಗೆ ಸಂಸಾರ ಮಾಡುತ್ತಿದ್ದಳೆಂದು ಕೇಳಿದ್ದೇವು. ಹೀಗಿರುವಾಗ ದಿನ ಕಾಣುವ ನಾಗಣ್ಣ, ವಾರದ ಕಾಲ ಕಾಣಿಸಲಿಲ್ಲ. ಆತ ಮೊಬೈಲ್ ಬಳಕೆದಾರನೂ ಅಲ್ಲ. ನಂತರ ಕಂಡು “ಎಲ್ಲಿ ಹೋಗಿದ್ರಿ” ಎಂದಾಗ, “ಬೆಂಗಳೂರಿಗೆ ಹೋಗಿದ್ದೆ ನನ್ನ ಮಗಳ ಗಂಡ ನನ್ನ ಅಳಿಯ ತೀರಿಕೊಂಡಿದ್ದ. ಆ ಕಾರ್ಯವೆಲ್ಲ ಮುಗಿಸಿ ಬಂದೆ” ಎಂದು ಮುಗ್ಧನಂತೆ ನಾಗಣ್ಣ ಹೇಳುವಾಗ ಸ್ವಲ್ಪವೂ ವಿಚಲತೆ ಇರಲಿಲ್ಲ. ಅಯ್ಯೊ ದೇವ್ರೆ ಗಾಯದ ಮೇಲೆ ಬರೆಯೇ? ಎನಿಸಿ, “ಇನ್ಮುಂದೆ ಮಗಳು ಮೊಮ್ಮಕ್ಕಳ ಗತಿಯೇನು” ಎಂದರೆ ನಮ್ಮ ಮಗಳು ಎಂಟಿಆರ್ ಫ್ಯಾಕ್ಟರಿ ಕೆಲ್ಸಕ್ಕೆ ಹೋಗ್ತಾಳೆ. ನನ್ನ ಹೆಂಡ್ತಿ ಈಗ ಮಗಳ ಜೊತೆಗೆ ಇದ್ದಾಳೆ. ನಾನು ಹಾಗಾಗ ಹೋಗಿ ಬರ್ತಿನಿ. ದೇವರು ಇದಾನಲ್ಲ ಅಣ್ಣಾರೆ.. ಎಂದ ನಾಗಣ್ಣನ ಆತ್ಮವಿಶ್ವಾಸ ಕಂಡು ಆಶ್ಚರ್ಯವಾಯ್ತು. ಬಡತನದಲ್ಲಿದ್ದು ಅದರ ಸಂಕಟ ಅನುಭವಿಸುತ್ತಿರುವಾಗಲೇ ಕುಟುಂಬಕ್ಕೆ ಆಧಾರವಾಗಿದ್ದವರು ದಿಢೀರನೆ ಅಕಾಲಿಕ ಮರಣ ಹೊಂದಿದರೆ, ಆ ದುಸ್ಥಿತಿ ದೇವರಿಗೆ ಗೊತ್ತು ಬಿಡಿ. ನಾಗಣ್ಣ ಒಬ್ಬ ಮನುಷ್ಯನಾಗಿ ನೋವು ತುಂಬಿಕೊಂಡಿದ್ದರೂ, ಹಂಚಿಕೊಳ್ಳದೆ ಸ್ವಾಭಿಮಾನ ಮೆರೆದರು ಎನಿಸಿತ್ತು. ಬೇರೆ ಯಾರಾದರೂ ಆಗಿದ್ರೆ, ಇದೇ ವಿಚಾರವನ್ನೆ ನೆಪವೊಡ್ಡಿ ಸಹಾಯ ನೆರವು ಕೇಳೋರು. ಆದರೆ ನಾಗಣ್ಣ ಅಪ್ಪಿತಪ್ಪಿಯೂ ಹೀಗೆ ಮಾಡದೆ, ಆತ್ಮಗೌರವ ಉಳಿಸಿಕೊಂಡಿದ್ದು ತಿಳಿದು ನಾಗಣ್ಣನ ಮೇಲೆ ಗೌರವ ಮೂಡಿತು. ಮತ್ತೊಮ್ಮೆ ಕಾಣಸಿಗದಿದ್ದಾಗ, “ಎಲ್ಲಿ ಹೋಗಿದ್ರಿ ನಾಗಣ್ಣ” ಎಂದರೆ, ನಮ್ಮ ಮೊಮ್ಮಗ ತುಂಬಾ ಎತ್ತರದಿಂದ ಮೋರಿ ಚರಂಡಿಯ ಎಣಿಗೆ ಬಿದ್ದು ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿತ್ತು. ಅದಕ್ಕೆ ಬೆಂಗಳೂರಿಗೆ ಹೋಗಿದ್ದೆ. ಮೊಮ್ಮಗ ತುಂಬಾ ನೋವು ಪಡ್ತಿದ್ದ, ಮೆಡಿಕಲ್ ಸ್ಟೋರಲ್ಲಿ ಸಿಗುವ ಮೂ ಆಯಿಂಟ್ಮೆಂಟು ಹಚ್ಚಿ ಹಚ್ಚಿ ಸಮಾಧಾನ ಪಡಿಸ್ದೆ. ಎದ್ದು ಓಡಾಡುವಂತೆ ಆಗಿ ಬಿಟ್ಟ, ಈಗ ಮಾಮೂಲಾಗಿ ಬೆಳಗ್ಗೆನೇ ಎದ್ದು ಪೇಪರ್ ಹಾಕೋಕೆ ಹೋಗ್ತಾನೆ. ಅದಕ್ಕೆ ಇವತ್ತು ದುರ್ಗಕ್ಕೆ ಬಂದೆ” ಎಂದ ನಾಗಣ್ಣನ ಆ ನಗುವಿನಲ್ಲಿನ ನಿರಾಳತೆ ನನಗಂತೂ ಕಾವ್ಯದಂತೆ ಕಂಡಿತು. ಅಸಾಯಕರು ದೊಡ್ಡ ಅಪಾಯಗಳಿಂದ ಪಾರಾದ್ರೆ ಅದಕ್ಕಿಂತ ಖುಷಿ ಇನ್ನೇನಿದೆ. ಮೊಮ್ಮಗ ದಿನ ಬೆಳಗ್ಗೆ ಎದ್ದು ಪೇಪರ್ ಹಾಕೋಕೆ ಹೋಗ್ತಾನೆ ಎಂಬುದು ನಾಗಣ್ಣನಿಂದ ತಿಳಿದು ನನಗನಿಸಿದ್ದು, ಹಣವಂತರು ತಮ್ಮ ಮಕ್ಕಳಿಗೆ ಸುಲಭವಾಗಿ ಒದಗಿಸುವ ಸಕಲ ಸೌಲಭ್ಯಗಳಿಂದ ಅವರಿಗೆ ಅರಿವಿಲ್ಲದೆ ತಲೆಗೆ ಅಹಂಕಾರ ತುಂಬಿ ಬದುಕಿನ ಮೌಲ್ಯಗಳು ತಿಳಿಯದಂತಾಗುತ್ತವೆ. ಆದರೆ ಬಡತನದ ಹಲವು ಕೊರತೆಗಳು ತಮ್ಮನ್ನು ನೀಗಿಸಿಕೊಳ್ಳಲು ಪ್ರೇರೆಪಿಸಿ ಜೀವನದ ಜವಾಬ್ದಾರಿಯನ್ನು ಕಲಿಸುತ್ತವೆ. ಈ ಮೂಲಕ ಸಹಜವಾದ ಜೀವನ ಪ್ರೀತಿ ಮೈಗೂಡುವಂತಾಗುತ್ತದೆ. ಎಂಬೀ ಸತ್ಯದ ಸಂದೇಶವನ್ನು ನಾಗಣ್ಣನ ಒಬ್ಬತ್ತನೇ ತರಗತಿ ಓದುವ ಮೊಮ್ಮಗ ಪೇಪರ್ ಹಾಕಿ ಈ ಕಿರು ವಯಸ್ಸಿನಲ್ಲೆ ತನ್ನ ಸ್ವಾಭಿಮಾನದ ಶ್ರಮಿಕ ಜೀವನಕ್ಕೆ ಮುಂದಾಗಿದ್ದು ತಿಳಿದು ಮನದಟ್ಟಾಯ್ತು. ನಾಗಣ್ಣ ಚಿತ್ರದುರ್ಗದಲ್ಲಿ ವಾಸಿಸಲು ಯೋಗ್ಯವಲ್ಲದ ಸರ್ಕಾರ ಕಟ್ಟಿಸಿಕೊಟ್ಟಿರುವ ಚಿಕ್ಕ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪ್ರತಿದಿನವೂ ತಣ್ಣೀರಿನ ಸ್ನಾನ ಮಾಡುವ ನಾಗಣ್ಣ, ತನ್ನಲ್ಲಿರುವ ಬಟ್ಟೆಗಳನ್ನೆ ಅಚ್ಚುಕಟ್ಟಾಗಿ ತೊಳೆದುಕೊಂಡು ಧರಿಸುತ್ತಾರೆ. ತನ್ನ ಸೇವಿಂಗ್ ಕಟಿಂಗ್ ತಾನೇ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ನೀಟಾಗಿ ಕಾಣುವ ನಾಗಣ್ಣ ಅದೆಷ್ಟು ಚಂದ ಕಾಣ್ತರೆ ಅಂತೀರಿ…! ಯಥಾ ಪ್ರಕಾರ ದಿನಲೂ ಹೀಗೆಯೇ ತನ್ನ ದಿನಗೂಲಿ ವ್ಯಾಪಾರಕ್ಕೆ ಜಂಗಮವಾಣಿ ಇಲ್ಲದೆ ಬರಿಗಾಲಲ್ಲಿ ಈತ ನಡೆದೆ ಹೋಗಿ ಬರುವ ಈತ ಚಪ್ಪಲಿ ಹಾಕದೆ ನಡೆದಾಡುವ ಪರಿಪಾಠ. ದಿನಲೂ ದಾರಿ ಮಧ್ಯೆ ಸರ್ಕಾರದ ಇಂದಿರಾ ಕ್ಯಾಂಟಿನ್ ತಿಂಡಿ ತಿನ್ನುವ ನಾಗಣ್ಣಗೆ ಯಾವ ದಿನ ಯಾವ ಮೇನು ಇರುತ್ತೆ ಎಂಬುದು ಸರಿಯಾಗಿ ಗೊತ್ತಿರುತ್ತೆ. ಇದನ್ನೆಲ್ಲ ತನ್ನ ಬದುಕಿನ ಪರಿಸ್ಥಿತಿಗೆ ಅನುಗುಣವಾಗಿ ಅಭ್ಯಾಸ ಮಾಡಿಕೊಂಡಿದ್ದಾರೆ ವಿನಃ, ನಾಗಣ್ಣಗೆ ಇದೊಂದು ಸರಳತೆ, ಆದರ್ಶ, ಅಥವಾ ಸಿದ್ಧಾಂತ ಎಂಬುದರ ಪರಿವೇ ಇಲ್ಲ. ಎಂಥದ್ದೇ ಸಂದರ್ಭವಾಗಿದ್ದರೂ ಸರಿ ಮುಖದಲ್ಲಿ ಮಂದಹಾಸ ತುಂಬಿಕೊಳ್ಳುವ ಸದಾ ಸಮಾಧಾನಿ. ಓದು ಬರಹ ಅರಿಯದ ಈತ ಅನಕ್ಷರಸ್ಥನಾಗಿದ್ದರೂ, ಈ ಮಟ್ಟದ ಆತ್ಮವಿಶ್ವಾಸ ಸ್ವಾಭಿಮಾನ ಜೀವನ ಪ್ರೀತಿ ನಿಜಕ್ಕೂ ಬೆರಗು ಮೂಡಿಸುವುದಲ್ಲದೆ ಮಾದರಿ ಎನಿಸದೇ ಇಲ್ಲ. ಕ್ರೂರ ಬಡತನ ಸಹಿಸಲಾರದೆ ಅನೇಕರು ಕಳ್ಳತನ ದರೋಡೆ ಕೊಲೆ ಮಾಡಲು ಮುಂದಾಗುವ ಸುದ್ದಿಗಳು ಇಂದಿನ ಸಾಮಾನ್ಯವಾಗಿರುವಾಗ, ನಾಗಣ್ಣನ ಸ್ವಾಭಿಮಾನ ಜೀವನ ಸಾಧಾರಣ ಎನಿಸದು. ಉನ್ನತ ಶಿಕ್ಷಣವಂತರಾಗಿ ಎಲ್ಲಾ ರೀತಿಯ ಅನುಕೂಲಗಳು ಇದ್ದರೂ ಮೌಲ್ಯಗಳ ಅರಿವಿಲ್ಲದೆ ಅಹಂಕಾರದ ಹೊಣೆಗೇಡಿಗಳಂತೆ ಬದುಕುವವರನ್ನು ಕಾಣುವುದರ ನಡುವೆ ನಾಗಣ್ಣ ಸಂತನಂತೆ ಕಾಣುತ್ತಾರೆ! ಎಂದರೆ ಖಂಡಿತವಾಗಿ ಅತಿಶಯವಿಲ್ಲ. ಹೀಗೆ ನನ್ನ ಹಲವು ಕುತೂಹಲ ಅಚ್ಚರಿಗಳ ಮೊತ್ತವಾಗಿ ಕಾಣುತ್ತಾರೆ ನಾಗಣ್ಣ! ಈ ಕಾರಣಕ್ಕಾಗಿಯೇ ನಾಗಣ್ಣ ಸಿಕ್ಕರೆ ಇರುವೆಗೆ ಸಕ್ಕರೆ ಸಿಕ್ಕಂತೆ ನನಗೆ. ಆದ್ದರಿಂದಲೇ ನಮ್ಮಿಬ್ಬರ ಪಾಲಿಗೆ ಊಟ ತಿಂಡಿ ಟೀ ಕಾಫಿಗಳು ನೆಪವಾಗುತ್ತಲೇ ಇರುತ್ತವೆ.
- ಸಿದ್ಧಾಪುರ ಶಿವಕುಮಾರ್

