ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಯುವಕರು
ದೇವರಹಿಪ್ಪರಗಿ: ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಬಾಂಧವರೆಲ್ಲ ಸೇರಿ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ ಭರ್ಜರಿ ಆಚರಣೆ ಮಾಡಿ ಕೋಮು ಸೌಹಾರ್ದತೆ ಮೆರೆದರು.
ಜಾತ್ರೆಗೆ ಬಂದ ಹಿಂದೂ ಭಕ್ತಾಧಿಗಳಿಗೆಲ್ಲ ಮುಸ್ಲಿಂ ಯುವಕರು ಹೆಗಲ ಮೇಲೆ ಕೇಸರಿ ಶಾಲು ಧರಿಸಿ, ತಲೆಯ ಮೇಲೆ ಟೋಪಿ ಹಾಕಿ ತಂಪು ಪಾನಿಯ, ಕುಡಿಯುವ ನೀರು, ಶರಬತ್ ನೀಡುತ್ತಿರುವುದು ಎಲ್ಲೆಡೆ ಕಂಡು ಬರುತ್ತಿತ್ತು.
ಭಾವೈಕ್ಯತೆಗೆ ಸಾಕ್ಷಿಯಾದ ಮುಳಸಾವಳಗಿ:
ಸುಮಾರು ನೂರಾರು ವರ್ಷಗಳಿಂದ ಭಾವೈಕ್ಯತೆಗೆ ಹೆಸರಾಗಿರುವ ಮುಳಸಾವಳಗಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಎಂಬ ಬೇಧ ಭಾವ ಮಾಡದೆ ಎಲ್ಲರೂ ಸೇರಿ ಮಲ್ಲಿಕಾರ್ಜುನ ಜಾತ್ರೆ ಆಚರಿಸುತ್ತಿರುವುದು ಸಾಮರಸ್ಯದ ಸಂಕೇತವಾಗಿದೆ. ಇಡೀ ರಾಜ್ಯದಲ್ಲಿ ಧರ್ಮ ಸಂಘರ್ಷ ಏರ್ಪಟ್ಟಿದ್ದು, ಇಲ್ಲಿ ಮಾತ್ರ ಪ್ರತಿಯೊಂದು ಕುಟುಂಬವೂ ಭಾವೈಕ್ಯತೆಯಿಂದ ಬದುಕುತ್ತಿರುವುದು ಮಾದರಿಯಾಗಿದೆ. ಅಪರೂಪ ಎಂಬAತೆ ಎಲ್ಲ ಸಮುದಾಯದ ಹಿರಿಯರು, ಯುವಕರು ಸೇರಿಕೊಂಡು ಜಾತ್ರೆ ಆಚರಿಸುತ್ತಿರುವುದು ಇಡೀ ರಾಜ್ಯಕ್ಕೆ ಸಾಮರಸ್ಯದ ಸಂದೇಶ ಸಾರಿದಂತಿದೆ.
ಜಾತ್ರೆಯ ನಿಮಿತ್ಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಶೈಲ ಹಾಗೂ ವಿವಿಧ ಕಡೆಯಿಂದ ಪುರವಂತರ ಆಟ ಭಕ್ತಿಯೊಂದಿಗೆ ಕಣ್ಮನ ಸೆಳೆಯಿತು. ನಂತರ ಪಲ್ಲಕ್ಕಿ ಉತ್ಸವ ಜರುಗಿತು. ಅಗ್ನಿ ಪ್ರವೇಶದೊಂದಿಗೆ ತೇರು ಎಳೆಯುವ ಕಾಯಕವೂ ಜರುಗಿತು.
ಜಾತ್ರಾ ಮಹೋತ್ಸವದಲ್ಲಿ ಗಣ್ಯರಾದ ನಿಗರಾಜ ಮಹಾರಾಜರು, ಸಾಹೇಬಗೌಡ ಬಿರಾದಾರ, ಲಾಲಸಾಬ ಮುತ್ಯಾ, ಸಂಗನಗೌಡ ಬಿರಾದಾರ, ಸಿದ್ದಪ್ಪ ನಾಗರಳ್ಳಿ, ಜಿ ಪಿ ಬಿರಾದಾರ, ಸಾಬು ಸೊನ್ನಳ್ಳಿ, ಮಲಕಪ್ಪ ನಾಯ್ಕೋಡಿ, ಕಾಶೀಲಿಂಗ ರೋಡಗಿ, ಅಂಜುಮನ್ ಕಮೀಟಿ ಅಧ್ಯಕ್ಷ ಬಂದೇನವಾಜ ಕೋರಬು, ದಾವೂದ್ ಇನಾಮದಾರ, ಅಯೂಬ ಮಕಾನದಾರ, ಜಾವಿದ್ ಮಕಾನದಾರ, ರಫೀಕ ಗಂಗೂರ, ಹಣಮಂತ್ರಾಯ ಹಿರೂರ, ಬಿ ಎಸ್ ಪೋಲೇಶಿ, ಶರಣಯ್ಯ ಮಂಗಲಗಿ, ಸಾಹೆಬಗೌಡ ನಾಗರಳ್ಳಿ, ರಾಜಶೇಖರ ತಳವಾರ, ಬಸವರಾಜ ಬಮ್ಮನಳ್ಳಿ, ಪರಶುರಾಮ ನಾಯ್ಕೋಡಿ, ಶ್ರೀಶೈಲ ಮಠಪತಿ, ವಿರುಪಾಕ್ಷಿ ರೋಡಗಿ, ಬಸವರಾಜ ನಾಟೀಕಾರ, ಪೈಗಂಬರ ಮುಜಾವರ ಸೇರಿದಂತೆ ಸಹಸ್ರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.