ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ | ಹೆಚ್ಚಾದ ಅಂತರ್ಜಲ | ಬೆಳೆಗಳ ರಕ್ಷಣೆ | ಕಡಿಮೆಯಾದ ಬಿಸಿಲ ಪ್ರಖರತೆ
ವಿಜಯಪುರ: ಜಲಸಂಪನ್ಮೂಲ ಸಚಿವರಾಗಿದ್ದಾಗ ಎಂ. ಬಿ. ಪಾಟೀಲರು ಕೈಗೊಂಡ ನೀರಾವರಿ ಯೋಜನೆಗಳು ಕರ್ನಾಟಕವಷ್ಟೇ ಅಲ್ಲ, ಪಕ್ಕದ ಮಹಾರಾಷ್ಟ್ರದ ಹತ್ತಾರು ಗ್ರಾಮಗಳಲ್ಲಿ ಬೇಸಿಗೆಯ ಬಿಸಲಿನ ಪ್ರಖರತೆಯನ್ನು ಕಡಿಮೆ ಮಾಡಿದೆ.
ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ಗಡಿ ಭಾಗದ ಗ್ರಾಮಗಳ ಕೆರೆಗಳಿಗೆ ನೀರು ಹರಿಸಲಾಗಿದ್ದು, ರಾಜ್ಯದ ವ್ಯಾಪ್ತಿಯ ಕೆರೆಗಳು ಭರ್ತಿಯಾಗಿ ಪಕ್ಕದ ಮಹಾರಾಷ್ಟ್ರದಲ್ಲಿ ಕನ್ನಡಿಗರೇ ಹೆಚ್ಚಾಗಿರುವ ಹತ್ತಾರು ಗ್ರಾಮಗಳ ಕೆರೆಗಳಿಗೂ ನೀರು ಸಿಗುವಂತೆ ಮಾಡಿದೆ. ಅಷ್ಟೇ ಅಲ್ಲ, ಈ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಾಗಲು ಮತ್ತು ಬೆಳೆಗಳ ರಕ್ಷಣೆಗೆ ಕಾರಣವಾಗಿದೆ.
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ ತಾಲೂಕಿನ ಮುಚ್ಚಂಡಿ, ಸಿದ್ಧನಾಥ, ಐಗನಾಳ-ಜಾಲ್ಯಾಳ ಖುರ್ದ, ಪಾಂಡಿಜೆರಿ, ತುರ್ಕ ಆಸಂಗಿ, ಸಂಖ, ಮೋಟೆವಾಡಿ, ಭೀವರ್ಗಿ, ಕರಜಗಿ, ಬೆಳ್ಳುಂಡಗಿ, ಬಾಲಗಾಂವ, ಹಳ್ಳಿ, ಸುಸಲಾದ, ಮೊರಬಗಿ, ಬೋರಗಿ, ಆಕಳವಾಡಿ ಮುಂತಾದ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಬರಪೀಡಿತ ಗ್ರಾಮಗಳೆಂದು ಹೊಂದಿದ ಹಣೆಪಟ್ಟಿಯನ್ನು ತೊಡೆದು ಹಾಕಿದೆ. ಈಗ ಅಲ್ಲಿನ ಕೆರೆಗಳಲ್ಲಿ ನೀರು ತುಂಬಿದ್ದು, ಜನ ಮತ್ತು ಜಾನುವಾರುಗಳ ದಾಹ ಇಂಗಿಸುತ್ತಿವೆ. ಬಿಸಿಲಿನ ಝಳಕ್ಕೆ ಪರಿಹಾರ ಎಂಬಂತೆ ಈಜು ಪ್ರೀಯರಿಗೂ ವರದಾನವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಖ ಗ್ರಾಮದ ಚಂದ್ರಶೇಖರ ಅಣ್ಣಪ್ಪ ರೇಬಗೊಂಡ ಮತ್ತು ತಿಕ್ಕುಂಡಿ ಗ್ರಾಮ ಸಾಕ್ಷಿಯಾಗಿದೆ. ಉಪಾಧ್ಯಕ್ಷ ಬಸವರಾಜ ಗಂಗನಗೌಡ ಪಾಟೀಲ ಹಾಗೂ ರಾಯಗೊಂಡ ಸೋಮಲಿಂಗ ರಾಚಗೊಂಡ, ಜತ ತಾಲೂಕಿನ ಜನರಿಗೆ ಮಹಾರಾಷ್ಟ್ರ ಸರಕಾರ ಕಳೆದ 40 ವರ್ಷಗಳಿಂದ ಮೈಶಾಳ ಯೋಜನೆಯಡಿ ನೀರಾವರಿ ಮಾಡುವುದಾಗಿ ನೀಡುತ್ತಿರುವ ಭರವಸೆ ಹುಸಿಯಾಗಿಯೇ ಉಳಿದಿದೆ. ಆದರೆ, ಕರ್ನಾಟಕದ ಜಲಸಂಪನ್ಮೂಲ ಸಚಿವರಾಗಿದ್ದ ಎಂ. ಬಿ. ಪಾಟೀಲರ ದೂರದೃಷ್ಟಿ ಮತ್ತು ತಮ್ಮದಷ್ಟೇ ಅಲ್ಲ ಪಕ್ಕದ ನಮ್ಮ ಬಗ್ಗೆಯೂ ಇರುವ ಪ್ರೀತಿಯಿಂದಾಗಿ ಈಗ ನಮ್ಮ ಭಾಗದಲ್ಲಿ ರೈತರ ಬಾಳು ಸುಧಾರಿಸಿದೆ. ಗುಳೆ ಹೋಗುತ್ತಿದ್ದ ನಮ್ಮ ಜನ ಈಗ ಕರ್ನಾಟಕದ ನೀರಾವರಿ ಯೋಜನೆಗಳ ಫಲವಾಗಿ ತಮ್ಮ ಜಮೀನಿನಲ್ಲಿ ಕಬ್ಬು, ದ್ರಾಕ್ಷಿ ಸೇರಿದಂತೆ ವಾಣಿಜ್ಯ ಮತ್ತು ಇತರ ಬೆಳೆಗಳನ್ನು ಬೆಳೆಯುತ್ತ ಬದುಕು ಕಟ್ಟಿಕೊಂಡಿದ್ದಾರೆ. ಗಡಿ ಭಾಗದ ಕೆರೆಗಳನ್ನು ತುಂಬಿರುವುದು ನಮಗೆ ಬೇಸಿಗೆ ಕಾಲದಲ್ಲಿಯೂ ನೀರಿನ ಕೊರತೆಯನ್ನು ನೀಗಿಸಿದೆ. ಅವರು ನಮ್ಮ ಪಾಲಿನ ದೇವರಾಗಿದ್ದಾರೆ. ಅವರು ಇನ್ನೂ ಹೆಚ್ಚಿನ ಜನಸೇವೆಯಲ್ಲಿ ತೊಡಗಿರಲಿ ಎಂದು ಸಂತಸ ವ್ಯಕ್ತಪಡಿಸಿದರು.
ನಮ್ಮ ಜಿಲ್ಲೆಯವರೇ ಆದ ಜಯಂತ ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದರು. ನಮ್ಮ ಭಾಗಕ್ಕೆ ನೀರಾವರಿ ಮಾಡುವಂತೆ ಸಚಿವರ ಮೂಲಕ ಸರಕಾರದ ಮೇಲೆ ಒತ್ತಡ ತಂದರೂ ಪ್ರಯೋಜನವಾಗಲಿಲ್ಲ. ಆಗ ನಮ್ಮ ಶಾಸಕರಾದ ವಿಕ್ರಮ ಸಾವಂತ ಜೊತೆಗೂಡಿ ಕರ್ನಾಟಕದ ಅಂದಿನ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲರನ್ನು ಭೇಟಿ ಮಾಡಿದಾಗ ಕೂಡಲೇ ಸ್ಪಂದಿಸಿ ನಮ್ಮ ಭಾಗದ ಕೆರೆಗಳಿಗೆ ನೀರು ಹರಿಸಿ, ಈ ಭಾಗಕ್ಕೆ ಶಾಶ್ವತ ಪರಿಹಾರ ಕಲ್ಪಿಸಿದ್ದಾರೆ. ಅವರು ಕರ್ನಾಟಕಕ್ಕೆ ಅಷ್ಟೇ ಅಲ್ಲ ನಮಗೂ ಜಲಸಂಪನ್ಮೂಲ ಸಚಿವರು ಎಂಬ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಟ್ಟಾರೆ, ಸರಕಾರ ಮತ್ತು ಜನಪ್ರತಿನಿಧಿಗಳು ಸರ್ವೇ ಜನೋ ಸುಖಿನೋ ಬವಂತಿ… ಎಂಬ ಆಶಯದಂತೆ ಕೆಲಸ ಮಾಡಿದರೆ ಜನರು ಗಡಿಮೀರಿ ಸ್ಮರಿಸುತ್ತಾರೆ ಎಂಬುದಕ್ಕೆ ಗಡಿ ಗ್ರಾಮಗಳ ಕೆರೆ ತುಂಬುವ ಯೋಜನೆ ಸಾಕ್ಷಿಯಾಗಿದೆ.
ಎಂ.ಬಿ.ಪಾಟೀಲ ರಂತಹ ಜನಪ್ರತಿನಿಧಿ ನಮಗೆ ಬೇಕು
ನಮ್ಮ ಪಾಲಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಬಿರು ಬಿಸಲಿನ ಬೇಸಿಗೆ ಅನುಭವ ತಪ್ಪಿದೆ. ಎಲ್ಲ ಕಡೆ ತಂಪಿನ ವಾತಾವರಣವಿದೆ. ಮಳೆಗಾಲದಲ್ಲೂ ಬತ್ತಿರುತ್ತಿದ್ದ ಕೆರೆಗಳಲ್ಲಿ ಇಂಥ ಬೇಸಿಗೆ ಕಾಲದಲ್ಲೂ ಕೆರೆಗಳಲ್ಲಿ ನೀರಿದೆ. ಭಾವಿಗಳಲ್ಲಿ ಜಲವಿದೆ. ಕೊಳವೆ ಭಾವಿಗಳು ಪುನಶ್ಚೇತನಗೊಂಡಿವೆ. ಮಹಾರಾಷ್ಟ್ರ ಸರಕಾರ ನಮ್ಮನ್ನು ನಿರ್ಲಕ್ಷಿಸಿದ್ದರು ಕರ್ನಾಟಕದಿಂದ ನಮಗೆ ಬಹು ಉಪಕಾರವಾಗಿದೆ. ಪ್ರತಿನಿತ್ಯ ನಮ್ಮ ಮನೆಯಲ್ಲಿ ಅವರ ಭಾವ ಚಿತ್ರಕ್ಕೆ ನಮಿಸುತ್ತ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂ. ಬಿ. ಪಾಟೀಲರಂಥ ಜನಪ್ರತಿನಿಧಿಗಳು ನಮಗೆ ಬೇಕು. ಅಂಥವರು ಸದಾ ಜನ ಸೇವೆಯಲ್ಲಿರಬೇಕು ಎಂದು ಮಹಾರಾಷ್ಟ್ರದ ರೈತರಾದ ಬಂದೇನವಾಜ ಸುತಾರ, ರಾಕೇಶ ಕಾಂಬಳೆ, ಉಮೇಶ ಕೌತಾಳಕರ ತಮಗೆ ಉಪಕಾರ ಮಾಡಿದವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.