ವಿಜಯಪುರ: ನುಡಿದಂತೆ ನಡೆಯುವುದು, ಕೊಟ್ಟ ಭರವಸೆಗಳನ್ನು ಈಡೇರಿಸುವುದು ನಮ್ಮ ಜಾಯಮಾನವಾಗಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದ್ದಾರೆ.
ಬಬಲೇಶ್ವರ ತಾಲೂಕಿನ ಬಬಲಾದಿ, ಕೆಂಗಲಗುತ್ತಿ, ಖಿಲಾರಹಟ್ಟಿ, ಕಾಖಂಡಕಿ ಮತ್ತು ಅಗಸನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು.
ಸುಳ್ಳು ಹೇಳುವುದು, ಪೊಳ್ಳು ಭರವಸೆಗಳನ್ನು ನೀಡುವುದು ನನಗೆ ಗೊತ್ತಿಲ್ಲ. ಆಡಿದ ಮಾತುಗಳನ್ನು ಪಾಲಿಸುತ್ತೇನೆ. ನೀಡಿದ ಭರವಸೆಗಳನ್ನು ಈಡೇರಿಸುತ್ತೇನೆ. ಜನಸಾಮಾನ್ಯರು, ರೈತರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಈ ಮೂಲಕ ಮತದಾರರ ಋಣ ತೀರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಅವರು ಹೇಳಿದರು.
ಬಬಲಾದಿ ಶ್ರೀ ಸದಾಶಿವ ಮುತ್ಯಾನ ಆಶೀರ್ವಾದ ನನ್ನ ಮೇಲಿದೆ. ಮತಕ್ಷೇತ್ರದ ಜನರ ಸಂಪೂರ್ಣ ಬೆಂಬಲವೂ ನನಗಿದೆ. ಹೀಗಾಗಿ ಎಲ್ಲ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗುತ್ತಿವೆ ಎಂದು ಅವರು ಹೇಳಿದರು.
ಕೆ.ಬಿ.ಜೆ.ಎನ್.ಎಲ್ ಭೂಸ್ವಾಧೀನ ಪರಿಹಾರದಲ್ಲಿ ವಿಜಯಪುರ ಜಿಲ್ಲೆ ರೈತರಿಗೆ ಅನ್ಯಾಯವಾಗಿದೆ. ಮಾರ್ಗಸೂಚಿ ಬೆಲೆಯಲ್ಲಿ ತಾರತಮ್ಯ ಮಾಡಲಾಗಿದ್ದು, ಕನ್ಸೆಂಟ್ ಹೆಸರಿನಲ್ಲಿ ಜಿಲ್ಲೆಯ ರೈತರು ಒಪ್ಪಿಗೆ ನೀಡಿದರೆ ಮೂರ್ಖರಾಗಬೇಕಾಗುತ್ತದೆ. ಈ ಅನ್ಯಾಯದ ಕುರಿತು ನಾನು ಸಿ.ಎಂ. ಬೊಮ್ಮಾಯಿ ಎದುರಿನಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ತಾರತಮ್ಯವನ್ನು ಹೋಗಲಾಡಿಸಿ ನ್ಯಾಯ ಒದಗಿಸುತ್ತೇವೆ ಎಂದು ಅವರು ಭರವಸೆ ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪ್ರತಿ ವರ್ಷ ರೂ.40 ಸಾವಿರ ಕೋಟಿಯಂತೆ ಐದು ವರ್ಷಗಳಲ್ಲಿ ರೂ.2 ಲಕ್ಷ ಕೋಟಿ ವೆಚ್ಚ ಮಾಡಿ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ರೈತರಿಗಾಗಿ ಹೊಸ ಯೋಜನೆಗಳನ್ನು ರೂಪಿಸುತ್ತೇವೆ ಎಂದು ಅವರು ಹೇಳಿದರು.
ಸೀಮೆ ಎಣ್ಣೆ ಹೊರೆಯನ್ನು ತಪ್ಪಿಸಲು ಕೇಂದ್ರ ಸರಕಾರ ಬಡವರಿಗೆ ಅಡುಗೆ ಅನಿಲ ಒಲೆಗಳನ್ನು ಉಚಿತವಾಗಿ ನೀಡಿತು. ಆದರೆ, ಈಗ ಗ್ಯಾಸ ಸಿಲಿಂಡರ್ ಬೆಲೆಯನ್ನು ಮೂರು ಪಟ್ಟು ಹೆಚ್ಚಿಸಿ ಬಡವರ ಸಂಕಷ್ಟದ ಗಾಯದ ಮೇಲೆ ಬರೆ ಎಳೆದಿದೆ. ಇದರಿಂದ ಬಡವರು ಮನೆಯಲ್ಲಿ ಅಡುಗೆ ಮಾಡಲು ಕೂಡ ಹೆಚ್ಚಿನ ಬೆಲೆ ತೆರಬೇಕಾಗಿದೆ ಎಂದು ಅವರು ಹೇಳಿದರು.
ಡಬಲ್ ಎಂಜಿನ್ ಸರಕಾರದಲ್ಲಿ ಬಿಜೆಪಿ ನಾಯಕರು ನೀಡಿದ ಶೇ.10 ರಷ್ಟು ಭರವಸೆಗಳು ಈಡೇರಿಲ್ಲ. ಆದರೆ, ಕಾಂಗ್ರೆಸ್ ಸರಕಾರದಲ್ಲಿ ನಾವು ನೀಡಿದ ಶೇ.95 ರಷ್ಟು ಭರವಸೆ ಮತ್ತು ಯಾವುದೇ ಪ್ರಸ್ತಾವನೆ ಮಾಡದ 30 ಹೊಸ ಭರವಸೆಗಳನ್ನು ಈಡೇರಿಸಿದ್ದೇವೆ. ನಾವು ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆ, ನಿರುದ್ಯೋಗ ಮತ್ತು ಸಂಕಷ್ಟದಲ್ಲಿರುವ ಜನರಿಗೆ ಆರ್ಥಿಕ ಹೊರೆ ಕಡಿಮೆ ಮಾಡಲು ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಗ್ಯಾರಂಟಿ ಸ್ಕೀಂ ಗಳನ್ನು ಜಾರಿಗೆ ತರುತ್ತೇವೆ. ಈ ಮೂಲಕ ಕೊಟ್ಟ ಮಾತನ್ನು ಪಾಲಿಸುತ್ತೇವೆ ಎಂದು ಎಂ. ಬಿ. ಪಾಟೀಲ ಹೇಳಿದರು.