ವಿಜಯಪುರ: ಬುದ್ಧ, ಬಸವ, ಅಂಬೇಡ್ಕರ ಅವರ ವಿಚಾರಧಾರೆಗಳ ಅಡಿಯಲ್ಲಿ ಕಾಂಗ್ರೆಸ್ ಸರ್ವ ಜನಾಂಗಗಳ ಹಿತ ಕಾಪಾಡುತ್ತಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಸಾರವಾಡ, ದದಾಮಟ್ಟಿ, ಹೊನಗನಹಳ್ಳಿ ಮತ್ತು ಸವನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು.
ಈಗಿನ ಅಸಮರ್ಥ ಸರಕಾರದಿಂದ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ ಆಡಳಿತವನ್ನು ಬಯಸುತ್ತಿದ್ದಾರೆ. ನಮ್ಮ ಪಕ್ಷ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮುದಾಯಗಳ ಅಭ್ಯುದಯಕ್ಕಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ, ಬಿಜೆಪಿ ಜನರ ಭಾವನೆಗಳನ್ನು ಕೆರಳಿಸಿ ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಅಲ್ಲದೇ, ಮನುಸ್ಮೃತಿ ಜಾರಿ ಮಾಡಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಜೆಡಿಎಸ್ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ವಿರುದ್ಧ ಜಾತಿ, ಧರ್ಮದ ಆದಾರದ ಮೇಲೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದೆ. ಈ ಮೂಲಕ ಅತಂತ್ರ ಫಲಿತಾಂಶ ಬಂದು ಅದರಿಂದ ತನಗೆ ಲಾಭ ಗಳಿಸುವ ನಿಟ್ಟಿನಲ್ಲಿ ತಂತ್ರ ರೂಪಿಸುತ್ತಿದೆ. ಆದರೆ, ಅಹಿಂದ ಮತಗಳನ್ನು ವಿಭಜಿಸುವ ಜೆಡಿಎಸ್ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಅವರು ಹೇಳಿದರು.
ಸಾರವಾಡ ಮತದಾರರ ಉಪಕಾರ ಯಾವತ್ತೂ ಮರೆಯಲ್ಲ. ಪ್ರಧಾನಿ ಖುದ್ದಾಗಿ ಬಂದು ಪ್ರಚಾರ ಮಾಡಿದ್ದರೂ ಇಲ್ಲಿನ ಜನ ಕಳೆದ ಬಾರಿ 1600 ಮತಗಳ ಲೀಡ್ ನೀಡಿದ್ದಾರೆ. ನಾವು ರೂಪಿಸುವ ಪ್ರತಿಯೊಂದು ಯೋಜನೆಗಳಲ್ಲಿ ಸಾರವಾಡ ಗ್ರಾಮಕ್ಕೆ ಅವಕಾಶ ಕಲ್ಪಿಸಿದ್ದೇವೆ. ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ನೆರವಾಗಿ ಬಿಜೆಪಿ ಸರಕಾರದಿಂದಲೂ ಮೆಚ್ಚುಗೆ ಪಡೆದಿದ್ದೇವೆ ಎಂದು ಅವರು ಹೇಳಿದರು.
ಶಾಲೆಗಳು ಮಂದಿರ ಮತ್ತು ಮಕ್ಕಳು ದೇವರಿದ್ದಂತೆ. ಈ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಿನ ಐದು ವರ್ಷಗಳಲ್ಲಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುತ್ತೇವೆ. ಜನರ ಜೀವನ ಸುಧಾರಿಸಿ ಸರ್ವಾಂಗೀಣ ಅಭಿವೃದ್ಧಿ ಮಾಡುವುದು ನಮ್ಮ ಗುರಿಯಾಗಿದೆ. ಸಣ್ಣ ಗ್ರಾಮ ಮತ್ತು ದೊಡ್ಡ ಗ್ರಾಮ ಎಂದು ಯಾವುದೇ ತಾರತಮ್ಯ ತೋರದೆ ಸಮಾನವಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು