ವಿಜಯಪುರ: ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಾಡಿನಲ್ಲಿ ರಾಜಯೋಗವಿತ್ತು. ಆದರೆ ಡಂಬಲ್ ಎಂಜಿನ್ ಸರಕಾರದ ಈ ಅವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಅಭಿವೃದ್ಧಿ ಸುವರ್ಣ ಯುಗ ಪುನಾರಂಭವಾಗಲಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ತಿಕೋಟಾ ತಾಲೂಕಿನ ಹೊನವಾಡ, ಕೋಟ್ಯಾಳ ಮತ್ತು ಹರನಾಳ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು,
ಹೊನವಾಡದಲ್ಲಿ ಮಾತನಾಡಿದ ಅವರು ಸೂರ್ಯ, ಚಂದ್ರ ಇರುವವರೆಗೆ ಈ ಭಾಗದ ಜನರ ಬದುಕು ಹಸನಾಗಿರಿಸಲು ಹೊನ್ನದ ರೂಪದಲ್ಲಿ ನೀರು ನೀಡಿದ್ದೇನೆ. ನಾನು ಮಾಡಿದ ಕೆಲಸ ನೋಡಿ ಮತ ಹಾಕಿ ಎಂದು ಮನವಿ ಮಾಡಿದರು.
ಈ ಭಾಗದಲ್ಲಿ ಕೈಗೊಂಡ ನೀರಾವರಿ ಮತ್ತು ಅಭಿವೃದ್ಧಿ ಕಾರ್ಯಗಳು ಉತ್ತಮ ಫಲ ನೀಡುತ್ತಿದ್ದು, ರೈತರ ಆದಾಯ, ವ್ಯಾಪಾರ ವಹಿವಾಟು ಹತ್ತು ಪಟ್ಟು ಹೆಚ್ಚಾಗಿದೆ. ಇಲ್ಲಿನ ಜನರ ಆರ್ಥಿಕ ಸ್ಥಿತಿ ಸುಧಾರಿಸಿ ಸುಖ ಸಂಸಾರ ನಡೆಸಲು ಸಾಧ್ಯವಾಗಿದೆ. ಈ ಸಲ ಪ್ರತಿ ಪಕ್ಷದಲ್ಲಿದ್ದರೂ ಶಕ್ತಿಮೀರಿ ಕೆಲಸ ಮಾಡಿದ ಸಂತೃಪ್ತಿ ಇದೆ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಜಿಲ್ಲೆಯಲ್ಲಿ ಒಂದು ಸಾವಿರ ಕಿ.ಮೀ. ಮುಖ್ಯ ಕಾಲುವೆ ನಿರ್ಮಿಸಿದ್ದೇನೆ. ಈಗಿನ ಸರಕಾರದಲ್ಲಿ ಒಂದು ಕಿ.ಮೀ ಕಾಲುವೆ ಆಗಿಲ್ಲ. ಹೊನವಾಡ ಈಗ ಅಭಿವೃದ್ದಿಯಿಂದಾಗಿ ಹೊನ್ನವಾಡ ಆಗಿದೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ ಅವರ ನಂತರ ಮಲ್ಲಿಕಾರ್ಜುನ ಖರ್ಗೆಯವರು ಸಮಾಜದಲ್ಲಿ ದೊಡ್ಡ ನಾಯಕರಾಗಿ ಬೆಳೆದು ಈಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಜಿಲ್ಲೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‍ನ್ನು ಗೆಲ್ಲಿಸಿ, ಅಧಿಕಾರಕ್ಕೆ ತಂದರೆ ಖರ್ಗೆಯವರ ಕೈಬಲ ಪಡಿಸಿದಂತಾಗುತ್ತದೆ. ಸಂವಿಧಾನ ಬದಲಾಯಿಸುವುದಾಗಿ ಹೇಳುವ ಬಿ.ಜೆ.ಪಿಯನ್ನು ಯಾವುದೇ ಕಾರಣಕ್ಕೂ ಹತ್ತಿರ ಬಿಟ್ಟು ಕೊಳ್ಳಬಾರದು ಎಂದು ಅವರು ಹೇಳಿದರು.
ಮುಖಂಡ ಅರವಿಂದ ಮಾಲಗಾರ ಮಾತನಾಡಿ ಎಂ.ಬಿ.ಪಾಟೀಲರು ನಾವು ಕೇಳದಿದ್ದರೂ ಎಲ್ಲ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಅವರನ್ನು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಬೆಂಬಲಿಸೋಣ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ವಿಜಯಕುಮಾರ ಹಿರೇಮಠ, ದತ್ತ ಮೊಹಿತೆ, ಅರವಿಂದ ಮಾಲಗಾರ, ಧರೇಪ್ಪ, ಸಿದ್ದು ಬೆಳಗಾವಿ, ಶಂಕರ ಪಡತರೆ, ಧರೇಪ್ಪ ಚಾವರ, ಶಂಕರ ಪಡತರೆ, ಶರಣು ಗಡದೆ, ಪ್ರಶಾಂತ ತಳಕೇರಿ, ದುಂಡಪ್ಪ ವಾಲಿಕಾರ, ಭೀಮಣ್ಣ ಬಳೂಚಿ, ಅಡಿವೆಪ್ಪ ಸಾಲಗಲ್, ಸುರೇಶ ಪಾಟೀಲ, ಶಾಮು ಬಡಳ್ಳಿ, ಶೈಲೇಂದ್ರ ಭಾವಿಮನಿ, ಸುನೀಲ ತುದಿಗಾಲ, ಧರೇಪ್ಪ.ಎಚ್.ಇ, ಸದಾಶಿವ ಚಿಗದೋಳ, ಸಂಜು ಕಳ್ಳಿಮನಿ ಮುಂತಾದವರು ಉಪಸ್ಥಿತರಿದ್ದರು.