ನವ ನಿಡಗುಂದಿ ಜನಾಭಿಪ್ರಾಯ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಜಂಟಿಯಾಗಿ ಮನವಿ ಸಲ್ಲಿಕೆ
ನಿಡಗುಂದಿ: ಪಟ್ಟಣದ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರ ಪೊರೈಸುತ್ತಿಲ್ಲವೆಂದು ನವ ನಿಡಗುಂದಿ ಜನಾಭಿಪ್ರಾಯ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಜಂಟಿಯಾಗಿ ಆರೋಪಿಸಿ ಬುಧವಾರ ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿ ಮತ್ತು ಮಹಿಳಾ & ಮಕ್ಕಳ ಕಲ್ಯಾಣ ಸಚಿವೆಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನವ ನಿಡಗುಂದಿ ಜನಾಭಿಪ್ರಾಯ ವೇದಿಕೆ ಮುಖಂಡ ವ್ಹಿ.ಎಂ.ಚಿನಿವಾರ ಮತ್ತು ಕರವೇ ಮುಖಂಡ ಆನಂದ ಭೋವಿವಡ್ಡರ ಮಾತನಾಡಿ, ಪಟ್ಟಣದ ಅಂಗನವಾಡಿ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೇ ಸಮಯಪಾಲನೆ ಮಾಡುತ್ತಿಲ್ಲ. ಮಕ್ಕಳಿಗೆ ಪೌಷ್ಠಿಕ ಆಹಾರ ಪೊರೈಸದಿರುವುದರಿಂದ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದೆ. ಮಾತೃವಂದನಾ ಹಾಗೂ ಭಾಗ್ಯಲಕ್ಷ್ಮಿ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ದೊರೆಯುತ್ತಿಲ್ಲ. ಕಾರಣ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಎನ್.ಎಂ.ಕಾಳಗಿ, ಎಂ.ಎಂ.ಸಜ್ಜನ, ಎಸ್.ಆರ್.ಸಜ್ಜನ, ಎಸ್.ಎಚ್.ಕೆಳಗೇರಿ, ಬಿ.ವೈ.ವಂದಾಲ, ಎಸ್.ಐ.ಸಜ್ಜನ, ಎಸ್.ಆರ್.ಗೌಡರ, ಆರ್.ಬಿ.ಚಟ್ಟೇರ, ಎಚ್.ಆರ್ ನದಾಫ, ಯಂಡಿಗೇರಿ, ವಿಜಯಲಕ್ಷ್ಮಿ, ರತ್ನಾ ಧನಶೆಟ್ಟಿ, ಲಾಲಬಿ ಕಾಳಗಿ, ಪಾರ್ವತಿ ಧನಶೆಟ್ಟಿ, ಗೌರಾಬಾಯಿ ಧನಶೆಟ್ಟಿ, ಶಬಿನಾ ಸೇರಿದಂತೆ ಅನೇಕರಿದ್ದರು.

