ನಾಮಫಲಕಗಳಲ್ಲಿ ಶೇ.60% ಭಾಗ ಕನ್ನಡ ಹೊಂದಿರದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಕರವೇ
ವಿಜಯಪುರ: ಜಿಲ್ಲೆಯಲ್ಲಿರುವ ಅಂಗಡಿ-ಮುಂಗಟ್ಟುಗಳು ಹಾಗೂ ಸಂಘ ಸಂಸ್ಥೆಗಳು ತಮ್ಮ ನಾಮಫಲಕಗಳಲ್ಲಿ ಶೇ.60% ಕನ್ನಡ ಹಾಗೂ ಶೇ.40% ಅನ್ಯ ಭಾಷೆಯನ್ನೊಳಗೊಂಡ ನಾಮಫಲಕಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ ಆಗ್ರಹಿಸಿದರು.
ಗುರುವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಕುರಿತು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮಾಡಿದ್ದರೂ ಸಹ ಜಿಲ್ಲಾಡಳಿತ ಕಾರ್ಯ ರೂಪಕ್ಕೆ ಇಳಿದಿಲ್ಲ. ಇದೇ ರೀತಿ ಮುಂದುವರೆದರೆ ಕರವೇ ಸೇನಾನಿಗಳು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಆಗಲಿದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾತಿ ಹಿಂದಿನ ಸರ್ಕಾರದ ಅವಧಿಯಲ್ಲಿ ದೊರೆತ್ತಿದ್ದರೂ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದಿದೆ. ಈ ವಿಷಯವಾಗಿ ಜಿಲ್ಲೆಯಲ್ಲಿ ಹೋರಾಟ ಕೈಕೊಂಡು ಸರ್ಕಾರದ ಗಮನ ಸೆಳೆದು ವೈದ್ಯಕೀಯ ಕಾಲೇಜಿನ ಸ್ಥಾಪನೆಗೆ ಶ್ರಮಿಸುವುದಾಗಿ ತಿಳಿಸಿದರು.
ಬರಗಾಲದಿಂದ ತತ್ತರಿಸಿರುವ ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮ ಆಗಿರುವ ಪ್ರಯುಕ್ತ ರೈತರಿಗೆ ಬೀಜ ಗೊಬ್ಬರ ಆದಷ್ಟು ಬೇಗನೆ ಕೈಸೇರಬೇಕು. ಬೆಲೆ ಗಗನಕ್ಕೆ ಏರಿವೆ, ರೈತರ ಪರ ಇರುವ ಸರ್ಕಾರ ಕೂಡಲೇ ಬೆಲೆ ಕಡಿಮೆ ಮಾಡಿ ಸಬ್ಸಿಡಿ ರೂಪದಲ್ಲಿ ರೈತರನ್ನು ರಕ್ಷಣೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಡಾ|| ಸರೋಜಿನಿ ಮಹಿಷಿ ವರದಿ ಸಮಗ್ರ ಜಾರಿಗಾಗಿ ಮುಂಬರುವ ದಿನಗಳಲ್ಲಿ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡರ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ವಿಧಾನ ಸೌಧ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಷ್ಟೇ ಅಲ್ಲದೆ ವಿಜಯಪುರ ಜಿಲ್ಲೆಯಾದಂತ್ಯ ವಾರದಲ್ಲಿ ಒಂದೆರಡು ಕೊಲೆ,ಸುಲಿಗೆ ಅತ್ಯಾಚಾರ, ದರೋಡೆಗಳು ನಿರಂತರವಾಗಿ ಸಾಗುತ್ತಿವೆ. ಇದಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಕಡಿವಾಣ ಹಾಕಲು ಮುಂದಾಗಬೇಕೆಂದು ಒತ್ತಾಯಿಸಿದರು. ಇಲಾಖೆಯೊಂದಿಗೆ ಕರವೇ ಕೂಡಾ ಕೈ ಜೋಡಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವನಗೌಡ ಗುಜಗೊಂಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಬಿಜಾಪುರ, ಜಿಲ್ಲಾಸಂಚಾಲಕ ಸಾಹೇಬಣ್ಣಾ ಮಡಿವಾಳರ, ಸಂಜು ಕಾರ್ಪೂರಮಠ, ಡಾ,ಎಂ ಡಿ ಮೇತ್ರಿ, ಫಯಾಜ್ ಕಲಾದಗಿ, ಅನುರಾಧ ಕಲಾಲ, ಸುಮಿತ್ರಾ ಪೂಜಾರಿ, ಸಿದ್ದುಗೌಡ ತೊರವಿ,ಬಾಗರಾಜ ಸೊನ್ನದ, ಸುರೇಶ ಜತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

