“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ, ಮುಂಡರಗಿ-ಗದಗ
ಗ್ರಾಮೀಣ ಜನರ ಬದುಕಿನ ಬವಣೆಗಳನ್ನು ನೀಗಿಸುವ, ಅವರಿಗೆ ಸ್ಥಳೀಯವಾಗಿ ಆಡಳಿತ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಾರಿಯಾಗಿರುವ ಸ್ಥಳೀಯ ಆಡಳಿತಾತ್ಮಕ ವ್ಯವಸ್ಥೆಯನ್ನೇ ಪಂಚಾಯತ್ ರಾಜ್ ಎಂದು ಕರೆಯುವುದು. ಇದನ್ನು ಮುಖ್ಯವಾಗಿ ಮೂರು ವಲಯಗಳಲ್ಲಿ ಗುರುತಿಸಲಾಗಿದ್ದು ಗ್ರಾಮ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ, ತಾಲೂಕುಗಳ ವ್ಯಾಪ್ತಿಯಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ/ ಪರಿಷತ್ ಎಂದು ಗುರುತಿಸಲಾಗಿದೆ.
20 ಲಕ್ಷಕ್ಕಿಂತಲೂ ಕಡಿಮೆ ಮತದಾರರನ್ನು ಹೊಂದಿರುವ ಭಾಗದಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇವಲ ಎರಡು ರೀತಿಯ ಪಂಚಾಯತ್ ವ್ಯವಸ್ಥೆಗಳು ಇದ್ದು ಆಡಳಿತ ನಡೆಸಲು ಅನುಕೂಲ ಕಲ್ಪಿಸಲಾಗಿದೆ.
ಎಲ್ಲಾ 3 ಪಂಚಾಯಿತಿ ವ್ಯಾಪ್ತಿಗಳಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆಗಳು ಜರುಗುತ್ತವೆ. ಆಯಾ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ಇರುವ ಜನರು ಮತದಾನದ ಹಕ್ಕನ್ನು ಹೊಂದಿರುತ್ತಾರೆ. ಈ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸದಸ್ಯರು ಕಡ್ಡಾಯವಾಗಿ ಇರಲೇಬೇಕು. ಇದರ ಜೊತೆಗೆ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧ್ಯಕ್ಷರು ಮತ್ತು ಮಹಿಳಾ ಸದಸ್ಯರು ಮೂರನೇ ಒಂದು ಭಾಗದಷ್ಟು ಇರಲೇಬೇಕು.
ಸಂವಿಧಾನದ 73ನೇ ಅಧಿನಿಯಮವನ್ನು ತಿದ್ದುಪಡಿ ಮಾಡುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಿ 1992 ರಲ್ಲಿ ಜಾರಿಗೆ ತರಲಾಯಿತು. ಹಲವಾರು ಗುರುತರ ಬದಲಾವಣೆಗಳನ್ನು ತರುವ ಮೂಲಕ 1999 ಏಪ್ರಿಲ್ ನಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತಷ್ಟು ಬಲಯುತವಾಗಿ ಜಾರಿಯಲ್ಲಿರಿಸಲಾಯಿತು. ನಮ್ಮ ಭಾರತ ದೇಶದಲ್ಲಿ ನಾಗಾಲ್ಯಾಂಡ, ಮಿಜೋರಾಂ ಮತ್ತು ಮೇಘಾಲಯ ರಾಜ್ಯಗಳು ಮತ್ತು ದೆಹಲಿ ಕೇಂದ್ರಾಡಳಿತ ಪ್ರದೇಶವನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ವ್ಯವಸ್ಥೆಯು ಜಾರಿಯಲ್ಲಿದೆ.

ಪ್ರತಿಯೊಂದು ಗ್ರಾಮವು ರಾಜಕೀಯವಾಗಿ ಸಶಕ್ತವಾಗಿರಬೇಕು ಮತ್ತು ತನ್ನ ಗ್ರಾಮದ ಕುಂದು ಕೊರತೆಗಳನ್ನು ಅಭಿವೃದ್ಧಿ ಕಾರ್ಯಗಳ ವ್ಯವಸ್ಥೆಯನ್ನು ತಾನೆ ನೋಡಿಕೊಳ್ಳಬೇಕು, ತನ್ಮೂಲಕ ಸಶಕ್ತ ಗ್ರಾಮವಾಗಿ ಬೆಳೆಯಬೇಕು ಎಂಬುದು ಗಾಂಧೀಜಿಯವರ ಸ್ವರಾಜ್ಯದ ಮೂಲ ಕಲ್ಪನೆಯಾಗಿತ್ತು. ಪಂಚಾಯತ್ ರಾಜ್ ವ್ಯವಸ್ಥೆಯು ನಮ್ಮ ರಾಜಕೀಯ ವ್ಯವಸ್ಥೆಯ ಬುನಾದಿ ಎಂದು ಪ್ರತಿಪಾದಿಸಿದ ಅವರು ಆಯಾ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ಬರುವ ಮೂಲಭೂತ ಸಮಸ್ಯೆಗಳು ಮತ್ತು ಅವುಗಳ ನಿವಾರಣಾತ್ಮಕ ಕಾರ್ಯಗಳಿಗಾಗಿ ಅಲ್ಲಿಯದೇ ಚುನಾಯಿತ ಸದಸ್ಯರನ್ನೊಳಗೊಂಡಿದ್ದು ಜೊತೆಗೆ ಸ್ಥಳೀಯ ಆಡಳಿತಾಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ಹೊಂದಿದ್ದು ಈರ್ವರು ಜೊತೆಯಾಗಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಅಲ್ಲಿಯ ಮೂಲಭೂತ ಸಮಸ್ಯೆಗಳನ್ನು ಪೂರೈಸುವುದರ ಜೊತೆ ಜೊತೆಗೆ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ಅವುಗಳನ್ನು ಪೂರೈಸುವುದು ಇವರ ಕಾರ್ಯ ವ್ಯಾಪ್ತಿಯಲ್ಲಿ ಬರುತ್ತವೆ.
1953 ರಲ್ಲಿ ಬಲವಂತರಾಯ್ ಮೆಹ್ತಾ ಆಯೋಗವು ಸ್ಥಳೀಯ ಅಧಿಕಾರ ವಿಕೇಂದ್ರೀಕರಣವನ್ನು ಅನುಮೋದಿಸಿ ಸ್ಥಳೀಯ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಪರಿವರ್ತನೆಯನ್ನು ತರುವ ಸಲುವಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅನುಮೋದಿಸಿದರು.ಆರ್ಥಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಕ್ರಿಯೆಯನ್ನು ಸೃಷ್ಟಿಸಲು, ಸ್ವಸಹಾಯವನ್ನು ಮತ್ತು ಪರಾವಲಂಬನೆಯನ್ನು ತಪ್ಪಿಸಲು ಸ್ವಯಂ ಆಡಳಿತದ ಈ ವ್ಯವಸ್ಥೆಯನ್ನು 1957ರಲ್ಲಿ ಜಾರಿಗೆ ತರಲಾಯಿತು. ಆಡಳಿತವನ್ನು ಸುಲಭಗೊಳಿಸಲು ತರಬೇತುಗೊಳಿಸಲ್ಪಟ್ಟ ಗ್ರಾಮ ಸಹಾಯಕರನ್ನು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಲಾಯಿತು.
- ಸಾಮುದಾಯಿಕ ಕೃಷಿ ಮತ್ತು ಪಶು ಸಂಗೋಪನೆಗೆ ಪ್ರೋತ್ಸಾಹ ನೀಡುವುದು,
- ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು
- ಸಾಂಪ್ರದಾಯಿಕ ಮಾದರಿಯ ಒಕ್ಕಲುತನ ಹುಟ್ಟುವಳಿಗೆ ಸಹಾಯಕವಾಗುವ ವಿವಿಧ ವರ್ಗಗಳ ಜನರಿಗೆ ಉದ್ಯೋಗಾವಕಾಶವನ್ನು ಸ್ಥಳೀಯವಾಗಿ ಕಲ್ಪಿಸುವುದು
- ಮಹಿಳೆಯರು ಮತ್ತು ಮಕ್ಕಳನ್ನು ಸಮುದಾಯದ ಭಾಗವಾಗಿ ಭಾಗವಹಿಸಲು ಉತ್ತೇಜಿಸುವುದು
- ವಿವಿಧ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಯೋಜಿಸುವುದು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವುದು
- ಕರಗಳನ್ನು ಸಂಗ್ರಹಿಸುವುದು, ಮನೆಗಳನ್ನು ಮತ್ತು ಉಳುವ ಭೂಮಿಯನ್ನು ವ್ಯವಸ್ಥಿತವಾಗಿ ಸಮೀಕ್ಷೆ ಮಾಡುವ ಮೂಲಕ ಅವುಗಳ ಉತಾರಗಳು ಮತ್ತು ಹಕ್ಕು ಪತ್ರಗಳ ದಾಖಲಾತಿಗಳನ್ನು ಇಡುವುದು ಮುಂತಾದ ಕೆಲಸಗಳು ಇವರ ವ್ಯಾಪ್ತಿಯಲ್ಲಿ ಬರುತ್ತವೆ.
ನಮ್ಮ ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತಾದ ವಿಸ್ತೃತ ಅಧ್ಯಯನಕ್ಕೆ ಅನುಕೂಲವಾಗಲೆಂದು ಗದಗ ಜಿಲ್ಲೆಯ ನಾಗಾವಿ ಎಂಬ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ.
ಪ್ರತಿ ವರ್ಷ ಏಪ್ರಿಲ್ 24ರಂದು ಪಂಚಾಯತ್ ರಾಜ್ ದಿವಸವೆಂದು ಆಚರಿಸಲಾಗುತ್ತಿದ್ದು ಆ ದಿನ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತಿಕರಣ ಪ್ರಶಸ್ತಿಯನ್ನು ಕೊಡ ಮಾಡುತ್ತಾರೆ. ನಾನಾಜಿ ದೇಶಮುಖ ಸರ್ವೋತ್ತಮ ಪಂಚಾಯತ ಪ್ರಶಸ್ತಿ ಸತತ ವಿಕಾಸ ಪುರಸ್ಕಾರ ಮತ್ತು ಇನ್ನೂ ಹಲವಾರು ಪ್ರಶಸ್ತಿಗಳನ್ನು ಕೊಡ ಮಾಡುವ ಮೂಲಕ ಪಂಚಾಯತ್ ವ್ಯವಸ್ಥೆಯನ್ನು ಇನ್ನಷ್ಟು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರಲು ಪ್ರೋತ್ಸಾಹಿಸಲಾಗುತ್ತದೆ.
ರಾಷ್ಟ್ರೀಯ ಪಂಚಾಯತ್ ರಾಜ್ ಪ್ರಶಸ್ತಿಗೆ ಅರ್ಹವಾಗಲು ಪ್ರತಿಯೊಂದು ಗ್ರಾಮ ಪಂಚಾಯಿತಿಗಳು ಈ ನವ ಅಂಶಗಳಲ್ಲಿ ಉನ್ನತಿಯನ್ನು ಸಾಧಿಸಬೇಕು.
“ಬಡತನ ರಹಿತ ಮತ್ತು ಸುಧಾರಿತ
ಜೀವನ ಮಟ್ಟ - ಆರೋಗ್ಯಕರ ಪಂಚಾಯತಿ
- ಮಕ್ಕಳ ಸ್ನೇಹಿ ಪಂಚಾಯತಿ
- ಜಲ ಸ್ವಾಯುತ್ತತೆಯನ್ನು ಹೊಂದಿರುವ ಪಂಚಾಯಿತಿ
- ಸ್ವಚ್ಛ ಮತ್ತು ಹಸಿರು ಯುಕ್ತ ಪಂಚಾಯಿತಿ
- ಬಲಿಷ್ಠ ಕಟ್ಟಡವನ್ನು ಹೊಂದಿರುವ ಪಂಚಾಯಿತಿ
- ಸಾಮಾಜಿಕ ಸುರಕ್ಷತೆಯನ್ನು ಅಳವಡಿಸಿಕೊಂಡಿರುವ ಪಂಚಾಯಿತಿ
- ಉತ್ತಮ ಆಡಳಿತ ನಿರ್ವಹಿಸುವ ಪಂಚಾಯಿತಿ
*ಮಹಿಳಾ ಸ್ನೇಹಿ ಪಂಚಾಯತಿ
ಪಂಚಾಯತ್ ರಾಜ್ ವ್ಯವಸ್ಥೆಯು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮೂಲ ಬುನಾದಿಯಾಗಿದ್ದು ಅದರ ತಳಹದಿಯ ಮೇಲೆ ಸಶಕ್ತ ಭಾರತವನ್ನು ಕಟ್ಟುವ ಗಾಂಧೀಜಿಯವರ ಕನಸು ನನಸಾಗಿದೆ. ಈ ವ್ಯವಸ್ಥೆ ಇನ್ನೂ ಹೆಚ್ಚು ಅಭಿವೃದ್ಧಿಯನ್ನು ಕಾಣಲಿ.
ಪಂಚಾಯತ್ ರಾಜ್ ಸಶಕ್ತವಾಗಿರಲಿ..
– ವೀಣಾ ಹೇಮಂತ್ ಗೌಡ ಪಾಟೀಲ, ಮುಂಡರಗಿ-ಗದಗ


