ಚಡಚಣ: ವೃದ್ಧೆಯೊಬ್ಬಳಿಗೆ ಬದುಕಿರುವಾಗಲೇ ಮರಣ ಪತ್ರ ನೀಡಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡ ವಿಚಿತ್ರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಈ ಪ್ರಕರಣದ ಹಿಂದೆ ಸಂಬಂಧಿಕರು ವೃದ್ಧೆಯ ಆಸ್ತಿ ಲಪಟಾಯಿಸುವ ಕುತಂತ್ರ ಅಡಗಿದೆಯೋ ಅಥವಾ ಇದಕ್ಕೆ ಜನನ ಮತ್ತು ಮರಣ ಪತ್ರ ನೋಂದಣಿ ಕೇಂದ್ರದ ಅಧಿಕಾರಿಗಳ ಎಡವಟ್ಟು ಕಾರಣವೊ ಎನ್ನುವುದು ಬರಲಾಗಬೇಕಿದೆ.
ಸಮೀಪದ ದೇವರ ನಿಂಬರಗಿ ಗ್ರಾಮದ 60 ವರ್ಷದ ಸಾವಿತ್ರಿ ರಾಮಾಗುಂಡ ಮಾಳಿ ಎಂಬವಳಿಗೆ ಚಡಚಣ ಜನನ ಮತ್ತು ಮರಣ ನೋಂದಣಿ ಇಲಾಖೆ ಅಧಿಕಾರಿಗಳು ಅವಳು ಬದುಕಿರುವಾಗಲೇ ಅವಳಿಗೆ ಮರಣ ಪತ್ರ ನೀಡಿ ಅಚ್ಚರಿ ಮತ್ತು ಆತಂಕ ಮೂಡಿಸಿದ್ದಾರೆ.
ವೃದ್ದೆ ಸಾವಿತ್ರಿ ಮಾಳೆ ತಮ್ಮ ತಾಯಿಯ ಮರಣ ಪತ್ರ ಪಡೆಯಲು ಕಚೇರಿಗೆ ಹೋದಾಗ ಅಧಿಕಾರಿಗಳು ನೀವು 12/3/2001ರಲ್ಲಿ ನಿಧನರಾಗಿದ್ದೀರಿ ಎಂದು ಅವಳ ಮರಣ ಪತ್ರವೇ ನೀಡಿದ್ದಾರೆ. ಇದರಿಂದ ಆಘಾತಕ್ಕೆ ಒಳಗಾದ ಸಾವಿತ್ರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಸಾವಿತ್ರಿ ಮೂಲತಃ ಹೊನ್ನಳ್ಳಿ ಗ್ರಾಮದವರು. ಇವರ ತಂದೆಗೆ ಒಬ್ಬಳೇ ಮಗಳು. ತಂದೆ ನಿಧನಾನಂತರ ಅವರ 12 ಎಕರೆ ಹೊಲ ಇವರ ಹೆಸರಿಗೆ ಬಂದಿತ್ತು. ಈ ಆಸ್ತಿಯನ್ನು ಲಪಟಾಯಿಸಲು ತಮ್ಮ ಸಂಬಂಧಿಕರೆ ಸಾವಿತ್ರಿ ದತ್ತು ಪುತ್ರಿಯೆಂದು ಬಿಂಬಿಸಿ ತನ್ನ ಆಸ್ತಿ ಕಬಳಿಸಲು ಮರಣ ಪತ್ರ ಸೃಷ್ಟಿ ಮಾಡಿದ್ದಾರೆ ಎಂದು ಸಾವಿತ್ರಿ ಮಾಳೆ ಆರೋಪಿಸಿದ್ದಾಳೆ.
![3adc604a 8e5d 451f b1b6 c38bf70e99a4](https://udayarashminews.com/wp-content/uploads/2023/04/3adc604a-8e5d-451f-b1b6-c38bf70e99a4-747x1024.jpg)
ಸಾವಿತ್ರಿ ಮಾಳೆಯ ಪತಿ ನಿಂಗಪ್ಪ ಮಾಳೆ ಅನಾರೋಗ್ಯ ಪೀಡಿತನಾಗಿ ಹಾಸಿಗೆ ಹಿಡಿದಿದ್ದಾನೆ. ಇವಳಿಗೆ ಇಬ್ಬರು ಗಂಡು ಮಕ್ಕಳಿದ್ದರೂ ಅವಿದ್ಯಾವಂತರು. ಅವರಿಗೆ ಪ್ರಪಂಚದ ಜ್ಞಾನ ಸಹ ಗೊತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಅವರ ಸಂಬಂಧಿಕರೊಬ್ಬರು ಸಾವಿತ್ರಿ ಹೆಸರಿನಲ್ಲಿರುವ 12 ಎಕರೆ ಜಮೀನು ಕಬಳಿಸಲು 2001ರಲ್ಲಿ ಸಾವಿತ್ರಿ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ 11-03-2001ರಂದು ನಿಧನಳಾಗಿದ್ದಾಳೆಂದು ಚಡಚಣದ ಗ್ರಾಮಲೆಕ್ಕಾಧಿಕಾರಿ ಮೂಲಕ ಜನನ ಮತ್ತು ಮರಣಗಳ ನೊಂದಣಿ ಕಚೇರಿಯಲ್ಲಿ ಮರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದು ನೊಂದಣಿಯಾಗಿದ್ದು ಮಾತ್ರ 2-01-2013 ರಂದು. ನಂತರ 5-01-2023ರಂದು ಮರಣ ಪ್ರಮಾಣ ಪತ್ರಕ್ಕೆ ಅನುಮೋದನೆ ದೊರೆತಿದೆ. ಇದು ಗೊತ್ತಿಲ್ಲದ ವೃದ್ದೆ ಸಾವಿತ್ರಿ ತಮ್ಮ ತಾಯಿಯ ಮರಣ ಪತ್ರ ಪಡೆಯಲು ಹೋದಾಗ ತನ್ನ ಮರಣ ಪತ್ರ ನೀಡಿದ ಮೇಲೆ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ನ್ಯಾಯಾಲಯದ ಮೆಟ್ಟಿಲೇರಿರುವ ವೃದ್ದೆ ಸಾವಿತ್ರಿ ಮಾಳೆ ತನ್ನ ಜೀವಿತಾವಧಿಯಲ್ಲಿ ಮರಣ ಪತ್ರ ನೀಡಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ಮಾನಸಿಕವಾಗಿ ನೊಂದಿರುವ ತಮಗೆ ಕಾನೂನಿನ ನೆರವು ನೀಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ಅರ್ಜಿ ಬರೆದಿದ್ದಾಳೆ ಎಂದು ತಿಳಿದು ಬಂದಿದೆ.
ನಾನು ಚುನಾವಣೆ ಕಾರ್ಯದಲ್ಲಿ ಇದ್ದೇನೆ. ವಿಷಯ ನನ್ನ ಗಮನಕ್ಕೂ ಬಂದಿದೆ. ಬೈ ಮಿಸ್ಟೇಕ್ ಆಗಿ ತಾಯಿ ಹೆಸರು ಬರೆಯುವ ಬದಲು ಮಗಳ ಹೆಸರು ಆಗಿರಬಹುದು. ನಾನು ಕೆಲಸ ಮುಗಿಸಿ ನಿಮಗೆ ಸಮಗ್ರ ವಿಷಯ ಹೇಳುತ್ತೇನೆ.
ಹನುಮಂತ ಶಿರಹಟ್ಟಿ, ತಹಶೀಲ್ದಾರ ಚಡಚಣ.