ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ವಿಜಯ ಪತಾಕೆ
ವಿಜಯಪುರ: ತೀವ್ರ ಕುತೂಹಲ ಕೆರಳಿಸಿದ್ದ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ರಮೇಶ ಜಿಗಜಿಣಗಿ ಭರ್ಜರಿ ಗೆಲುವಿನ ನಗೆ ಬೀರಿದ್ದು, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಪ್ರೊ.ರಾಜು ಆಲಗೂರ ಅವರನ್ನು ೭೫೭೭೮ ಮತಗಳ ಅಂತರದಿಂದ ಸೋಲಿಸಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.
ರಮೇಶ ಜಿಗಜಿಣಗಿ ಅವರಿಗೆ ೬೬೯೦೫೫ ಮತಗಳನ್ನು ಪಡೆದರೆ, ಕಾಂಗ್ರೆಸ್ ಪಕ್ಷದ ಪ್ರೊ.ರಾಜು ಆಲಗೂರ ಅವರಿಗೆ ೫೯೩೨೭೭ ಮತಗಳನ್ನು ಪಡೆದುಕೊಂಡರು. ಕೆಆರ್‌ಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಗಣಪತಿ ರಾಠೋಡ ಹಂಜಗಿ ಅವರಿಗೆ ೭೬೫೨, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಸ್ಪರ್ಧೆ ಮಾಡಿದ ಜಿತೇಂದ್ರ ಕಾಂಬಳೆ ಅವರಿಗೆ ೧೬೦೫, ಎಸ್‌ಯುಸಿಐ ಪಕ್ಷದಿಂದ ಸ್ಪರ್ಧೆ ಮಾಡಿದ ನಾಗಜ್ಯೋತಿ ಡಿ.ಎಂ. ಅವರಿಗೆ ೨೩೭೫, ರಾಜಕುಮಾರ ಅಪ್ಪಾಸಾಹೇಬ ಹೊನಕಟ್ಟಿ ಅವರಿಗೆ ೧೭೮೪, ರಾಮಜಿ ಯಮನಪ್ಪ ಬುದ್ಧಪ್ರಿಯಾ ಅವರಿಗೆ ೨೪೦೮, ಭೋವಿ ತಾರಾಬಾಯಿ ಅವರಿಗೆ ೪೩೪೨ ಮತಗಳು ಪಡೆದುಕೊಂಡಿದ್ದಾರೆ.
ಒಟ್ಟು ೨೨ ಸುತ್ತುಗಳಲ್ಲಿ ಮತ ಎಣಿಕೆ ನಡೆದಿದ್ದು, ಪ್ರತಿಯೊಂದು ಸುತ್ತಿನಲ್ಲಿ ಜಿಗಜಿಣಗಿ ಅವರು ಮುನ್ನಡೆ ಕಾಯ್ದುಕೊಳ್ಳುತ್ತಾ ಹೋದರು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಪ್ರೊ.ರಾಜು ಆಲಗೂರ ಯಾವೊಂದು ಸುತ್ತಿನಲ್ಲಿಯೂ ಮುನ್ನಡೆ ಕಾಯ್ದುಕೊಳ್ಳಲಿಲ್ಲ. ಐದು ಸಾವಿರ, ನಾಲ್ಕು ಸಾವಿರ, ಒಮ್ಮೊಮ್ಮೆ ೧೫ ಸಾವಿರ ಹೀಗೆ ಅವರ ಗೆಲುವಿನ ಅಂತರ ಸುತ್ತಿನಿಂದ ಸುತ್ತಿಗೆ ಅಧಿಕವಾಗುತ್ತಲೇ ಹೋಯಿತು.
ಅಂಚೆ ಮತದಲ್ಲೂ ಬಿಜೆಪಿ ಮೇಲುಗೈ
ಅಂಚೆ ಮತದಾನಲ್ಲೂ ಸಂಬಂಧಿಸಿದಂತೆಯೂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರೇ ಅತ್ಯಧಿಕ ಅಂದರೆ ೩೭೨೬ ಮತಗಳನ್ನು ಪಡೆದುಕೊಂಡರು. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಪ್ರೊ.ರಾಜು ಆಲಗೂರ ೨೨೭೫, ಗಣಪತಿ ರಾಠೋಡ ೩೯, ಜಿತೇಂದ್ರ ಕಾಂಬಳೆ ೧೮, ನಾಗಜ್ಯೋತಿ ೧೭, ರಾಜಕುಮಾರ ಹೊನಕಟ್ಟಿ ೧೦, ರಾಮಜಿ ಯಮನಪ್ಪ ಅವರಿಗೆ ೧೨ ಹಾಗೂ ತಾರಾಬಾಯಿ ಭೋವಿ ಅವರಿಗೆ ೧೧ ಹಾಗೂ ನೋಟಾಕ್ಕೆ ೨೦ ಮತಗಳು ಚಲಾವಣೆಯಾಗಿದ್ದು, ಅಂಚೆ ಮತದಾನದಲ್ಲಿ ೯೫೯ ಮತಗಳು ತಿರಸ್ಕೃತವಾಗಿವೆ.
ನೋಟಾ ೭೪೮೨ ಮತ
ಅಷ್ಟ ಅಭ್ಯರ್ಥಿಗಳು ಕಣದಲ್ಲಿದ್ದ ಪ್ರಸ್ತುತ ಸ್ಪರ್ಧೆಯಲ್ಲಿ ನೋಟಾಕ್ಕೂ ಸಹ ಅತ್ಯಧಿಕ ಪ್ರಮಾಣದಲ್ಲಿ ಮತ ಚಲಾವಣೆಯಾಗಿದ್ದು, ಒಟ್ಟು ೭೪೮೨ ನೋಟಾ ಮತಗಳು ಚಲಾವಣೆಯಾಗಿವೆ.
ಪ್ರಸಕ್ತ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಒಟ್ಟು ಶೇ.೬೬.೩೨ ರಷ್ಟು ಮತದಾನವಾಗಿತ್ತು. ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧೯೪೬೦೯೦ ಮತದಾರರಿದ್ದು ಆ ಪೈಕಿ ೧೨೯೦೫೮೦ ಮತದಾರರು ಮತಚಲಾಯಿಸಿದ್ದಾರೆ. ಆ ಪೈಕಿ ೯೮೭೯೭೪ ಒಟ್ಟು ಪುರುಷ ಮತದಾರರ ಪೈಕಿ ೬೬೪೭೨೯ ಪುರುಷ ಮತದಾರರು ಮತಚಲಾಯಿಸಿದ್ದು, ೯೫೭೯೦೬ ಮಹಿಳಾ ಮತದಾರರ ಪೈಕಿ ೬೨೫೭೯೭ ಮಹಿಳಾ ಮತದಾರರು ಮತಚಲಾಯಿಸಿದ್ದಾರೆ, ಅದೇ ತೆರನಾಗಿ ಒಟ್ಟು ೨೧೦ ಇತರೆ ಮತದಾರರ ಪೈಕಿ ೫೪ ಜನ ಇತರೆ ಮತದಾರರು ಮತಚಲಾಯಿಸಿದ್ದಾರೆ.
ಅನಂತ ಕೋಟಿ ಧನ್ಯವಾದ ಅರ್ಪಿಸುವೆ
“ದೈವಸಮಾನರಾದ ವಿಜಯಪುರ ಮತದಾರರು ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿದ್ದಾರೆ, ಅವರ ಸೇವೆ ಮಾಡುವ ಮೂಲಕ ಈ ಋಣ ತೀರಿಸುವೆ, ನನ್ನ ಗೆಲುವಿಗಾಗಿ ನನ್ನ ಕಾರ್ಯಕರ್ತ ಬಂಧುಗಳು, ಮುಖಂಡರು, ಅಭಿಮಾನಿಗಳು ಅಪಾರವಾಗಿ ಶ್ರಮಿಸಿದ್ದಾರೆ, ಅವರೆಲ್ಲರ ಪ್ರೀತಿ, ಅಭಿಮಾನ ಹಾಗೂ ಶ್ರಮಕ್ಕೆ ನಾನು ಎಷ್ಟು ಧನ್ಯವಾದ ಅರ್ಪಿಸಿದರೂ ಕಡಿಮೆ, ಅವರೆಲ್ಲರನ್ನೂ ಈ ಸಂದರ್ಭದಲ್ಲಿ ನೆನೆಸಿ, ಮತ್ತೊಮ್ಮೆ ಸೇವೆ ಮಾಡಿ, ವಿಜಯಪುರ ನಗರಕ್ಕೆ ಈ ಹಿಂದಿನಂತೆಯೇ ಅಭಿವೃದ್ಧಿಗಾಗಿ ಶ್ರಮಿಸುವೆ.”
– ರಮೇಶ ಜಿಗಜಿಣಗಿ
ಸೋಲು ಒಪ್ಪಿಕೊಳ್ಳುವೆ
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನ್ನ ಸೋಲನ್ನು ಒಪ್ಪಿಕೊಳ್ಳುತ್ತೇನೆ ಹಾಗೂ ಗೆಲುವು ಸಾಧಿಸಿದ ರಮೇಶ ಜಿಗಜಿಣಗಿ ಅವರಿಗೆ ಅಭಿನಂದಿಸುತ್ತೇನೆ. ರಮೇಶ ಜಿಗಜಿಣಗಿಯವರು ಮಾಡುವ ಎಲ್ಲ ಉತ್ತಮ ಕಾರ್ಯಗಳಿಗೆ ನಾನು ಸಹಕಾರ ನೀಡುತ್ತೇನೆ. ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ನನಗೆ ಮತ ನೀಡಿ, ಆಶೀರ್ವದಿಸಿದ ಎಲ್ಲ ಮತದಾರರಿಗೆ ಹೃದಯಪೂರ್ವಕವಾದ ಧನ್ಯವಾದ ಸಮರ್ಪಿಸುತ್ತಿದ್ದೇನೆ.”
– ರಾಜು ಆಲಗೂರ, ಪರಾಜಿತ ಅಭ್ಯರ್ಥಿ

