ಅಪ್ಪು ಪಟ್ಟಣಶೆಟ್ಟಿಗೆ ಬಿಜೆಪಿ ಟಿಕೆಟ್ ನೀಡಲು ಆಗ್ರಹ | ಶಾಸಕ ಯತ್ನಾಳ ವಿರುದ್ಧ ವಾಗ್ದಾಳಿ | ಭ್ರಷ್ಟಾಚಾರದ ಆರೋಪ
ವಿಜಯಪುರ: ನಗರದಲ್ಲಿ ಭಾರತೀಯ ಜನತಾ ಪಕ್ಷವು ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ನಿಯಂತ್ರಣದಲ್ಲಿದೆ. ಮೂಲ ಕಾರ್ಯಕರ್ತರಿಗೆ ಇಲ್ಲಿ ಬೆಲೆ ಇಲ್ಲ. ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಉಳಿಯಬೇಕಾದರೆ ಈ ಬಾರಿ ಶಾಸಕ ಬಸನಗೌಡ ಯತ್ನಾಳ ಅವರಿಗೆ ಟಿಕೆಟ್ ಕೊಡದೆ, ಕಾರ್ಯಕರ್ತರ ಭಾವನೆಗಳನ್ನು ಗೌರವಿಸುವ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ಕೊಡಬೇಕೆಂದು ಬಿಜೆಪಿಯ ಉಚ್ಛಾಟಿತ ನಾಯಕರಾದ ರವಿ ಬಗಲಿ ಮತ್ತು ರಾಜು ಬಿರಾದಾರ ಆಗ್ರಹಿಸಿದರು.
ಮಂಗಳವಾರ ನಗರದಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷರು ತಪ್ಪು ಸಂದೇಶದಿಂದ ಹಾಗೂ ಶಾಸಕ ಯತ್ನಾಳ್ ಅವರ ಒತ್ತಡಕ್ಕೆ ಮಣಿದು ನಮ್ಮನ್ನು ಉಚ್ಚಾಟಿಸಿದ್ದರೂ ನಾವು ಯಾವ ಪಕ್ಷಕ್ಕೂ ಹೋಗದೆ ಈಗಲೂ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಮುಂದುವರೆದಿದ್ದೇವೆ. ನಮ್ಮೊಂದಿಗೆ ನೂರಾರು ಕಾರ್ಯಕರ್ತರಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೂಲ ಕಾರ್ಯಕರ್ತರನ್ನು ಶಾಸಕ ಯತ್ನಾಳ ಅವರು ಕಡೆಗಣಿಸಿ ತಮ್ಮ ಹಿಂಬಾಲಕರಿಗೆ ಮಣೆ ಹಾಕಿದ್ದರಿಂದ ಅದನ್ನು ಪ್ರತಿಭಟಿಸಿ ನಾವು ಆಗ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಬೇಕಾಯಿತು. ಆಗ ಪಕ್ಷದ ನಾಯಕರೂ ನಮ್ಮ ಮನವೊಲಿಸಲಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ನಮ್ಮ ವಾರ್ಡುಗಳಲ್ಲಿ ಯತ್ನಾಳ ಅವರಿಗೆ ಲೀಡ್ ತಂದುಕೊಟ್ಟಿದ್ದರಿಂದಲೇ ಅವರು ಆಗ ಶಾಸಕರಾಗಿ ಚುನಾಯಿತರಾದದ್ದು ಈಗ ಇತಿಹಾಸ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವೆಲ್ಲ ಬಂಡಾಯ ಅಭ್ಯರ್ಥಿಗಳು ಪಡೆದ ಮತಗಳು ಸುಮಾರು 21,000. ಕಳೆದ ಬಾರಿ ಕೇವಲ 6,000 ಮತಗಳಿಂದ ಗೆದ್ದಿದ್ದ ಶಾಸಕ ಯತ್ನಾಳರಿಗೆ ಈ ಬಾರಿಯೂ ಪಕ್ಷದ ಟಿಕೆಟ್ ನೀಡಿದರೆ ಕಾರ್ಯಕರ್ತರು ಖಂಡಿತ ಪಕ್ಷದಿಂದ ದೂರ ಸರಿಯುತ್ತಾರೆ. ನಾವು ನಮ್ಮ ಜೊತೆಗಿನ ಬಿಜೆಪಿಯ ನೂರಾರು ಮೂಲ ಕಾರ್ಯಕರ್ತರ ಧ್ವನಿಯಾಗಿ ಅವರ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದು ರಾಜ್ಯ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಿ ಪಕ್ಷದ ಅಪ್ಪು ಪಟ್ಟಣಶೆಟ್ಟಿ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಯತ್ನಾಳ ಅವರು ರಾಜ್ಯ ನಾಯಕರು, ಹಿಂದೂ ಹುಲಿ, ಫೈರ್ ಬ್ರ್ಯಾಂಡ್ ಶಾಸಕ ಎಂದು ಕರೆಸಿಕೊಳ್ಳುವ ಅವರು ಪಕ್ಕದ ಬಬಲೇಶ್ವರ ಮತಕ್ಷೇತ್ರದಿಂದ ಸ್ಪರ್ಧಿಸಲಿ. ಈವರೆಗೂ ಅಲ್ಲಿ ಬಿಜೆಪಿ ಗೆದ್ದಿಲ್ಲ. ಇವರ ಸ್ಪರ್ಧೆಯಿಂದಲಾದರೂ ಪಕ್ಷ ಅಲ್ಲಿ ಜಯ ಸಾಧಿಸಲಿ. ಅವರಿಗೆ ನಮ್ಮ ಸಮುದಾಯಗಳ ಬೆಂಬಲವನ್ನು ಕೊಡಿಸಿ, ನಾವೂ ಬೆಂಬಲಕ್ಕೆ ನಿಲ್ತೇವೆ. ಅಲ್ಲಿ ಸ್ಪರ್ಧಿಸಿ ಗೆದ್ದು ರಾಜ್ಯಕ್ಕೆ ಯತ್ನಾಳರು ಮಾದರಿಯಾಗಲಿ ಎಂದು ವ್ಯಂಗ್ಯವಾಡಿದರು.
ಶಾಸಕ ಯತ್ನಾಳರು ತಮಗೆ ಅವಕಾಶ ಸಿಗದಿದ್ದ ಸಂದರ್ಭದಲ್ಲಿ ಪಕ್ಷಾಂತರ ಮಾಡಿದ್ದಾರೆ. ಪಕ್ಷಕ್ಕಿಂತ ತಮಗೆ ಅಧಿಕಾರವೇ ಮುಖ್ಯ ಎಂದು ಹಲವು ಬಾರಿ ಸಾಬೀತುಪಡಿಸಿದ್ದಾರೆ. ಆದರೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರಿಗೆ ಸತತ ಎರಡು ಬಾರಿ ಪಕ್ಷವು ಟಿಕೆಟ್ ನಿರಾಕರಿಸಿದರೂ, ಪಕ್ಷ ಯಾವುದೇ ಸ್ಥಾನ-ಮಾನ ಕೊಡದಿದ್ದರೂ ಪಕ್ಷಾಂತರ ಮಾಡದೇ ಪಕ್ಷನಿಷ್ಠರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾರಣ ಈ ಬಾರಿ ಇವರಿಗೆ ಟಿಕೆಟ್ ನೀಡಿ ಕಾರ್ಯಕರ್ತರ ಭಾವನೆಗಳನ್ನು ಗೌರವಿಸಬೇಕೆಂದು ರಾಜ್ಯ ನಾಯಕರಿಗೆ ಅಗ್ರಹಿಸಿದರು.
ಬಾಬು ಯಳಗಂಟಿ, ಬಸವರಾಜ ಹಳ್ಳಿ, ಅಭಿಷೇಕ ಸಾವಂತ್, ಚಿನ್ನು ಚಿನಗುಂಡಿ ಇದ್ದರು.
ವಿಜಯಪುರ ನಗರದ ಅಭಿವೃದ್ಧಿಗಿಂತ ಹೆಚ್ಚು ಶಾಸಕ ಬಸನಗೌಡ ಯತ್ನಾಳರ ಪಿಎಗಳು ಅಭಿವೃದ್ಧಿಯಾಗಿದ್ದಾರೆ. ಅವರು ಮೊದಲು ಏನಾಗಿದ್ದರು? ಈ ಐದು ವರ್ಷಗಳಲ್ಲಿ ಈಗ ಏನಾಗಿದ್ದಾರೆ? ಅದೆಷ್ಟು ಆಸ್ತಿ-ಪಾಸ್ತಿ ಮಾಡಿದ್ದಾರೆಂದು ನೋಡಿದರೆನೇ ಅರ್ಥವಾಗುತ್ತದೆ. ಈ ಪಿಎ ಗಳ ಮೂಲಕವೇ ಶಾಸಕ ಯತ್ನಾಳರು ಭ್ರಷ್ಟಾಚಾರವೆಸಗುತ್ತಿದ್ದಾರೆಂದು ಬಿಜೆಪಿ ಉಚ್ಚಾಟಿತ ನಾಯಕ ರವಿ ಬಗಲಿ ಗಂಭೀರ ಆರೋಪ ಮಾಡಿದರು.
ಶಾಸಕರು ಭ್ರಷ್ಟಾಚಾರವನ್ನು ನೇರವಾಗಿ ಮಾಡದೆ, ತಮ್ಮ ಸಂಸ್ಥೆಯ ಗೋಶಾಲೆಯ ಹೆಸರಿನಲ್ಲಿ ಮತ್ತು ಜೆಎಸ್ಎಸ್ ಆಸ್ಪತ್ರೆ ಹೆಸರಿನಲ್ಲಿ ಭ್ರಷ್ಟಾಚಾರವೆಸಗುತ್ತಿದ್ದಾರೆ ಎಂದು ಆರೋಪಿಸಿದರು.
ಜಯಮೃತ್ಯುಂಜಯ ಶ್ರೀಗಳ ನೇತೃತ್ವದ ಪಂಚಮಸಾಲಿಗರ ಮೀಸಲಾತಿ ಹೋರಾಟವನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಂಡು ಶ್ರೀಗಳನ್ನು ಬಲಿಪಶು ಮಾಡಿದರು. ಒಮ್ಮೆ ಹಿಂದುತ್ವ ಇನ್ನೊಮ್ಮೆ ಪಂಚಮಸಾಲಿ ಎನ್ನುವ ಯತ್ನಾಳರು ಹಿಂದುತ್ವದ ಮುಖವಾಡ ಧರಿಸಿದ ಕಪಟ ರಾಜಕಾರಣಿಯಾಗಿದ್ದಾರೆ. ಅವರು ಆಧುನಿಕ ಭಸ್ಮಾಸುರನಿದ್ದಂತೆ. ಅನೇಕರ ತಲೆಯ ಮೇಲೆ ಕೈಯಿಟ್ಟು ಭಸ್ಮ ಮಾಡಿದ ಯತ್ನಾಳರು ಈಗ ಜಯಮೃತ್ಯುಂಜಯ ಶ್ರೀಗಳ ತಲೆ ಮೇಲೆ ಕೈ ಇಟ್ಟಿದ್ದಾರೆ. ಮುಂದೆ ತಮ್ಮ ತಲೆ ಮೇಲೆ ಕೈ ಇಟ್ಟುಕೊಂಡು ತಾವೂ ಸಹ ಭಸ್ಮರಾಗುತ್ತಾರೆ ಎಂದು ಭವಿಷ್ಯ ನುಡಿದ ರವಿ ಬಗಲಿ ಅವರು, ಹಿಂದೂ ಹುಲಿ ಎಂದುಕೊಳ್ಳುವ ಯತ್ನಾಳರು ತಮಗೆ ಗಂಡಸ್ತನವಿದ್ದರೆ ಮುಸ್ಲಿಮರು ಪ್ರಾರ್ಥನೆ ಮಾಡುವಾಗ ಧ್ವನಿವರ್ಧಕ ಬಳಸುವುದನ್ನು ಬಂದ್ ಮಾಡಿಸಲಿ ನೋಡೋಣ ಎಂದು ಸವಾಲು ಹಾಕಿದರು.