ವಿಜಯಪುರ: ಧರಣಿ ಮುಗಿಸುವ ದಿನ ನೀಡಿದ ಭರವಸೆಯಂತೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಮೀಸಲಾತಿ ಹೆಚ್ಚಳ ಆದೇಶದ ಅಧಿಕೃತ ಪ್ರತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪಡೆದು, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀಗಳಿಗೆ ನೀಡಿದರು.
ಎರಡು ವರ್ಷಗಳಿಗಿಂತ ಹೆಚ್ಚು ನಿರಂತರವಾಗಿ ಹೋರಾಟ ಮಾಡಿದ ಪ್ರತಿಫಲವಾಗಿ ಇಡೀ ಲಿಂಗಾಯತ ಸಮುದಾಯದವರಿಗೆ ಹೊಸ 2d ವರ್ಗ ಸೃಷ್ಟಿಸಿ, ಶೇ 5 ರಿಂದ 7ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕಾರಣವಾಯಿತು. ಮೀಸಲಾತಿ ಘೋಷಣೆ ಮಾಡಿದಂತೆ, ಅಧಿಕೃತ ಆದೇಶ ಪ್ರತಿಯನ್ನು ಸಿಎಂ ಅವರಿಂದ ಪಡೆದು, ಶ್ರೀಗಳಿಗೆ ಹಸ್ತಾಂತರಿಸಿದೆ.
ನಂತರ ಶ್ರೀಗಳೊಂದಿಗೆ, ಸಮಾಜದ ಮುಖಂಡರು ಮುಖ್ಯಮಂತ್ರಿ ಗಳ ಮನೆಗೆ ತೆರಳಿ ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಕೇವಲ ಪಂಚಮಸಾಲಿ ಸಮಾಜಕ್ಕೆ ಸೀಮಿತವಾಗದೆ, ನ್ಯಾಯಯುತವಾಗಿ ಮೀಸಲಾತಿ ಸಿಗಬೇಕಾದ ಎಲ್ಲ ಸಮುದಾಯಗಳ ಪರವಾಗಿ ಧ್ವನಿ ಎತ್ತಿರುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳರು ತಿಳಿಸಿದ್ದಾರೆ.
ಶಾಸಕರಾದ ಸಿದ್ದು ಸವದಿ, ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಎಂ.ಎಸ್.ರುದ್ರಗೌಡರ, ಮುಖಂಡರಾದ ಬಿ.ಎಸ್.ಪಾಟೀಲ ನಾಗರಾಳ ಹುಲಿ ಮತ್ತಿತರರು ಇದ್ದರು.