ಡಾ.ಪೂರ್ಣಿಮಾ ಧಾಮಣ್ಣವರಕನ್ನಡ ಉಪನ್ಯಾಸಕರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವಿಜಯಪುರ

ಕಾವ್ಯ ಸೌಂದರ್ಯ ಎನ್ನುವುದು ಕೇವಲ ಕವಿತೆಗಳಲ್ಲಿಯೇ ಇರುತ್ತದೆಯೆಂದಲ್ಲ, ಪ್ರತಿಭಾನ್ವಿತರು ಬರೆದ ವಚನಗಳಲ್ಲಿ ಕಾವ್ಯದ ಅನನ್ಯತೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ವಚನ-ಕೀರ್ತನೆ-ತತ್ವಪದ ಇವು ಯಾವುದು ಹೊರತಾಗಿಲ್ಲ. ಬಸವಣ್ಣನವರ ವಚನಗಳಂತೂ ಆಧುನಿಕ ಸಂದರ್ಭದ ಭಾವಗೀತೆಗಳಂತೆ ಸುಂದರವಾಗಿವೆ. ರಚನೆ ಸುಂಧರವಾಗಿ ಅನನ್ಯವಾಗಿ ಕಾಣಲು ಹೇಳುವ ವಿಷಯದಷ್ಟೇ ಅಭಿವ್ಯಕ್ತಿ ಕ್ರಿಯೆಯೂ ಮುಖ್ಯವಾಗಿರಬೇಕಾಗುತ್ತದೆ. ಕಾವ್ಯವು ಅಭಿವ್ಯಕ್ತಿ ಭಾಷೆಯನ್ನ ವಹಿಸಿರುತ್ತದೆ. ಹೀಗಾಗಿ ಕವಿತೆಯಾಗಲಿ, ವಚನವಾಗಲಿ ಸುಂದರವಾಗಿ ಕಾಣಬೇಕಾದರೆ ಅದರಲ್ಲಿ ಬಳಸುವ ಭಾಷಾ ಚಮತ್ಕಾರ ಪಡೆನುಡಿಗಳು ಗಾದೆ ಮಾತುಗಳು, ಅಲಂಕಾರಗಳು ತುಂಬಾ ಮುಖ್ಯವಾಗಿರುತ್ತವೆ. ಆದರೆ ನಿಜವಾದ ಕಾವ್ಯ ಓದುಗನನ್ನು ಕಟ್ಟಿ ಹಾಕುತ್ತದೆ ಹಾಗೂ ಒಳಗೆ ಇಳಿಯುತ್ತದೆ, ನಿನದಿಸುತ್ತದೆ, ಗುನುಗುಡುತ್ತದೆ. ಮನದಾಳದಲ್ಲಿ ಹಸಿರಾಗುತ್ತದೆ. ಇಂತಹ ತೀವ್ರವಾದ, ಆಶ್ಚರ್ಯಕರವಾದ ಅನನ್ಯವಾದ ಪರಿಣಾಮ ನಿಜವಾದ ಕಾವ್ಯದಿಂದ ಮಾತ್ರ ಸಾಧ್ಯವಾಗುತ್ತದೆ. ಬಸವಣ್ಣನವರ ವಚನಗಳು ಅಂತಹ ಸುಂದರ ರಚನೆಗಳಾಗಿವೆ. ಅವರ ಅನೇಕ ವಚನಗಳು ಕಾವ್ಯಸೌಂದರ್ಯದ ಅನುಭವವನ್ನು ನಾವು ಕಾಣುತ್ತೇವೆ.
ಮೊದಲಿಗೆ ಕಾವ್ಯ ಸೌಂದರ್ಯ ಎಂದರೇನು? ಎಂಬ ಪ್ರಶ್ನೆ ಏಳುತ್ತದೆ. ಭಾರತೀಯ ಅಲಂಕಾರಿಕನಾದ ಭಾಮಹ ಸೌಂದರ್ಯಮಾಲಂಕಾರ: ಎಂದು ಹೇಳುತ್ತಾನೆ. ಇಲ್ಲಿ ಸೌಂದರ್ಯವೆಂದರೆ ಕವಿಯ ಅನುಭವದ ಸೌಂದರ್ಯವೆಂದು ಅರ್ಥವಿಸಬಹುದು. ಈ ಅನುಭವದ ಸೌಂದರ್ಯ ಅನಿವಾರ್ಯವಾಗಿ ಮಾತಿನ ಸೌಂದರ್ಯವನ್ನೇ ನಮ್ಮವರು ‘ಉಕ್ತಿವೈಚಿತ್ರö್ಯ ಅಥವಾ ಅಲಂಕಾg’À ಎಂದು ಕರೆದಿದ್ದಾರೆ. ಲೋಕದ ಮಾತಿಗಿಂತ ಭಿನ್ನವಾದ ಮನೋಹರವಾದ ಉಕ್ತಿಯಿಂದ ಕೂಡಿರುವುದನ್ನೇ ಕಾವ್ಯ ಎಂದರು. ಇಂತ ಮನೋಹರವಾದ ಅಭಿವ್ಯಕ್ತಿಗಳಿಂದ ತುಂಬಿ ತುಳುಕುತ್ತಿರುವುದರಿಂದಲ್ಲೇ ಬಸವಣ್ಣನವರ ವಚನಗಳು ಶ್ರೇಷ್ಠ ಕಾವ್ಯದ ಮಾದರಿಯನಿಸಿವೆ.
೧೨ನೆಯ ಶತಮಾನದಲ್ಲಿ ಮೂಡಿಬಂದ ಒಂದು ಅಪರೂಪ ಸಾಹಿತ್ಯ ಪ್ರಕಾರ ವಚನಗಳು. ಅಂದಿನ ವಚನಕಾರರು ಈ ಪ್ರಕಾರವನ್ನು ಪ್ರಮುಖವಾಗಿ ಧರ್ಮ ಪ್ರಸಾರದ ಸಾಧನವನ್ನಾಗಿ ಬಳಸಿಕೊಂಡರು. ಸಂಸ್ಕೃತದ ಭೂಯಿಷ್ಟದ ಬಹುಮಟ್ಟಿಗೆ ಪಂಡಿತರಿಗೆ ಮೀಸಲಾಗಿದ್ದ ಚಂಪು ಸಂಪ್ರದಾಯದ ಹಿಡಿತದಿಂದ ಸಾಹಿತ್ಯವನ್ನು ಬಿಡಿಸಿ ಸಾಮಾನ್ಯ ಮನುಷ್ಯನ ಮನೆಬಾಗಿಲಿಗೆ ಕಾವ್ಯಗಂಗೆಯನ್ನು ಹರಿಸಿದವರು ವಚನಕಾರರು. ಅದರಲ್ಲಿಯೂ ವಚನ ಸಾಹಿತ್ಯದ ವಿಶೇಷ ಲಕ್ಷಣಗಳಲ್ಲಿ ಗೋಚರವಾಗುವುದು ಬಸವಣ್ಣನವರ ವಚನಗಳಲ್ಲಿಯೇ.
ದೃಷ್ಟಾಂತಗಳು ಉಪಮೆ-ರೂಪಕಗಳು ಶಬ್ಧಚಿತ್ರಗಳು ಇವುಗಳು ಬಸವಣ್ಣನವ ವಚನಗಳಲ್ಲಿ ತುಂಬಿ ತುಳುಕುತ್ತಿದೆ. ಧರ್ಮ ಪ್ರಚಾರದ ಉತ್ಸಾಹ ಜನ ಸುಧಾರಿಸಬೇಕೆಂಬ ಹಂಬಲ ಜೀವ ತನ್ನ ಕಾಳಿಕೆಯನ್ನು ಕಳೆದುಕೊಂಡು ಶುದ್ಧ ಅಪರಂಜಿಯಾಗಬೇಕೆಂಬ ಕಾತರ ಇವೆ. ಇವರ ಸಾಹಿತ್ಯ ಪ್ರೇರಣೆ ಕವಿಯಾಗಿ ಕೀರ್ತಿ ಗೌರವಗಳನ್ನು ಗಳಿಸಿಕೊಳ್ಳಬೇಕೆಂಬ ಬಯಕೆ ಅವರಿಗಿರಲಿಲ್ಲ. ಅಂದಂದಿನ ಅವರ ಅನುಭವ ತಮ್ಮ ತೀವ್ರತೆ ಒತ್ತಡಗಳಿಂದಾಗಿ ವಚನಗಳ ರೂಪ ತಾಳಿತು. ಅವರದು ಕವಿ ಹೃದಯವಾದ್ದರಿಂದ ಅವರಾಡಿದ ಮಾತು ಅವರಿಗರಿವಿಲ್ಲದೆಯೇ ಕಾವ್ಯವಾಯಿತು. ಅವರ ಒಂದೊಂದು ವಚನವೂ ಭಾವಗೀತೆಯ ಸತ್ವ, ಸೌಂದರ್ಯಗಳನ್ನು ಒಡಗೂಡಿಸಿಕೊಂಡು ಬಿಡಿ ಬಿಡಿ ಮುಕ್ತಕಗಳಂತಿವೆ.
ಬಸವಣ್ಣನವರು ಸಾಮಾನ್ಯನ ಅನುಭವದ ಪರಿಮಿತಿಯಲ್ಲಿ ಬರಬಹುದಾದ ತಮ್ಮ ಸುತ್ತಮುತ್ತ ಕಂಡ ಬದುಕಿನ ಎಲ್ಲ ದೃಶ್ಯಗಳನ್ನೂ ಅನುಭವಗಳನ್ನೂ ತಮ್ಮ ಅಭಿವ್ಯಕ್ತಿಗೆ ಸಾಧನವನ್ನಾಗಿ ಬಳಸಿಕೊಂಡರು. ಪ್ರಾಣಿ ಪ್ರಪಂಚ, ಸಸ್ಯ ಪ್ರಪಂಚ ಮಾನವ ವವ್ಯಹಾರ ಯಾವುದೂ ಅವರ ಕಣ್ಣಿನಿಂದ ತಪ್ಪಿಸಿಕೊಳ್ಳಲಿಲ್ಲ. ಅವರ ಸೂಕ್ಷ್ಮಗ್ರಹಣಶಕ್ತಿ, ವಿಸ್ತಾರವಾಗಿ ಹರಡಿ ಬಿದ್ದಿದ್ದ ಜೀವನವನ್ನು ಕಾವ್ಯದ ತೆಕ್ಕೆಗೊಗ್ಗಿಸಿಕೊಳ್ಳುವ ಅವರ ಪ್ರತಿಭೆ ವಿಸ್ಮಯ ಹುಟ್ಟಿಸುತ್ತದೆ. ಅವರ ವಚನಗಳಲ್ಲಿ ದೃಷ್ಟಾಂತಾಲಂಕಾರಗಳು ವಿಪುಲವಾಗಿ ಕಂಡು ಬರುತ್ತವೆ. ಉದಾ-
‘ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ
ಎನಗೆ ನಮ್ಮ ಕೂಡಲ ಸಂಗಮ ದೇವರ ನೆನೆವುದೆ ಚಿಂತೆ’
ಇಂಥಹ ಹಲವಾರು ವಚನಗಳಲ್ಲಿ ಲೋಕಪ್ರಿಯ ದೃಷ್ಟಾಂತಗಳನ್ನು ಬಳಸಿ ಅತ್ಯಂತ ಸರಳವಾಗಿ ಹಾಗೂ ಪ್ರಾಮಾಣಿಕ ಭಗವಂತನ ಬಗೆಗಿನ ತಮ್ಮ ಹಂಬಲವನ್ನು ತೋಡಿಕೊಂಡಿದ್ದಾರೆ. ಅದೇ ರೀತಿ ಇನ್ನೋಮದು ವಚನವನ್ನು ಗಮನಿಸಬಹುದು.
‘ಮಡಕೆಯ ಮಾಡುವರೆ ಮಣ್ಣೇ ಮೊದಲು
ತೊಡುಗೆಯ ಮಾಡುವರೆ ಹೊನ್ನೆ ಮೊದಲು
ಶಿವಪಥವನರಿವರೆ ಗುರುಪಥವೇ ಮೊದಲು
ಕೂಡಲ ಸಂಗಮದೇವರನರಿವರೆ
ಶರಣರ ಸಂಗವೇ ಮೊದಲು’
ಇಲ್ಲಿ ಹಲವಾರು ದೃಷ್ಟಾಂತ ಮಾಲಿಕೆಯನ್ನು ಬಳಸಿ, ಭಗವಂತನನ್ನು ಅರಿಯಬೇಕಾದರೆ ಶರಣರ ಸಹವಾಸದಿಂದ ಮಾತ್ರ ಸಾಧ್ಯವೆಂಬುದನ್ನು ಬಸವಣ್ಣನವರು ತರ್ಕಪೂರ್ಣವಾಗಿ ಪ್ರತಿಪಾಧಿಸುತ್ತಾರೆ. ಮತ್ತೊಂದೆಡೆ.
ಬೇವಿನ ಬೀಜವ ಬಿತ್ತಿ ಬೆಲ್ಲದ ಕಟ್ಟೆಯ ಕಟ್ಟಿ
ಆಕಳ ಹಾಲನೆರೆದು ಜೇನ ತುಪ್ಪವ ಹೊಯ್ದಡೆ,
ಸಿಹಿಯಾಗಬಲ್ಲುದೆ, ಕಹಿಯಬಹುದಲ್ಲದೆ?
ಎಂಬ ವಚನದಲ್ಲಿ ಹುಟ್ಟುಗುಣ ಏನು ಮಾಡಿದರೂ ಹೋಗದು ಎಂಬುವುದನ್ನು ಹೇಳಲು ಬಸವಣ್ಣನವರು ಬಳಸಿರುವ ಈ ದೃಷ್ಟಾಂತದಲ್ಲಿ. ಬೀಜ ಅದು ಫಲ ಕೊಡುವ ತನಕ ಒಂದು ವೃಕ್ಷ ಬೆಳೆಯುವ ಕ್ರಿಯೆಯನ್ನು ಎಷ್ಟು ಸುಂದರವಾಗಿ ಪದಗಳಲ್ಲಿಯೇ ಕಟ್ಟಿಕೊಡುತ್ತಾರೆ. ಇಂಥ ದೃಷ್ಟಾಂತಗಳು ನಿದರ್ಶನಗಳು ಬಸವಣ್ಣನವರಲ್ಲಿ ವಿಪುಲ. ಅಳಿಮನದ ಭಕ್ತಿಯನ್ನು ವಿವರಿಸುತ್ತಾ ‘ಕುಂಬಳದ ಕಾಯಿಗೆ ಕಬ್ಬುನದ ಕಟ್ಟಿಕೊಟ್ಟರೆ ಕೊಳೆವುದಲ್ಲದೆ ಬಲುಹಾಗಬಲ್ಲುದೆ’ ‘ಸಗಣಿಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದರೆ ರಂಜನೆಯಲ್ಲದೆ ಅದರ ಗಂಜಳ ಬಿಡದಣ್ಣಾ’ ‘ಎನಿಸುಕಾಲ ಕಲ್ಲುನೀರೊಳಗಿರ್ದರೇನು? ನೆನದು ಮೃದುವಾಗಬಲ್ಲುದೆ? ಎನ್ನುತ್ತಾರೆ. ಇಂಥಲ್ಲೆಲ್ಲ ಅವರ ಲೋಕಾನುಭವ ಸರ್ವವಿಧಿತ. ಇನ್ನೊಂದೆಡೆ.
ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರೆರೆದರೆ
ಮೇಲೆ ಪಲ್ಲವಿಸಿತ್ತು ನೋಡಾ’
ಎಂಬಲ್ಲಿ ಲಿಂಗದ ಮುಖ ಜಂಗಮ, ಭಗವಂತ ಸೇವೆ ಸ್ವೀಕರಿಸುವುದು ಜಂಗಮದ ಮೂಲಕ
ಎನ್ನುವುದನ್ನು ಪ್ರತಿಪಾದಿಸಲು, ಬಸವಣ್ಣನವರು ಬಳಸಿರುವ ಈ ದೃಷ್ಟಾಂತ ಅದ್ಭುತವಾಗಿದೆ, ಸೃಷ್ಟಿಯನ್ನು ಕಂಡಾಗ ಬಸವಣ್ಣವನವರಿಗಾದ ವಿಸ್ಮಯಭಾವ ಸೊಗಸಾಗಿ ಚಿತ್ರತವಾಗಿದೆ.
ದೃಷ್ಟಾಂತಗಳಂತೆಯೆ ಬಸವಣ್ಣನವರು ಸುತ್ತಲು ಜನಜೀವನದಿಂದೆತ್ತಿಕೊಂಡ ಉಪಮೆಗಳನ್ನು ವಿಫುಲವಾಗಿ ಬಳಸಿದ್ದಾರೆ. ಬಸವಣ್ಣನವರು ಸುತ್ತಲು ಜನಜೀವನ ಏನಿತ್ತೋ ಅದನ್ನೇ ತಮ್ಮ ವಚನದ ವಸ್ತುವನ್ನಾಗಿ ತಗೆದುಕೊಂಡು ಉಪಮೆಗಳನ್ನು ವಿಪುಲವಾಗಿ ಬಳಸಿದ್ದಾರೆ. ಬಸವಣ್ಣನವರ ವಚನಗಳಲ್ಲಿ ಉಪಮೆ ಬರಿ ಹೋಲಿಕೆಯಾಗಿಲ್ಲ. ತಟ್ಟನೆ ಕಣ್ಣೆದುರು ಒಂದು ಚಿತ್ರವನ್ನು ನಿಲ್ಲಿಸುವ ಆಡಿದ ಮಾತನ್ನು ಮುಟ್ಟಿಸುವ, ಆಡಿದ ಮಾತನ್ನು ಮನಕ್ಕೆ ಮುಟ್ಟಿಸುವ, ಅರ್ಥವನ್ನು ಔಚಿತ್ಯ ಪೂರ್ಣವಾಗಿ ಬಿಂಬಿಸುವ ಸಾರ್ಥಕ ಕಾರ್ಯವನ್ನು ಅದು ಮಾಡಿದೆ. ಬಸವಣ್ಣನವರು ತಮ್ಮ ವಚನದಲ್ಲಿ ಕೂಡಲ ಸಂಗಮದೇವನ ಸ್ನೇಹದ ಪರಿಯನ್ನು ವಿವರಿಸುತ್ತಾರೆ.
ಉದಕದೊಳಗೆ ಬಚ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು
ಸಸಿಯೊಳಗಣ ರಸದ ರುಚುಯಂತಿದ್ದಿತ್ತು
ನನೆಯೊಳಗಣ ಪರಿಮಳದಂತಿದ್ದಿತ್ತು
ಕೂಡಲ ಸಂಗಮದೇವಾ, ಕನ್ನೆಯ
ಎನ್ನುವಲ್ಲಿ, ಮೊದಲ ಸಾಲು ಒಂದರೊಳಗೊಂದು ಅಡಗಿರುವ ಆದರೆ ಒಂದಕ್ಕೊಂದು ವಿರುದ್ಧವಾದ ಎರಡು ವಸ್ತುಗಳನ್ನು ಕುರಿತು ಹೇಳಿದರೆ, ಎರಡನೆಯ ಸಾಲು ಚಂದ್ರನಲ್ಲಿ ಅಡಗಿರುವ ಬೆಳದಿಂಗಳ ರುಚಿಯ ಇಂದ್ರಿಯಾತೀತವಾದ ಅನುಭವವನ್ನು ಹೇಳುತ್ತದೆ. ಮೂರನೆಯ ಸಾಲು ಒಂದರೊಳಗೊಂದು ಬೆರೆತು ಹೋದ, ಬೇರ್ಪಡಿಸಲಾಗದ ನನೆಯೊಳಗಣ ಪರಿಮಳವನ್ನು ಹೇಳಿದರೆ, ಕೊನೆಯ ಸಾಲು ಕನ್ನೆಯಲ್ಲಿ ಮುಗ್ದವಾಗಿ ಗುಪ್ತವಾಗಿ ಅಡಗಿರುವ ಭಾವನಾತ್ನಕ ಸಂಬಂಧವನ್ನು ಹೇಳುತ್ತದೆ. ‘ಬಯ್ಕೆಯ ಕಿಚ್ಚಿನ ಅದಮ್ಯತೆಯನ್ನು ಮೊದಲ ಸಾಲು ಸೂಚಿಸಿದರೆ ಉಳಿದ ಮೂರು ವಾಕ್ಯಗಳು ಬೆಳಂದಿಗಳು, ಪರಿಮಳ ಕನ್ನೆಯ ಸ್ನೇಹ- ಇವುಗಳ ಅಹ್ಲಾದತೆ ಉಲ್ಲಾಸ, ಮಾರ್ದವತೆಯನ್ನು ಸಹಜವಾದ ಭಾಷೆಯಲ್ಲಿ ಹೊರಹೊಮ್ಮಿಸಿವೆ’, ಇವೆಲ್ಲವುಗಳಲ್ಲಡಗಿದ ಯಾವುದೋ ರಹಸ್ಯ ಹಾಗೂ ಶೀತಲ ಗಾಂಭರ‍್ಯಗಳು ‘ಕನ್ನೆಯ ಸ್ನೇಹ’ದ ಅನಿರ್ವಚನೀಯ ಅನುಭವದ ಮೇಲೆ ಬೆಳಕು ಬೀರುತ್ತವೆ. ಅಭಿವ್ಯಕ್ತಿಗೆ ಅತೀತವಾದ ಅನುಭಾವದ ಅನುಭವವನ್ನು ಮೂರ್ತಗೊಳಿಸುವುದರಲ್ಲಿ ಈ ವಚನ ಯಶಸ್ವಿಯಾಗಿದೆ. ಮತ್ತೊಂದೆಡೆ,
ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರೆಸುವಂತೆ
ಉರಿವ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸುವಂತೆ,
ಹುಲಿಯ ಮೀಸೆಯ ಹಿಡಿದುಕೊಂಡು ಬಿಲಿದುಯ್ಯಲೆಯಾಡುವಂತೆ
ಕೂಡಲ ಸಂಗನ ಶರಣರೊಡನೆ ಮರೆದು ಸರಸವಾಡಿದರೆ
ಸುಣ್ಣದ ಕಲ್ಲು ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ’
ಎನ್ನುವಲ್ಲಿ ಕೂಡಲ ಸಂಗನ ಶರಣರೊಡನೆ ಮೈರೆತು ವಿನಯದಿಂದ ನಡೆದುಕೊಂಡರೆ ಸುಣ್ಣದ ಕಲ್ಲನ್ನು ಮಡಿಲಲ್ಲಿ ಕಟ್ಟಿಕೊಂಡು ಮಡುವಿಗೆ ಬಿದ್ದಂತೆ ಎಂಬುವುದನ್ನು ಹೇಳುವಾಗ ಬಸವಣ್ಣವರು ಬಳಸಿರುವ ಮಾಲೋಪಮೆ ಮೃತ್ಯು ಭಯಂಕರ ಚಿತ್ರಗಳ ಮಾಲೆಯನ್ನೇ ಸೃಷ್ಟಿಸಿದೆ. ‘ಒಲಿದುಯ್ಯಲೆಯಾಡಿದಂತೆ’ ಎಂಬ ಮಾತು ಮತೂ ಗಮನಾರ್ಹ.
ಇಂಥ ಉಪಮೆಗಳು ಬಸವಣ್ಣನವರಲ್ಲಿ ಹೆಜ್ಜೆ ಹೆಜ್ಜೆಗೂ ಮಿಂಚುತ್ತವೆ. ಮನಸ್ಸಿನ ಟೋಳ್ಳನ್ನು ಹೇಳುವ ‘ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ’ ಎನ್ನುವಲ್ಲಿ ವ್ಯರ್ಥಭಕ್ತಿಯನ್ನು ಚಿತ್ರಿಸುವ ‘ಎಳ್ಳಿಲ್ಲದ ಗಾಣದಂತಾಯಿತ್ತು. ‘ ಊಡದ ಆವಿಂಗೆ ಉರ್ಣಣದ ಕರುವ ಬಿಟ್ಟಂತೆ’, ‘ಕಂಬಳಿಯಲ್ಲಿ ಕಣಕವ ನಾದಿಯಂತೆ’ ಎನ್ನುವಲ್ಲಿ, ಸಂಸಾರದ ಭಯಂಕರತೆ ನಶ್ವರತೆಗಳನ್ನು ಚಿತ್ರಿಸುವ ‘ಕಪ್ಪೆ ಸರ್ಪದ ನೆರಳಿನಲ್ಲಿಪ್ಪಂತೆ’ ನಾನಾ ವರ್ಣದ ಸಂಸಾರ ಹಾವು ಹಾವಾಡಿಗನ ಸ್ನೇಹದಂತೆ’ ಎನ್ನುವಲ್ಲಿ ಅನುಭಾವ ಸ್ಥಿತಿಯನ್ನು ವರ್ಣಿಸುವ ‘ಆಲಿಕಲ್ಲು ಹರಳಿನಂತೆ, ಅರಗಿನ ಪುತ್ತಳಿಯಂತೆ’ ಎನ್ನುವಲ್ಲಿ ಇಲ್ಲೆಲ್ಲ ಮಿಂಚಿರುವ ಬಸವಣ್ಣನವರ ಉಪಮಾಲೋಕ ಒಂದು ಅದ್ಭುತ ಚಿತ್ರಸೃಷ್ಟಿ.
ಬಸವಣ್ಣನವರ ವಚನಗಳ ಮತ್ತೊಂದು ಗುಣ ಅವರ ರೂಪಕ ವೈಭವ. ಕನ್ನಡ ಸಾಹಿತ್ಯದಲ್ಲಿ ನಾರಣಪ್ಪ, ಬಸವೇಶ್ವರ ಇವರಿಬ್ಬರ ಹಾಗೆ ಭಾಷೆಯ ಸಾಧ್ಯತೆ ಸೂರೆ ಮಾಡಿದವರು, ಹಾಗೂ ರೂಪಕ ನಿರ್ಮಾಣ ಮಾಡಿದವರು ವಿರಳವೆಂದೇ ಹೇಳಬೇಕು. ಇದಕ್ಕೆ ನಿದರ್ಶನಕ್ಕೆ-
‘ಮುರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ’
ಎಂಬ ಪ್ರಸಿದ್ದ ವಚನವನ್ನು ನೋಡಬಹುದು. ಇದರಲ್ಲಿ ಇಹದ ಬದುಕನ್ನು ಒಪ್ಪಿಕೊಂಡು, ಅದರಲ್ಲಿ ಗೆದ್ದು ಶುದ್ಧವಾಗುವ ವಿಚಾರವನ್ನು ಎರಕ ಹೊಯ್ದಿದ್ದಾರೆ. ಹಾಗೆಯೇ ದೇಹದೇಗುಲ ನಿರ್ಮಾಣವನ್ನು ಹೇಳುವ
‘ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆ? ಬಡವನಯ್ಯಾ
ಎನ್ನ ಕಾಲೆ ಕಂಭ ದೇಹವೇ ದೇಗುಲ, ಶಿರವೆ ಹೊನ್ನ ಕಳಸವಯ್ಯಾ’ ಈ ವಚನದಲ್ಲಿ ಕಾಲೇ ಕಂಭವಾಗಿ, ದೇಹವೇ ದೇಗುಲವಾಗಿ, ಶಿರ ಹೊನ್ನ ಕಳಸವಾದ ಈ ರೂಪಕ, ಭಕ್ತನ ಅತ್ಯನ್ನತ ಸ್ಥಿತಿಯನ್ನು ಭವ್ಯವಾಗಿ ಚಿತ್ರಿಸುತ್ತದೆ. ‘ಉಳ್ಳವರು ಮತ್ತು ಭಕ್ತಿಯನ್ನು ‘ಮಾಡುವುದರ’ ಮೂಲಕ ತೋರಿಸಿದರೆ, ಶರಣರು ತಮ್ಮನ್ನು ಶಿವನಿಗೆ ಅರ್ಪಿಸಿಕೊಳ್ಳುವುದರ ಮೂಲಕ ತೋರಿಸುತ್ತಾರೆ. ಉಳ್ಳವರ ಭಕ್ತಿಯ ಅಭಿವ್ಯಕ್ತಿ ಅಷ್ಟೇ; ಆದರೆ ಶರಣರು ಸ್ವತಃ ಆಲಯವಾಗಿರುವುದು. ಅನುಭಾವ ಸ್ಥಿತಿಯ ಪ್ರತೀಕ ಅಲ್ಲದೆ ಧರ್ಮದ ಹೆಸರಿನಲ್ಲಿನ ಶೋಷಣೆ ಮಾಡುವ ದೇವಾಲಯವೆಂಬ ಸಂಸ್ಥೆಯನ್ನು ತಿರಸ್ಕರಿಸಿ, ದೇವಾಲಯವನ್ನು ದೇಹಕ್ಕೆ ಸ್ಥಳಾಂತರಿಸುವ ಅಪೂರ್ವ ವಿಚಾರಕ್ರಾಂತಿ ಇಲ್ಲಿ ರೂಪಕದಲ್ಲಿ ರಚನೆ ಆಗಿವೆ.
ಬಸವಣ್ಣನವರ ವಚನಗಳಲ್ಲಿ ಉಪಮೆ, ರೂಪಕಗಳ ಸಮೃದ್ಧಿ ನಾವು ನೋಡಬಹುದು. ಬಸವಣ್ಣನವರದು ಮುಚ್ಚಿಟ್ಟ ಬದುಕಲ್ಲ, ಬಿಚ್ಚಿಟ್ಟ ಬದುಕು. ತಮ್ಮ ಅಂತರಂಗವನ್ನೇ ಜಗತ್ತಿನೆದರು ಬಿಚ್ಚಿಟ್ಟ್ ಮಹಾನುಭಾವರು. ಜಗತ್ತಿನಲ್ಲಿ ತೀರವುರಳ ಎಲ್ಲ ವಚನಕಾರರಗಿಂತ ಅವನಲ್ಲಿ ನಿಸ್ಸಂಕೋಚದ ಅಂತರ್ನಿರೀಕ್ಷೇಣೆಯ ಪ್ರವೃತ್ತಿಯಿದೆ. ಸತ್ಯದ ಹಾದಿಯಲ್ಲಿ ನಡೆದ ಮಹಾಸಾಧಕನೊಬ್ಬ ತನ್ನಂತರಂಗ ಹಾಗೂ ಬಹಿರಂಗ ಜಗತ್ತಿನೊಡನೆ ನಡೆಸಿದ ನಿರಂತರ ಹೋರಾಟ ಕ್ರಿಯೆ-ಪ್ರಕ್ರಿಯೆಗಳ ಚಿತ್ರ ಇವುಗಳಲ್ಲಿವೆ.

– ಡಾ.ಪೂರ್ಣಿಮಾ ಧಾಮಣ್ಣವರ
ಕನ್ನಡ ಉಪನ್ಯಾಸಕರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ವಿಜಯಪುರ

