ಬಸವನಬಾಗೇವಾಡಿ: ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ನಂದಿ ಮಠದ ಗುರುವೀರಸಿದ್ಧ ಶಿವಯೋಗಿಗಳ ೭೩ ನೇ ಜಾತ್ರಾಮಹೋತ್ಸವದಂಗವಾಗಿ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮ,ಸಡಗರದಿಂದ ಜರುಗಿದವು.
ಜಾತ್ರೆಯಂಗವಾಗಿ ಬೆಳಗ್ಗೆ ಕರ್ತೃ ಗದ್ದುಗೆಗೆ ಪೂಜೆ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಜರುಗಿದ ನಂತರ ಜಂಗಮ ವಟುಗಳಿಗೆ ಅಯ್ಯಾಚಾರ ವಿವಿಧ ಶ್ರೀಗಳ ಸಮ್ಮುಖದಲ್ಲಿ ಜರುಗಿತು. ಆನಂದಯ್ಯ ಸ್ಥಾವರಮಠ ಇವರ ವೈದಿಕತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಸಿದ್ಧ ಶಿವಯೋಗಿಗಳವರ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಗಳ ಭಾವಚಿತ್ರದ ಮೆರವಣಿಗೆ ಜರುಗಿತು.
ಮೆರವಣಿಗೆಯಲ್ಲಿ ನಂದಿ ಮಠದ ವೀರಸಿದ್ಧ ಸ್ವಾಮೀಜಿ, ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಚಡಚಣದ ಷಡಕ್ಷರಿ ಸ್ವಾಮೀಜಿ, ಕೊಣ್ಣೂರಿನ ಬ್ರಹ್ಮಪ್ರಭುಲಿಂಗ ಶಿವಾಚಾರ್ಯರು, ಕೊರವಾರದ ಶ್ರೀಗಳು, ಜೆಡಿಎಸ್ ಮುಖಂಡ ರಾಜುಗೌಡ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಡೆಂಗಿ, ಸಿದ್ದನಗೌಡ ಪಾಟೀಲ, ವೈ.ಎಸ್.ಗಂಗಶೆಟ್ಟಿ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ ಹೆಬ್ಬಾಳದ ಪುರುವಂತರು, ಧಾರವಾಡದ ಜಗಲಿ ತಂಡದವರು, ಸಾರವಾಡದ ಗೊಂಬೆ ಕುಣಿತ, ಬೇನಾಳ ಗ್ರಾಮದ ಲೇಝಿಮ್ ತಂಡ, ಕಾಖಂಡಕಿಯ ಕರಡಿಮಜಲು ಸೇರಿದಂತೆ ವಿವಿದ ಕಲಾ ತಂಡಗಳು ಮೆರವಣಿಗೆ ಮೆರಗು ಹೆಚ್ಚಿಸಿದವು.
ಮಧ್ಯಾನ್ಹ ೧ ಗಂಟೆಗೆ ಹೆಬ್ಬಾಳ ಗ್ರಾಮದ ಸದ್ಭಕ್ತರು ಸಿದ್ದಪಡಿಸಿದ ಅಗ್ನಿಕುಂಡದ ಅಗ್ನಿಶಮನ ಶ್ರೀಮಠದ ವೀರಸಿದ್ಧ ಸ್ವಾಮೀಜಿ ಹಾಗೂ ಪುರವಂತರಿಂದ ಅಪಾರ ಭಕ್ತರ ಜಯಘೋಷದೊಂದಿಗೆ ಜರುಗಿತು. ಸದ್ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಉತ್ಸವ ಮೂರ್ತಿ ಹಾಗೂ ಕೊಡೆ ಕಳಸ ಬರಮಾಡಿಕೊಂಡ ನಂತರ ಅಪಾರ ಭಕ್ತರ ಜಯಘೋಷದೊಂದಿಗೆ ರಥೋತ್ಸವ ಜರುಗಿತು.
ರಾತ್ರಿ ರಂಗುರಂಗಿನ ಮದ್ದು ಸುಡುವ ಕಾರ್ಯಕ್ರಮ ಜನರ ಮನಸೂರೆಗೊಂಡಿತು. ರಾತ್ರಿ ೧೦ ಗಂಟೆಗೆ ಬಸವನಬಾಗೇವಾಡಿಯ ಬಸವೇಶ್ವರ ಬಯಲಾಟ ಸಂಘದಿಂದ ರೇಣುಕಾ ಯಲ್ಲಮ್ಮ ಬಯಲಾಟ ಪ್ರದರ್ಶನವಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment