ಮುದ್ದೇಬಿಹಾಳ : ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಜಮೀನಿಗೆ ವಿದ್ಯುತ್ ಕಂಬಗಳನ್ನು ಅಳವಡಿಸುವಂತೆ ಕಳೆದ ವರ್ಷದಿಂದ ಮನವಿ ಕೊಡುತ್ತಾ ಬಂದಿದ್ದರೂ ನೀವು(ಹೆಸ್ಕಾಂ ಅಧಿಕಾರಿಗಳು) ಕಂಬ ಅಳವಡಿಸದೇ ಇನ್ನೂ ಅಂದಾಜು ಪತ್ರಿಕೆಯ ನೆಪಗಳನ್ನೇ ಹೇಳುತ್ತಿದ್ದೀರಿ. ಇದರಿಂದ ನಮಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗದೇ ತೊಂದರೆಯುAಟಾಗಿದೆ. ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ತಾಲೂಕಿನ ಹಂಡರಗಲ್ಲ ಗ್ರಾಮದ ರೈತರು ಪಟ್ಟಣದ ಹೆಸ್ಕಾಂ ಸೆಕ್ಷನ್ ಅಧಿಕಾರಿ ಬಿ.ಎಸ್.ಯಲಗೋಡ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಹೆಸ್ಕಾಂ ಕಚೇರಿಗೆ ಬುಧವಾರ ಆಗಮಿಸಿದ್ದ ಹಂಡರಗಲ್ ಗ್ರಾಮದ ರೈತರು ಕೆಲಕಾಲ ಕಚೇರಿ ಮುಂಬಾಗಿಲ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರೈತರಾದ ಸದಾನಂದ ವಾಲೀಕಾರ, ಶರಣಪ್ಪ ನರಸಣಗಿ, ಬಸವರಾಜ ನರಸಣಗಿ ಮತ್ತಿತರರು, ಕಳೆದ ಹಲವು ವರ್ಷಗಳಿಂದ ಕೃಷ್ಣಾ ನದಿ ತೀರದ ಗ್ರಾಮಗಳ ರೈತರು ತಮ್ಮ ಜಮೀನುಗಳಲ್ಲಿ ಕಬ್ಬು ಇತ್ಯಾದಿ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಸದ್ಯಕ್ಕೆ ಕಾಲುವೆಗಳ ನೀರು ಬಳಸಿಕೊಳ್ಳಲು ಮತ್ತು ಬೋರ್‌ವೆಲ್ ಮೂಲಕ ನೀರು ಬಳಸಿಕೊಳ್ಳಲು ಹೆಸ್ಕಾಂ ಇಲಾಖೆ ಅಧಿಕಾರಿಗಳು ಸಮರ್ಪಕ ವಿದ್ಯುತ್ ಪೂರೈಕೆ ಮಾಡದೇ ಇರುವುದರಿಂದ ಅಡಚಣೆಯುಂಟಾಗಿದೆ. ಎಲ್ಲೋ ದೂರದ ವಿದ್ಯುತ್ ಕಂಬದಿAದ ವಿದ್ಯುತ್ ಬಳಸಿಕೊಳ್ಳಬೇಕೆಂದರೆ ಅಗತ್ಯ ವೋಲ್ಟೇಜ್ ಇರುವುದಿಲ್ಲ. ಕೇವಲ ಸಿಂಗಲ್ ಫೇಸ್ ವಿದ್ಯುತ್ ಮಾತ್ರ ಇರುತ್ತದೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ನದಿ ತೀರದ ಜಮೀನುಗಳ ಅಕ್ಕ ಪಕ್ಕದಲ್ಲಿರುವ ವಿದ್ಯುತ್ ಕಂಬಗಳು ಬಿದ್ದು ಹೋಗುವ ಸ್ಥಿತಿಯಲ್ಲಿವೆ. ಜೊತೆಗೆ ವಿದ್ಯುತ್ ತಂತಿಯೂ ಕೂಡ ನೆಲಕ್ಕೆ ತುಂಬಾ ಹತ್ತಿರ ಇರುವುದರಿಂದ ಆಗಾಗ ವಿದ್ಯುತ್ ಪ್ರವಹಿಸುತ್ತಿರುತ್ತದೆ ಹಾಗಾಗಿ ಕಳೆದ ಕೆಲವು ದಿನಗಳ ಹಿಂದೆ ಎಮ್ಮೆಯೊಂದು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ. ಕಾರಣ ಈ ಭಾಗದ ರೈತರು ಜೀವ ಕೈಯಲ್ಲಿ ಹಿಡಿದು ವ್ಯವಸಾಯ ಮಾಡುವ ಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.
ಈ ಬಗ್ಗೆ ಸಂಬAಧಪಟ್ಟ ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ರೈತರಿಂದ ಮನವಿ ಸ್ವೀಕರಿಸಿ ಮಾತನಾಡಿದ ಹೆಸ್ಕಾಂ ಸೆಕ್ಷನ್ ಅಧಿಕಾರಿ ಬಿ.ಎಸ್.ಯಲಗೋಡ, ವಿದ್ಯುತ್ ಕಂಬಗಳನ್ನು ಬದಲಾಯಿಸಲು ಬಂದಾಗಲೆಲ್ಲ ನದೀ ನೀರು ಇರುವುದರಿಂದ ಸಾಧ್ಯವಾಗಿಲ್ಲ. ಸದ್ಯ ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಮುಂದಿನ ೧೫ ದಿನಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೈತರಾದ ಸಂಗನಗೌಡ ಪಾಟೀಲ, ಮಲ್ಲಿಕಾರ್ಜುನ ಬಾದರದಿನ್ನಿ, ಮಲ್ಲನಗೌಡ ಬಿರಾದಾರ, ಬಸಪ್ಪ ಗಡೇದ, ಹಣಮಂತ ಬೋಳಿ, ಭೀಮಣ್ಣ ಪತ್ತಾರ, ಹುಸೇನಬಾಷಾ ನದಾಫ ಸೇರಿದಂತೆ ಹಲವರು ಇದ್ದರು.
Related Posts
Add A Comment