ವಿಜಯಪುರ: ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಬಡ ಕಟ್ಟಡ ಕಾರ್ಮಿಕನಿಗೆ ಶಸ್ತ್ರಚಿಕಿತ್ಸೆಗೆ ನೆರವಾಗುವ ಮೂಲಕ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ವಿಜಯಪುರ ನಗರದ ಇಂಡಿ ರೋಡ್ ನಿವಾಸಿ ಹಣಮಂತ ಗೋಠೆ(28) ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಕಟ್ಟಡ ಕೂಲಿ ಕಾರ್ಮಿಕರಾಗಿರುವ ಈ ಯುವಕ ತಂದೆ, ತಾಯಿ ಮತ್ತು ಪತ್ನಿಯನ್ನು ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದರು. ಈ ವಿಷಯ ತಿಳಿದ ಸುನೀಲಗೌಡ ಪಾಟೀಲ ಅವರು, ಯುವಕನಿಗೆ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈಗ ಸಂಪೂರ್ಣ ಗುಣಮುಖನಾದ ಯುವಕ ಎಂಎಲ್ಸಿ ಸುನೀಲಗೌಡ ಅವರ ಮನೆಗೆ ಆಗಮಿಸಿ ಕೃತಜ್ಞತೆ ಸಲ್ಲಿಸಿದ್ದಾನೆ.
ಈ ಸಂದರ್ಭಲ್ಲಿ ಮಾತನಾಡಿದ ಅಪ್ಪುಗೌಡ ಇಂಡಿ, ಶಬ್ಬೀರ ಪಾಟೀಲ, ಗೋವಿಂದ ಪವಾರ, ಕಿಟ್ಟು ಗಾಡಿವಡ್ಡರ ಮುಂತಾದವರು, ಹಣಮಂತ ಗೋಠೆ ಅವರಿಗೆ ಹಾರ್ಟ್ ಪ್ರಾಬ್ಲೆಮ್ ಆಗಿತ್ತು. ಖಾಸಗಿ ಚಿಕಿತ್ಸೆಗೆ ಹೋದಾಗ ರೂ. 1.20 ಲಕ್ಷ ಖರ್ಚಾಗುತ್ತದೆ ಎಂದು ಹೇಳಿದರು. ಮೇಲಾಗಿ ಈ ಯುವಕನಿಗೆ ಯಾವುದೇ ಆರೋಗ್ಯ ಸ್ಕೀಂ ಗಳ ಕಾರ್ಡು ಕೂಡ ಇರಲಿಲ್ಲ. ಹೀಗಾಗಿ ಸುನೀಲಗೌಡ ಪಾಟೀಲ ಅವರನ್ನು ಭೇಟಿಯಾಗಿ ವಿಷಯ ತಿಳಿಸಿದಾಗ ಅವರು ಕೂಡಲೇ ಸ್ಪಂದಿಸಿ ಉಚಿತವಾಗಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಮೂಲಕ ಯುವಕನಿಗೆ ಪುನರ್ಜನ್ಮ ನೀಡಿದ್ದಾರೆ. ಎಂ. ಬಿ. ಪಾಟೀಲ ಮತ್ತು ಸುನೀಲಗೌಡ ಪಾಟೀಲ ಅವರು ನಮ್ಮ ಸಮಾಜದವರ ಬೇಡಿಕೆಗಳಿಗೆ ಬೀಗರು ಎಂದು ಆತ್ಮೀಯತೆಯಿಂದ ಸ್ಪಂದಿಸುತ್ತಿದ್ದಾರೆ. ಅವರಿಗೆ ನಮ್ಮ ಸಮಾಜ ಮತ್ತು ಜೈ ಹನುಮಾನ ಫುಟಬಾಲ್ ಕ್ಲಬ್ ವತಿಯಿಂದ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಸುನೀಲಗೌಡ ಪಾಟೀಲ ಮಾತನಾಡಿ, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ. ಈ ಯುವಕ ಕಡುಬಡವನಾಗಿದ್ದು, ಯಾರೂ ಈತನಿಗೆ ಆಸರೆ ಇರಲಿಲ್ಲ. ಹೀಗಾಗಿ ಆತನಿಗೆ ಸ್ಟಂಟ್ ಅಳವಡಿಸುವ ಚಿಕಿತ್ಸೆಗೆ ಅಗತ್ಯವಾಗಿರುವ ನೆರವನ್ನು ಒದಗಿಸಿದ್ದೇನೆ ಎಂದು ತಿಳಿಸಿದರು.