ವಿಜಯಪುರ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬಾಕಿ ಇರುವ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಹಲಗಣಿ, ಶೇಗುಣಸಿ, ಮದಗುಣಕಿ, ಕಂಬಾಗಿ, ನಂದ್ಯಾಳ, ಬೋಳಚಿಕ್ಕಲಕಿ ಮತ್ತು ಸಂಗಾಪುರ ಎಸ್. ಎಚ್ ಗ್ರಾಮಗಳಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು.
2013 ರಿಂದ 2018ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿ ಶಕ್ತಿಮೀರಿ ಸಾಕಷ್ಟು ನೀರಾವರಿ ಕೆಲಸ ಮಾಡಿದ್ದೇನೆ. ಮುಂದೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಎಲ್ಲ ಬಾಕಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ರೈತರ ಜಮೀನಿಗೆ ನೀರು ಹರಿಸಲಾಗುವುದು ಎಂದು ಹೇಳಿದರು.
ಈ ಭಾಗದಲ್ಲಿ ಈ ಹಿಂದೆ ಇದ್ದ ದುಸ್ಥಿತಿ ಮತ್ತು ಈಗ ಅಭಿವೃದ್ಧಿಯಿಂದ ಆಗಿರುವ ಸುಸ್ಥಿತಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಈ ಮುಂಚೆ ಟ್ಯಾಂಕರ್ ಮೂಲಕ ನೀರು ಪಡೆಯಲು ಹರಸಾಹಸ ಪಡುತ್ತಿದ್ದ ಜನರ ಮನೆ ಬಾಗಿಲಿಗೆ ನಳಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಸಚಿವನಾಗಿದ್ದಾಗ ಕೇವಲ ಐದೇ ವರ್ಷಗಳಲ್ಲಿ ಈ ಹಿಂದೆ ಯಾರು ಮಾಡಲು ಸಾಧ್ಯವಾಗದ ಪ್ರಮಾಣದಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದ್ದೇನೆ. ಇದರಿಂದಾಗಿ ಜನ, ಜಾನುವಾರುಗಳು, ಪಕ್ಷಿ ಸಂಕುಲ ಮತ್ತು ಕೃಷಿ ಭೂಮಿಗೆ ನೀರು ಸಿಗುತ್ತಿದೆ. ಮುಂಬರುವ ದಿನಗಳಲ್ಲಿ ರೈತರ ಬಾಳು ಹಸನಾಗಿಸಲು ಕ್ಷೀರ ಕ್ರಾಂತಿ, ಹೊಸ ಹೊಸ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುವುದು. ರೈತರು, ಯುವಕರು ಮತ್ತು ಭೂರಹಿತರು ಸ್ವಾವಲಂಬಿ ಬದುಕು ಸಾಗಿಸಲು ಆಹಾರ ಸಂಸ್ಕರಣೆ ಘಟಕ ಸ್ಥಾಪನೆ, ಗುಡಿ ಕೈಗಾರಿಕೆಗಳ ಪ್ರಾರಂಭಕ್ಕೆ ಪ್ರೋತ್ಸಾಹ ನೀಡಿ ಸಾಲ, ಸೌಲಭ್ಯ ಹಾಗೂ ಸಬ್ಸಿಡಿ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಕೆಲಸಗಾರರು ಮತ್ತು ಕೆಲಸ ಮಾಡದವರ ಬಗ್ಗೆ ಮತದಾರರು ಜಾಗೃತರಾಗಿರಬೇಕು. ಕೆಲಸಗಾರರನ್ನು ಬೆಂಬಲಿಸಿ, ಪ್ರೋತ್ಸಾಹಿಸಿದರೆ ಇನ್ನೂ ಹೆಚ್ಚಿನ ಜನ ಸೇವೆ ಮಾಡಲು ಹುಮ್ಮಸು ಸಿಗುತ್ತದೆ ಎಂದು ಅವರು ತಿಳಿಸಿದರು.
ಡಂಬಲ್ ಎಂಜಿನ್ ಸರಕಾರದಲ್ಲಿ ಆರ್ಥಿಕ ನಿರ್ವಹಣೆ ವೈಫಲ್ಯದಿಂದಾಗಿ ರೈತರ ಕೃಷಿ ಸಲಕರಣೆಗಳು ರಸಗೊಬ್ಬರ ಮತ್ತು ಕಿಟನಾಶಕಗಳು ಹಾಗೂ ಜನ ಸಾಮಾನ್ಯರ ದಿನಬಳಕೆ ವಸ್ತುಗಳ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ನಮ್ಮ ಭಾಗದಲ್ಲಿ ನಾವು ಕೈಗೊಂಡ ನೀರಾವರಿ ಯೋಜನೆಗಳ ಫಲದಿಂದಾಗಿ ರೈತರ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ ಎಂದು ಅವರು ತಿಳಿಸಿದರು.
ಇದಕ್ಕೂ ಮೊದಲು ಎಂ. ಬಿ. ಪಾಟೀಲ ಅವರು ಹಲಗಣಿ ಗ್ರಾಮದ ಜಾಗೃತ ದೇವರು ಎಂದೇ ಹೆಸರಾಗಿರುವ ಶ್ರೀ ಹಲಗಣೇಶ್ವರ ದೇವಸ್ಥಾನ ಸೇರಿದಂತೆ ಗ್ರಾಮದ ನಾನಾ ಮಂದಿರಗಳಿಗೆ ಭೇಟಿ ನೀಡಿ, ದರ್ಶನ ಪಡೆದರು. ನಂತರ ಶೇಗುಣಸಿ ಗ್ರಾಮಕ್ಕೆ ಭೇಟಿ ನೀಡಿದ ಎಂ. ಬಿ. ಪಾಟೀಲ ಅವರಿಗೆ ರೈತನಾದ ಭೀಮಪ್ಪ ಹಲಗಲಿ ತಮ್ಮ ತೋಟದಲ್ಲಿ ಸಮೃದ್ಧವಾಗಿ ಬೆಳೆದ ಮೆಕ್ಕೆಜೋಳದ ತೆನೆಗಳನ್ನು ನೀಡಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ, ಬರದಿಂದ ಕೂಡಿದ ನಮ್ಮ ಜಮೀನಿಗೆ ತಾವು ಮಾಡಿದ ಅಭಿವೃದ್ಧಿ ಯೋಜನೆಗಳಿಂದ ನೀರು ಬಂದಿದ್ದು, ನಮ್ಮ ಭಾಗ್ಯದ ಬಾಗಿಲು ತೆರದಿದೆ. ನಾಲ್ಕು ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಅದನ್ನು ತಮಗೆ ಸಮರ್ಪಿಸುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.