ಕೆಂಭಾವಿ: ರಾಜ್ಯದ ಪ.ಜಾತಿ/ಪ.ಪಂ ಜನರ ಸರ್ವಾಂಗೀಣ ಪ್ರಗತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ
ವಿವಿಧ ಬೇಡಿಕೆಗಳನ್ನೊಳಗೊಂಡ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಉಪತಹಸೀಲ್ದಾರವರ ಮೂಲಕ ಸಲ್ಲಿಸಲಾಯಿತು.
ಕ.ರಾ.ದ.ಸ. ಸಮಿತಿಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಈ ಬಾರಿ ಪ್ರತಿಯೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಮತಗಳು ಚಲಾವಣೆ ಮಾಡಿ ತಮ್ಮ ಪಕ್ಷಕ್ಕೆ ಬೆಂಬಲ ನೀಡಿತ್ತು. ಸಾಮಾಜಿಕ ನ್ಯಾಯ ಈಡೇರಿಸುವ ಜನಪ್ರಿಯ ಮತ್ತು ಬದ್ಧತೆಯಿರುವ ಮುಖ್ಯಮಂತ್ರಿಗಳು ತಾವಾಗಿದ್ದು, ತಮ್ಮ ಆಡಳಿತಾವಧಿಯಲ್ಲಿ ರಾಜ್ಯದ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮತ್ತು ಸಮಸ್ತ ಶೋಷಿತ ಸಮುದಾಯಗಳ ಸರ್ವಾಂಗೀಣ ಪ್ರಗತಿ ಆಗಬೇಕಿದೆ.
ಸಂವಿಧಾನಕ್ಕೆ ತರಲಾಗಿರುವ 93ನೇ ತಿದ್ದುಪಡಿಯನ್ವಯ ಉನ್ನತ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಾತಿ, ಹಾಸ್ಟೆಲ್ ಗಳ ಮೂಲಭೂತ ಸೌಕರ್ಯ ಪೂರೈಕೆ, ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸುವ ಎಲ್ಲಾ ಎಸ್ಸಿ/ ಎಸ್ಟಿ ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶ, ನಾಗರೀಕ ಹಕ್ಕುಗಳ ರಕ್ಷಣೆ ಕಾಯ್ದೆ, ದೌರ್ಜನ್ಯ ತಡೆ ಕಾಯ್ದೆ ಸಮರ್ಪಕ ಅನುಷ್ಠಾನ, ಅಪರಾಧಗಳ ಪತ್ತೆ ಮತ್ತು ವಿಚಾರಣೆಗೆ ಪ್ರತ್ಯೇಕ ಸಮಿತಿಯನ್ನು ಸ್ಥಾಪನೆ, ಭೂ ಒಡತನ ಯೋಜನೆಯಲ್ಲಿ ಹಣ ಮಂಜೂರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಮಿತಿ ಹೆಚ್ಚಳ, ಪ್ರತಿ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ಭೂಮಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಹಕ್ಕೊತ್ತಾಯದ ಮನವಿಯನ್ನು ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಶಿವಶರಣ ನಾಗರಡ್ಡಿ, ಶಾಂತಪ್ಪ ಸಾಲಿಮನಿ, ಗೋಪಾಲ್ ತಳವಾರ, ಬಸವರಾಜ್ ಚಿಂಚೋಳಿ, ಶರಣಪ್ಪ ವಾಗಣಗೇರಿ, ಶಿವಪ್ಪ ಕಂಬಾರ, ರಮೇಶ ಬಡಿಗೇರ್, ಸಿದ್ದಾರ್ಥ, ಹಣಮಂತ ಬೊಮ್ಮನಳ್ಳಿ ಸೇರಿದಂತೆ ಸಮಿತಿ ಪದಾಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

