ಶಾಸಕ ನಡಹಳ್ಳಿ Vs ಮಾಜಿ ಶಾಸಕ ನಾಡಗೌಡ ಚುನಾವಣಾ ಅಖಾಡದಲ್ಲಿ ಸೆಣಸಲು ಸನ್ನದ್ಧ
-ಹುಸನಪ್ಪ ನಡುವಿನಮನಿ
ತಾಳಿಕೋಟಿ: ಮುದ್ದೇಬಿಹಾಳ ಮತಕ್ಷೇತ್ರ ವಿಜಯಪುರ ಜಿಲ್ಲೆಯ ೮ ವಿಧಾನ ಸಭೆ ಕ್ಷೇತ್ರಗಳಲ್ಲಿ ಈ ಬಾರಿ ಅತಿ ಹೆಚ್ಚು ಕುತೂಹಲ ಕೆರಳಿಸಿದ ಹಾಗೂ ಭಾರಿ ಜಿದ್ದಾ ಜಿದ್ದಿನ ಕ್ಷೇತ್ರವಾಗಿದೆ ಎಂದೆನಿಸುತ್ತಿದೆ.
೨೦೧೮ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಎ.ಎಸ್. ಪಾಟೀಲ (ನಡಹಳ್ಳಿ) ಅವರು ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಅಪ್ಪಾಜಿ ನಾಡಗೌಡರನ್ನು ಪರಾಭವಗೊಳಿಸಿ ಪಕ್ಷಕ್ಕೆ ಐತಿಹಾಸಿಕವಾದ ಗೆಲುವು ತಂದುಕೊಟ್ಟಿದ್ದರು. ಈ ಬಾರಿ ಮತ್ತೆ ಈ ಇಬ್ಬರು ದಿಗ್ಗಜ ನಾಯಕರು ಅಖಾಡಾದಲ್ಲಿ ಮುಖಾಮುಖಿಯಾಗಲು ಸರ್ವಸನ್ನದ್ಧರಾಗಿದ್ದಾರೆ. ಆದರೆ ಈ ಬಾರಿ ಕ್ಷೇತ್ರದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳಾಗಿವೆ. ಯಾರ ಕೈ ಮೇಲಾಗುತ್ತದೆ ಎಂದು ಈಗಲೇ ಹೇಳಲು ಅಸಾಧ್ಯವಾಗಿದೆಯಾದರೂ ಈವರೆಗಿನ ಸಮೀಕ್ಷೆಗಳು ಸಧ್ಯಕ್ಕೆ ನಡಹಳ್ಳಿಯವರು ಒಂದು ಹೆಜ್ಜೆ ಮುಂದಿದ್ದಾರೆಂದು ಹೇಳುತ್ತಿವೆ. ಆದರೆ ಚುನಾವಣೆಗಿನ್ನೂ ಒಂದು ತಿಂಗಳಿಗೂ ಅಧಿಕ ಕಾಲಾವಧಿ ಇರುವುದರಿಂದ ಈ ಅವಧಿಯಲ್ಲಿ ಏನು ಬೇಕಾದರೂ ಆಗಬಹುದಾಗಿದೆ.
![WhatsApp Image 2023 04 04 at 6.40.35 PM](https://udayarashminews.com/wp-content/uploads/2023/04/WhatsApp-Image-2023-04-04-at-6.40.35-PM.jpeg)
ಜೆಡಿಎಸ್‌ನಿಂದ ಡಾ.ಸಿ.ಎಸ್. ಸೋಲಾಪೂರ ಅಧಿಕೃತ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆಯಾಗಿದೆ. ಆದರೆ ಜೆಡಿಎಸ್ ತ್ರಿಕೋನ ಸ್ಪರ್ಧೆಯನ್ನು ನೀಡುವಷ್ಟು ಸಶಕ್ತವಾಗಿಲ್ಲ. ಕ್ಷೇತ್ರದಲ್ಲಿ ಈ ಪಕ್ಷದ ಸಂಘಟನೆ ದುರ್ಬಲವಾಗಿರುವುದರಿಂದ ಇಲ್ಲಿ ಬಿಜೆಪಿ, ಕಾಂಗ್ರೆಸ್ ಮಧ್ಯ ನೇರ ಸ್ಪರ್ಧೆಯ ಸಾಧ್ಯತೆಗಳೇ ಹೆಚ್ಚಾಗಿವೆ.
ಕಾಂಗ್ರೆಸ್‌ನ ಮಾಜಿ ಸಚಿವ ಅಪ್ಪಾಜಿ ನಾಡಗೌಡರು ಇದು ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿ ಚಾಲೆಂಜ್ ಆಗಿ ತೆಗೆದುಕೊಂಡಿದ್ದಾರೆAದು ಅವರ ದಿಟ್ಟ ಮಾತುಗಳಿಂದ ಸ್ಪಷ್ಟವಾಗುತ್ತಿದೆ. ತಮ್ಮ ೪೦ ವರ್ಷಗಳ ರಾಜಕೀಯ ಅನುಭವವನ್ನು ಒರೆಗೆ ಹಚ್ಚುತ್ತಿದ್ದು ಬಿಜೆಪಿಯ ಕೆಲವು ಅತೃಪ್ತ ಮುಖಂಡರು ನಡಹಳ್ಳಿಯವರೊಂದಿಗಿನ ತೀವ್ರ ಭಿನ್ನಾಭಿಪ್ರಾಯದಿಂದಾಗಿ ಬಹಿರಂಗವಾಗಿ ಅವರನ್ನು ಬೆಂಬಲಿಸುತ್ತಿರುವುದು ನಡಹಳ್ಳಿಯವರಿಗೆ ತೊಡಕಾಗಿ ಪರಿಣಮಿಸಲಿದೆ. ಇದಕ್ಕಿಂತಲೂ ಮುಖ್ಯವಾಗಿ ಶಾಸಕ ನಡಹಳ್ಳಿ ಅವರ ಸಹೋದರ ಶಾಂತಗೌಡ ಪಾಟೀಲ ನಡಹಳ್ಳಿ ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ನಾಡಗೌಡರಿಗೆ ಆನೆಬಲ ಬಂದAತಾಗಿದೆ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪೂರಕವಾಗಿರುವ ವಾತಾವರಣವು ಅವರಿಗೆ ಪ್ಲಸ್ ಆಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿವೆ.
![WhatsApp Image 2023 04 04 at 6.41.32 PM](https://udayarashminews.com/wp-content/uploads/2023/04/WhatsApp-Image-2023-04-04-at-6.41.32-PM.jpeg)
ಇನ್ನೊಂದು ಕಡೆ ಎ.ಎಸ್. ಪಾಟೀಲ (ನಡಹಳ್ಳಿ) ಚುನಾವಣಾ ತಂತ್ರಗಾರಿಕೆಗೆ ನಿಸ್ಸೀಮರಾದ ವೃತ್ತಿಪರ ರಾಜಕಾರಣಿ. ಎಂತಹ ಪ್ರತಿಕೂಲ ಪರಿಸ್ಥಿತಿಯಿದ್ದರೂ ಅದನ್ನು ಸಮರ್ಥವಾಗಿ ಎದುರಿಸಿ ದಡ ಸೇರಬಹುದಾದ ಚಾಣಾಕ್ಷ ನಾಯಕ. ಇದು ಅವರ ರಾಜಕಾರಣ ಟ್ರ್ಯಾಕ್ ರಿಕಾರ್ಡೇ ಹೇಳುತ್ತದೆ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳದ ಜಾಯಮಾನದವರಲ್ಲ ಅವರು.
ಶಾಸಕರು ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಅನುದಾನ ತಂದು ಕೆಲಸ ಮಾಡಿದ ಆತ್ಮವಿಶ್ವಾಸದ ಜೊತೆಗೆ ತಾವು ನಿರಂತರವಾಗಿ ಮಾಡುತ್ತಾ ಬಂದಿರುವ ಜನಸೇವಾ ಕಾರ್ಯಗಳು ತಮ್ಮ ಕೈ ಬಿಡಲಾರದೆಂಬ ವಿಶ್ವಾಸ ಅವರಲ್ಲಿದೆ. ಪಕ್ಷದ ಕೆಲವು ಮುಖಂಡರಲ್ಲಿರುವ ಅಸಮಾಧಾನ ನಡಹಳ್ಳಿ ಅವರಿಗೆ ಮೈನಸ್ ಪಾಯಿಂಟ್ ಆಗಲಿದೆಯಾದರೂ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆಂದು ಪಕ್ಷದ ಮೂಲಗಳು ಹೇಳುತ್ತವೆ.
ಅದೇನೆ ಇರಲಿ ಈ ಬಾರಿ ಮುದ್ದೇಬಿಹಾಳ ಕ್ಷೇತ್ರದಲ್ಲಿ ಭಾರಿ ಬಿಗ್ ಫೈಟ್ ಆಗುವುದಂತೂ ಖಚಿತ. ಇಲ್ಲಿ ಒಂದು ಥರಾ ೨೦-೨೦ ಕ್ರಿಕೆಟ್ ಮ್ಯಾಚ್‌ನಂತೆ ಚುನಾವಣೆ ಆಗುವ ಸಾಧ್ಯತೆಗಳಿವೆ. ಈ ಚುನಾವಣೆ ಕೇವಲ ಫಲಿತಾಂಶವನ್ನು ಮಾತ್ರ ನೀಡದೆ ಓರ್ವರ ರಾಜಕೀಯ ಭವಿಷ್ಯವನ್ನೂ ಸಹ ನಿರ್ಧರಿಸಲಿದೆ ಎಂದು ಹೇಳಬಹುದಾಗಿದೆ.