ಜಿಲ್ಲಾ ಉಸ್ತುವಾರಿ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾಹಿತಿ
ಬೆಂಗಳೂರು: ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನಲ್ಲಿ ಇರುವ ಐತಿಹಾಸಿಕ ಮಮದಾಪುರ ಕೆರೆಯನ್ನು ಪುನಶ್ಚೇತನಗೊಳಿಸಲು ಕೋಕಾಕೋಲಾ ಕಂಪನಿ ಮುಂದೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಶುಕ್ರವಾರ ಹೇಳಿದ್ದಾರೆ.
ಈ ಬಗ್ಗೆ ಕಂಪನಿಯ ಉನ್ನತಾಧಿಕಾರಿಗಳಾದ ಹಿಮಾಂಶು ಪ್ರಿಯದರ್ಶಿ ಮತ್ತು ಮುಕುಂದ್ ತ್ರಿವೇದಿ ಸಚಿವರನ್ನು ಇಲ್ಲಿ ಭೇಟಿ ಮಾಡಿ ಚರ್ಚಿಸಿದರು.
16ನೇ ಶತಮಾನದಲ್ಲಿ ಆದಿಲ್ ಶಾಹಿ ಸುಲ್ತಾನರ ಕಾಲದಲ್ಲಿ ನಿರ್ಮಿತವಾಗಿರುವ ಮಮದಾಪುರ ಕೆರೆಯು ರಾಜ್ಯದ ಅತಿದೊಡ್ಡ ಕೆರೆಗಳ ಪೈಕಿ ಒಂದಾಗಿದೆ. ಕೆರೆಯ ಸುತ್ತಮುತ್ತ ಹಸಿರಿನಿಂದ ತುಂಬಿರುವ 1,654 ಎಕರೆ ಪ್ರದೇಶದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ನೆನಪಿನಲ್ಲಿ ಅರಣ್ಯ ಅಭಿವೃದ್ಧಿ ಪಡಿಸಲಾಗುತ್ತದೆ. ಕೆರೆ ಪುನಶ್ಚೇತನದ ಬಳಿಕ ಈ ಸ್ಥಳವು ಪ್ರವಾಸಿ ಆಕರ್ಷಣೆಯ ತಾಣವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋಕಾಕೋಲಾ ಕಂಪನಿಯು ಕೆರೆಗೆ ಸಂಪರ್ಕಿಸುವ ನಾಲೆಗಳಲ್ಲಿ ಬಾಂದಾರವನ್ನು ನಿರ್ಮಿಸಲಿದೆ. ಜೊತೆಗೆ ಮಮದಾಪುರ ಗ್ರಾಮದ ಮುಂಭಾಗದಲ್ಲಿ ಇರುವ 800 ಮೀಟರ್ ಉದ್ದದ ಕೆರೆಯ ಏರಿಯನ್ನು ಅಭಿವೃದ್ಧಿಪಡಿಸುವುದು, ಬೇಲಿ, ಪಾದಚಾರಿ ಮಾರ್ಗ ಮತ್ತು ಮಕ್ಕಳು ಆಟವಾಡುವ ಜಾಗವನ್ನು ಮಾಡಿಕೊಡಲಿದೆ. ಒಟ್ಟಾರೆ ಸುಂದರ ತಾಣವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

