ಇಂಡಿ : ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ವಿರುದ್ಧ ಬಹುಜನ ಸಮಾಜ ಪಕ್ಷದ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಯದರ್ಶಿ ನಾಗೇಶ ಶಿವಶರಣ ಚುನಾವಣೆ ಅಧಿಕಾರಿ, ತಹಶಿಲ್ದಾರ ನಾಗಯ್ಯ ಹಿರೇಮಠ ಅವರಿಗೆ ದೂರು ಸಲ್ಲಿಸಿದ್ದಾರೆ.
ತಾಲ್ಲೂಕಿನ ಲಚ್ಯಾಣ ಗ್ರಾಮದ ಶ್ರೀ ಸಿದ್ಧಲಿಂಗ ಮಹಾರಾಜರ ದೇವಸ್ಥಾನದ ಒಳಗಡೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ತಮ್ಮ ಪರವಾಗಿ ಮತಯಾಚನೆ ಮಾಡಿದ್ದಾರೆ. ಮಾ.31ರಂದು ಮಧ್ಯಾಹ್ನ 12 ಗಂಟೆಯಿಂದ 1:30 ಗೆ ಮತಯಾಚನೆ ಮಾಡಿದ್ದಾರೆ. ಮುಖ್ಯ ಚುನಾವಣೆ ಅಧಿಕಾರಿಗಳ ಸೂಚನೆ ಮೇರೆಗೆ ಯಾವುದೇ ಗುಡಿ ಗುಂಡಾರ, ಮಜೀದಿ ಮುಂತಾದ ಧಾರ್ಮಿಕ ಸ್ಥಳದಲ್ಲಿ ಯಾವುದೇ ವ್ಯಕ್ತಿ ತಮ್ಮ ಪರ ಮತ ಯಾಚನೆ ಪ್ರಚಾರ ಮಾಡುವಂತಿಲ್ಲ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಮತ್ತು ಇತರೆ ಸೇರಿ ನೀತಿಸಂಹಿತೆ ಉಲ್ಲಂಘಿಸಿ ಸಭೆ ಮತ್ತು ಮತಯಾಚನೆ ಮಾಡಿದ್ದಾರೆ. ಇದು ಸಾವಿರಾರು ಭಕ್ತರ ಮನಸ್ಸಿಗೆ ಘಾಸಿ ಉಂಟು ಮಾಡುವುದರ ಜೊತೆಗೆ ಉದ್ದೇಶಪೂರ್ವಕವಾಗಿ ಚುನಾವಣೆ ಆಯೋಗದ ಆದೇಶವನ್ನು ಮೀರಿದ್ದಾರೆ. ತಕ್ಷಣವೇ ಕೂಲಂಕುಷವಾಗಿ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.