ಶಾಸಕ ಯತ್ನಾಳರಿಗೆ ಬೀದರ TO ಚಾಮರಾಜವರೆಗೆ ಪ್ರಭಾವ | ಎಲ್ಲಿಂದ ಸ್ಪರ್ಧಿಸಿದರೂ ಗೆಲ್ಲುವ ಶಕ್ತಿ
ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ರಾಜ್ಯದ ಪ್ರಭಾವಿ ನಾಯಕರು. ಬೀದರನಿಂದ ಚಾಮರಾಜನಗರದವರೆಗೂ ಅವರ ಪ್ರಭಾವವಿವೆ. ವಿಜಯಪುರನಗರ ಕ್ಷೇತ್ರ ಬಿಟ್ಟು ಜಿಲ್ಲೆಯ ಬೇರೆ ಕ್ಷೇತ್ರದಿಂದ ಅವರು ಸ್ಪರ್ಧಿಸಿದರೆ ಗೆಲ್ಲುವುದು ಖಚಿತ. ಕಾರಣ ಪಕ್ಷದ ವರಿಷ್ಠರು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರಿಗೆ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿಯ ಮಾಜಿ ಕಾರ್ಪೋರೇಟರಗಳು ಮತ್ತು ಪದಾಧಿಕಾರಿಗಳು ಪ್ರತಿಪಾದಿಸಿದರು.
ಶುಕ್ರವಾರ ನಗರದಲ್ಲಿ ನಡೆದ ಜಂಟಿ ಸುದ್ದಿಗೊಷ್ಠಿಯಲ್ಲಿ ಅವರು ಮಾತನಾಡಿದರು.
ವಿಜಯಪುರ ನಗರಾಭಿವೃದ್ಧಿ ಪ್ರಾಧಕಾರದ ಮಾಜಿ ಅಧ್ಯಕ್ಷ ಹಾಗೂ ಪಕ್ಷದ ಜಿಲ್ಲಾ ಖಜಾಂಚಿ ಭೀಮಾಶಂಕರ ಹದನೂರ ಮಾತನಾಡಿ, ಅಪ್ಪು ಪಟ್ಟಣಶೆಟ್ಟಿ ಅವರಿಗೆ ಪಕ್ಷವು ಎರಡು ಬಾರಿ ಸ್ಪರ್ಧೆಗೆ ಅವಕಾಶ ನಿರಾಕರಿಸಿದರೂ ಅವರು ಪಕ್ಷದ ನಿರ್ಣಯಕ್ಕೆ ಬದ್ಧರಾಗಿ ಕಾರ್ಯಕರ್ತರನ್ನು ಹುರಿದುಂಬಿಸುತ್ತ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡರು. ಎಂದೂ ಜಾತಿಗಳ ನಡುವೆ ತಾರತಮ್ಯ ಮಾಡದೇ ಎಲ್ಲ ಸಮುದಾಯಗಳಂದಿಗೆ ಅನೋನ್ಯತೆಯಿಂದ ಇದ್ದವರು. ಅವರಿಗೆ ಈ ಬಾರಿ ವಿಜಯಪುರ ಟಿಕೆಟ್ ಕೊಡಬೇಕೆಂದು ಈಗಾಗಲೇ ಪಕ್ಷದ ಹೈಕಮಾಂಡ್‌ಗೆ ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇವೆ. ಶಾಸಕ ಯತ್ನಾಳರು ಬೇರೆ ಕ್ಷೇತ್ರದಿಂದ ಸ್ಪರ್ಧಿಸಿದರೆ ಜಿಲ್ಲೆಯ ಇನ್ನೂ ೪-೫ ಕ್ಷೇತ್ರಗಳಿಗೆ ಅವರ ಪ್ರಭಾವದಿಂದ ಅನುಕೂಲವಾಗಲಿದೆ ಎಂದರು.
ಮಹಾನಗರಪಾಲಿಕೆ ಮಾಜಿ ಉಪಪೌರರು, ಪಕ್ಷದ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ಬಿಜೆಪಿ ಜಾತಿ ಸಮೀಕರಣ ಮಾಡುವ ಪಕ್ಷ. ಕಳೆದ ಎರಡು ಬಾರಿ ಅಪ್ಪು ಪಟ್ಟಣಶೆಟ್ಟಿ ಅವರಿಗೆ ಸ್ಪರ್ಧಿಸಲು ಟಿಕೆಟ್ ನಿರಾಕರಣೆ ಮಾಡಿದ್ದರಿಂದ ಬಣಜಿಗ ಸಮುದಾಯಕ್ಕೆ ನೋವಿದೆ. ಆ ಅನ್ಯಾಯ ಮತ್ತೆ ಈ ಸಲ ಮುಂದುವರಿಯಬಾರದು. ಶಾಸಕ ಯತ್ನಾಳ ಅವರು ಜಿಲ್ಲೆಯ ಉಳಿದ ೭ ಕ್ಷೇತ್ರಗಳಲ್ಲಿ ಎಲ್ಲೇ ಟಿಕೆಟ್ ಕೊಟ್ಟರೂ ಗೆಲ್ಲಲು ಸಮರ್ಥರು. ಕಾರಣ ಈವರೆಗೆ ಯಾವ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿಲ್ಲ ಅಂತಹ ಕ್ಷೇತ್ರದಲ್ಲಿ ಯತ್ನಾಳರಿಗೆ ಟಿಕೆಟ್ ಕೊಟ್ಟು, ಅಪ್ಪು ಪಟ್ಟಣಶೆಟ್ಟಿ ಅವರಿಗೆ ವಿಜಯಪುರ ನಗರ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿದರೆ ಈರ್ವರಿಗೂ ನಾಯಕರಿಗೂ ನ್ಯಾಯ ಸಿಕ್ಕಂತಾಗುತ್ತದೆ ಎಂದರು.
ಬಿಜೆಪಿ ವಿಶೇಷ ಆಹ್ವಾನಿತರಾದ ಶಿವಾನಂದ ಮಾನಕರ ಹಾಗೂ ಪ್ರಕಾಶ ಮಿರ್ಜಿ ಮಾತನಾಡಿ, ವಿಜಯಪುರ ನಗರ ಕ್ಷೇತ್ರದಲ್ಲಿ ಅಪ್ಪು ಪಟ್ಟಣಶೆಟ್ಟಿ ಅವರ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಅಲ್ಲದೇ ಪಕ್ಷದ ಕಾರ್ಯಕರ್ತರ ಅಪೇಕ್ಷೆಯೂ ಅಪ್ಪು ಅವರು ಈ ಬಾರಿ ಸ್ಪಧಿಸಬೇಕೆಂಬುದೇ ಆಗಿದೆ. ಕಾರಣ ಜಿಲ್ಲಾದ್ಯಂತ ಪ್ರಭಾವ ಹೊಂದಿರುವ ಶಾಸಕ ಯತ್ನಾಳ ಅವರಿಗೆ ಬೇರೆ ಕ್ಷೇತ್ರದಲ್ಲಿ, ಅಪ್ಪು ಪಟ್ಟಣಶೆಟ್ಟಿ ಅವರಿಗೆ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಶ್ರೀಕಾಂತ ಶಿಂಧೆ ಇದ್ದರು.