ಬಿಜೆಪಿಯಿಂದ ಜಾತಿಗಳಲ್ಲಿ ಜಗಳ ಹಚ್ಚುವ ಕೆಲಸ | ಯಥಾಸ್ಥಿತಿ ಕಾಯ್ದುಕೊಳ್ಳದಿದ್ದರೆ ಹೋರಾಟದ ಎಚ್ಚರಿಕೆ
ವಿಜಯಪುರ: ಬಿಜೆಪಿ ಸರ್ಕಾರವು ನ್ಯಾ.ಸದಾಶಿವ ಆಯೋಗವನ್ನು ಜಾರಿಗೊಳಿಸುವ ಮೂಲಕ ಸಮಾಜದಲ್ಲಿ ಒಡಹುಟ್ಟಿದ ಸಹೋದರರಂತಿದ್ದ ಪರಿಶಿಷ್ಟ ಜಾತಿಗಳನ್ನು ಒಡೆದು ಅವರವರಲ್ಲಿಯೇ ಒಳಜಗಳ ಹಚ್ಚುವ ಕೆಲಸ
ಮಾಡಿದ್ದು ಖಂಡನೀಯ ಎಂದು ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ ಚವ್ಙಾಣ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ನಗರದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರದ ಈ ಕ್ರಮದಿಂದ ಸಮಾಜದಲ್ಲಿ ಜಾತಿ-ಜಾತಿಗಳ ನಡುವೆ ಸಂಘರ್ಷಗಳು ಏರ್ಪಟ್ಟು
ಆಶಾಂತಿ ಮತ್ತು ಆರಾಜಕತೆಗಳು ಸೃಷ್ಟಿಯಾಗಿ, ಸಮಾಜದ ಶಾಂತಿಗೆ ಭಂಗವುಂಟಾಗುತ್ತದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರವು 1976 ರಲ್ಲಿ ಸಂಸತ್‌ನಲ್ಲಿ ಬಿಲ್ ಪಾಸ್ ಮಾಡುವ ಮೂಲಕ ಹಿಂದುಳಿದ ಬುಡಕಟ್ಟು
ಜನಾಂಗಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿತ್ತು, ಆದರೆ ರಾಜ್ಯ ಬಿ.ಜೆ.ಪಿ ಸರ್ಕಾರವು ಅವೈಜ್ಞಾನಿಕವಾಗಿರುವ ನ್ಯಾ.ಸದಾಶಿವ ಆಯೋಗವನ್ನು ಜಾರಿಗೊಳಿಸಿರುವುದು ಸಂಪೂರ್ಣ ಅಸಂವಿಧಾನಿಕ ನಿರ್ಣಯವಾಗಿದೆ. ಮತ್ತು ಸಂವಿಧಾನಕ್ಕೆಸಗಿರುವ ಅಪಚಾರವಾಗಿದೆ ಎಂದರು.
ಸರ್ಕಾರವು ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸಿರುವದರಿಂದ, ಪರಿಶಿಷ್ಟ ಜಾತಿಗಳ ಒಳ
ಮೀಸಲಾತಿಯಿಂದ ಲಂಬಾಣಿ, ಕೊರಮ, ಭೋವಿ, ಕೊರಚ ಹಾಗೂ ಕೊರವ ಜಾತಿಗಳಿಗೆ ಅನ್ಯಾಯವಾಗಲಿದೆ.
ಪರಿಶಿಷ್ಟ ಜಾತಿಗಳಲ್ಲಿ ಒಟ್ಟು 101 ಜಾತಿಗಳಿವೆ. ಅದರಲ್ಲಿ 90 ಜಾತಿಗಳಿಗೆ ಕೇವಲ ಶೇ.4.5 ಮೀಸಲಾತಿ ನೀಡಿ
ಉಳಿದ 2 ಜಾತಿಗಳಿಗೆ 11.5 ರಷ್ಟು ಮೀಸಲಾತಿ ನೀಡಿರುವುದು ಯಾವ ನ್ಯಾಯ? ಮುಖ್ಯವಾಗಿ ಈ ಅಧಿಕಾರ
ರಾಜ್ಯ ಸರ್ಕಾರಕ್ಕಿಲ್ಲ. ಆದಾಗ್ಯೂ ಬಿ.ಜೆ.ಪಿ ಸರ್ಕಾರ ಲಂಬಾಣಿ ಸಮಾಜವನ್ನು
ಮೀಸಲಾತಿಯಿಂದ ಹೊರಗಿಡುವ ದುರುದ್ದೇಶದಿಂದ ಒಳ ಮೀಸಲಾತಿ ನಾಟಕವಾಡಿದೆ. ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಣಯವು ಸಂವಿಧಾನ ಮತ್ತು ಸುಪ್ರೀಂಕೋರ್ಟ ತೀರ್ಪಿನ ವಿರುದ್ಧವಾಗಿದೆ ಎಂದು ಗುಡುಗಿದರು.
ಮೀಸಲಾತಿಯು ಪ್ರತಿಯೊಬ್ಬರ ಹಕ್ಕು, ಭಿಕ್ಷೆಯಲ್ಲ. ಸರ್ಕಾರವು ಈ ಒಳಮಿಸಲಾತಿ ನಿರ್ಧಾರವನ್ನು ಕೈಬಿಟ್ಟು ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಬಂಜಾರಾ ಸಮಾಜಕ್ಕಾಗಿರುವ ಅನ್ಯಾಯದ ವಿರುದ್ಧ ನಾವೆಲ್ಲರೂ ಬೀದಿಗಿಳಿದು ಅನಿರ್ಧಿಷ್ಠಾವಧಿ ಹೋರಾಟ ಮಾಡಬೇಕಾಗುತ್ತದೆ ಎಂದು ಶಾಸಕ ದೇವಾನಂದ ಚವ್ಙಾಣ ಎಚ್ಚರಿಕೆ ನೀಡಿದರು.