– ಎಚ್.ಎಸ್.ನಡುವಿನಮನಿ
ತಾಳಿಕೋಟಿ: ತಾಲ್ಲೂಕಿನ ತಮದಡ್ಡಿ ಗ್ರಾಮದಲ್ಲಿ ಮೂಹರಂ ಕೊನೆಯ ದಿನದಂದು ಸರ್ವ ಧರ್ಮೀಯರು ಪಾಲ್ಗೊಂಡು ಅತ್ಯಂತ ವಿಜ್ರಂಭಣೆಯಿಂದ ಅರ್ಥ ಪೂರ್ಣವಾಗಿ ಮೊಹರಂ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಜೇಸಾ ಮುಲ್ಲಾ ಇಬ್ರಾಹಿಂ ಮುಲ್ಲಾ, ನಬೀಸಾ ಮುಲ್ಲಾ, ದಸಗೀರ ಮುಲ್ಲಾ ಮೈನೂ, ಸಲಿಮ್ ಮುಲ್ಲಾ , ಸಾಹೇಬಗೌಡ ಯಾದಗಿರಿ, ಮಹಮ್ಮದ್ ಹಿರೂರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಬಿರಾದಾರ ಹಾಗೂ ಗ್ರಾಮದ ಮುಖಂಡರು ಹಾಗೂ ಯುವಜನ ಉಪಸ್ಥಿತರಿದ್ದರು.
ಮೊಹರಂ ಹಿನ್ನೆಲೆ: ಏಳನೇ ಶತಮಾನದಲ್ಲಿ, ಮಹಮದ್ ಪೈಗಂಬರರ ಮೊಮ್ಮಕ್ಕಳಾದ ಹುಸೇನ್ ಹಾಗೂ ಅವರ ಸಂಗಡಿಗರು ಯಜೀದನೆಂಬುವವನ ವಿರುದ್ಧ, ಕರ್ಬಲಾ ಮೈದಾನದಲ್ಲಿ ಲಡಾಯಿ ಮಾಡುತ್ತ ಜೀವಬಿಟ್ಟರು. ಇದರ ಶೋಕಾಚರಣೆಯ ಭಾಗವಾಗಿ ಮೊಹರಂ ಆಚರಣೆ ಶುರುವಾಯಿತು. ಕರ್ಬಲಾ ವೀರರ ಸಾವು ದಾರುಣ ಸಂಗತಿಯಾಗಲು ಕಾರಣ, ಅವರ ತಲೆಕಡಿದು ಮೆರವಣಿಗೆ ಮಾಡಲಾಯಿತು. ಜತೆಯಿದ್ದ ಎಳೆಗೂಸುಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತ ಸತ್ತರು. ಮಹಿಳೆಯರು ದುಃಖದಿಂದ ಪರಿತಪಿಸಿದರು. ಇದನ್ನು ಜನಪದರು “ಧರಮಕ ಸತ್ತವರಾ ಕೋಟಿಗೊಬ್ಬ ಜನರಾ, ಆರಾಣ್ಯಾದಾಗ ಅವರಾ ಕಾಣದ ಮೂರು ದಿವಸ ನೀರಾ, ಕುಡದಾರೋ ಕಣ್ಣೀರಾ ಮಕ್ಕಳು ಹುಡುಗರು ಹೆಂಗಸರಾ” ಎಂದು ಹಾಡಿರುವುದುಂಟು. ಇಂತಹ ದುಗುಡದ ನೆನಪಿನಲ್ಲಿ ಹುಟ್ಟಿದ ಧಾರ್ಮಿಕ ಆಚರಣೆಯೊಂದು ಕರ್ನಾಟಕದಲ್ಲಿ ಸಾಂಸ್ಕೃತಿಕ ಆಚರಣೆಯಾಗಿ ರೂಪಾಂತರ ಪಡೆಯಿತು. ಉತ್ತರ ಕರ್ನಾಟದಲ್ಲಿ ಎಲ್ಲ ಧರ್ಮದ ಜಾತಿಯ ಜನರು ಒಟ್ಟಾಗಿ ಆಚರಿಸುವ ಊರಹಬ್ಬವಾಯಿತು. ಹೀಗಾಗಿ ಮುಸ್ಲಿಮರೇ ಇಲ್ಲದ ನೂರಾರು ಊರುಗಳಲ್ಲೂ ಮೊಹರಂ ನಡೆಯುತ್ತದೆ.
ಮೊಹರಂನಲ್ಲಿ ಶೋಕಗೀತೆಯ ರಚನೆ, ಹಾಡಿಕೆ, ಕುಣಿತ, ವೇಷಗಾರಿಕೆ, ಮೆರವಣಿಗೆ, ವಿಶೇಷ ಆಹಾರಗಳ ಆಯಾಮಗಳಿವೆ. ಇದರ ಫಲವಾಗಿ ಕರ್ನಾಟಕದಲ್ಲಿ ಹಾಡು ಕಟ್ಟುವ ಸಾವಿರಾರು ಶಾಹಿರರೂ ಗಾಯಕರೂ ಇದ್ದಾರೆ. ಭಡಂಗ್ ಅಥವಾ ಹರಕೆವೇಷ ಸೊಂಟಕ್ಕೆ ಗಂಟೆ ಕಟ್ಟಿ, ತಲೆಗೆ ಲಾಲಿಕೆಯಾಕಾರದ ಅಲಂಕೃತ ಟೋಪಿ ಧರಿಸುತ್ತಾರೆ. ಮೊಹರಂ ಆಚರಣೆಯ ದಿನಗಳಲ್ಲಿ ಮುಸ್ಲಿಮೇತರರು ಲಾಡಿ ಧರಿಸಿ ಫಕೀರರಾಗುವ ಪದ್ಧತಿಯೂ ಇದೆ.
ಬಹುತ್ವ ಪ್ರಜ್ಞೆ ನಮ್ಮ ಸಂಸ್ಕೃತಿಯ ವೈಶಿಷ್ಟ್ಯ
ಕರ್ನಾಟಕ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಬಹುತ್ವ ಪ್ರಜ್ಞೆ. ಈ ಪ್ರಜ್ಞೆಯು ಪುರಾಣ ಮತ್ತು ಇತಿಹಾಸವನ್ನು ಬೆರೆಸುತ್ತದೆ; ಬೇರೆ ಬೇರೆ ಮತಧರ್ಮದ ಕಥನಗಳಲ್ಲಿರುವ ಸಮಾನ ಅಂಶಗಳನ್ನು ಒಂದೆಡೆ ಜೋಡಿಸುತ್ತದೆ. ಇದು ಭಾರತದ ನಿಜವಾದ ಸಾಂಸ್ಕೃತಿಕ ಪ್ರತಿಭೆ. ಮಧ್ಯಕಾಲೀನ ದೊರೆಗಳು ರಾಜ್ಯವಿಸ್ತರಣೆಗಾಗಿ ಮಾಡಿದ ರಾಜಕೀಯ ಯುದ್ಧಗಳನ್ನೇ ಇರಿಸಿಕೊಂಡು ಚರಿತ್ರೆ ಮತ್ತು ವರ್ತ ಮಾನವನ್ನು ನೋಡುವವರಿಗೆ, ಜನ ಕಟ್ಟುವ ಈ ಸೃಜನಶೀಲ ಪರಂಪರೆ ತಿಳಿಯುವುದಿಲ್ಲ. ಮೊಹರಂ ತಾಳಿರುವ ಬಹುರೂಪವು ಸಂಪ್ರದಾಯವಾದಿಗಳನ್ನು ಕಂಗೆಡಿಸುತ್ತದೆ. ‘ಇದೆಂತಹ ಧರ್ಮ; ಎಲ್ಲ ಕಲಬೆರಕೆಯಾಗಿದೆ’ ಎಂದವರು ಗೊಣಗುವರು. ಆದರೆ ಸಾಮಾನ್ಯ ಜನ ಧರ್ಮ, ಜಾತಿಗಳನ್ನು ಮೀರಿ ಸೃಷ್ಟಿಸಿಕೊಂಡಿರುವ ಅಸ್ಮಿತೆಯಾಗಿ ಮೊಹರಂ ರೂಪುಗೊಂಡಿದೆ. ‘ಪ್ರಧಾನ’ ಧರ್ಮಗಳು ಸಂಘರ್ಷಕ್ಕೆ ಕಾಲು ಕೆರೆಯುತ್ತಿವೆ; ಪರಸ್ಪರ ಸಂವಾದ ಮಾಡುವ ಬಾಗಿಲು ಕಿಟಕಿಗಳನ್ನು ಮುಚ್ಚಿಕೊಳ್ಳುತ್ತಿವೆ. ಇಂತಹ ಸನ್ನಿವೇಶದಲ್ಲಿ, ಧರ್ಮಗಳ ನಡುವೆ, ಸಂಸ್ಕೃತಿಗಳ ನಡುವೆ ಸಂವಾದ ಸಾಧ್ಯವಿದೆ ಎಂದು ಮೊಹರಂ ತೋರಿಸಿಕೊಡುತ್ತದೆ.

