ಇಂಚಗೇರಿಯಲ್ಲಿ ಸಮಾವೇಶ | ೧೦ ಸಾವಿರಕ್ಕೂ ಅಧಿಕ ಪಂಚಮಸಾಲಿಗರ ಪಾಲ್ಗೊಳ್ಳುವಿಕೆ | ಮುಖಂಡ ಸಂಗಮೇಶ ಬಬಲೇಶ್ವರ ಮಾಹಿತಿ
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿಯಲ್ಲಿ ಮೇ.4 ರಂದು ಸಂಜೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಲು ಪಂಚಮಸಾಲಿ ಸಮುದಾಯದ ಸಮಾವೇಶ ಹಮ್ಮಿಕೊಂಡಿರುವುದಾಗಿ ಸಮುದಾಯದ ಮುಖಂಡ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದ ಶುಭಶ್ರಿ ಫಂಕ್ಷನ್ ಹಾಲ್ ನಲ್ಲಿ ಗುರುವಾರದ ನಡೆದ ಪಂಚಮಸಾಲಿ ಸಮಾಜದ ಮುಖಂಡರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಸಮಾವೇಶದ ಮುಖ್ಯ ಉದ್ದೇಶ ನಾವು ಕಾಂಗ್ರೆಸ್ ಪಕ್ಷಕ್ಕೆ ಏಕೆ ಮತ ಹಾಕಬೇಕು ಎಂಬುದಾಗಿದ್ದು, ಅಂದು ಈ ಕುರಿತು ಚಿಂತನ-ಮಂಥನ ನಡೆಯಲಿದೆ. ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಧಾರವಾಡ ಶಾಸಕ ವಿನಯ ಕುಲಕರ್ಣಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಸಿಂದಗಿ ಶಾಸಕ ಅಶೋಕ ಮನಗೂಳಿ, ಆಳಂದ ಶಾಸಕ ಬಿ.ಆರ್.ಪಾಟೀಲ, ಕೊಪ್ಪಳ ಮಾಜಿ ಸಂಸದ ಸಂಗಣ್ಣ ಕರಡಿ ಸೇರಿದಂತೆ ನಾಡಿನ ಮತ್ತು ಜಿಲ್ಲೆಯ ಹಲವು ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡು ವಿವರಣೆಯೊಂದಿಗೆ ಸ್ಪಷ್ಠ ಸಂದೇಶ ನೀಡಲಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸುಮಾರು ಹತ್ತು ಸಾವಿರಕ್ಕೂ ಅಧಿಕ ಸಮಾಜ ಬಾಂಧವರು ಪಾಲ್ಗೊಳ್ಳುವ ಈ ಸಮಾವೇಶ ಮೂಲಕ ಅಂದು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಒಕ್ಕೊರಲ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಖಂಡ ಸಂಗಮೇಶ ಬಬಲೇಶ್ವರ ವಿವರಿಸಿದರು.
ಸಮಾಜದ ಹಿರಿಯ ಮುಖಂಡ ಹಾಗೂ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಎಂ.ಆರ್.ಪಾಟೀಲ ಮಾತನಾಡಿ, ವಿಜಯಪುರದ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು ನಿಷ್ಕ್ರೀಯ ಸಂಸದರಾಗಿದ್ದು ಇವರ ಅಧಿಕಾರಾವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಶೂನ್ಯವಾಗಿದೆ. ನಮ್ಮ ಸಮಾಜದ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಪಕ್ಷದಲ್ಲಿ ತುಂಬಾ ಅನ್ಯಾಯವಾಗಿದ್ದು , ಅದರಲ್ಲಿ ಈ ಹಾಲಿ ಸಂಸದರ ಪಾತ್ರವೂ ಇದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ನಮ್ಮ ಸಮಾಜದ ಎರಡು ಲಕ್ಷಕ್ಕೂ ಅಧಿಕ ಮತದಾರರಿದ್ದು, ನಾವೆಲ್ಲ ಒಕ್ಕಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಸಂಸದ ರಮೇಶ ಜಿಗಜಿಣಗಿ ಅವರನ್ನು ಸಾರಾಸಗಟಾಗಿ ತಿರಸ್ಕರಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಆರ್.ಜಿ.ಯರನಾಳ, ಪಿ.ಎಸ್.ಪಾಟೀಲ, ಶಂಕರಗೌಡ ಪಾಟೀಲ, ಈರಣ್ಣ ಪಟ್ಟಣಶೆಟ್ಟಿ, ಪ್ರಫುಲ್ ಮಂಗಣ್ಣವರ, ಕಾಮರಾಜ ಬಿರಾದಾರ, ಅಶೋಕಗೌಡ ಪಾಟೀಲ ಸೇರಿದಂತೆ ಹಲವರಿದ್ದರು.

” ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್ ನಲ್ಲಿ ಎಂದೂ ಮೌನ ಮುರಿಯದ ವಿಜಯಪುರದ ಹಾಲಿ ಸಂಸದರು ಪಂಚಮಸಾಲಿ ಸಮಾಜಕ್ಕಾಗಿ ಏನನ್ನೂ ಮಾಡಿಲ್ಲ. ಕಾಂಗ್ರೆಸ್ ನಾಯಕರಾದ ಸಚಿವ ಎಂ.ಬಿ.ಪಾಟೀಲರು ನಮ್ಮ ಸಮುದಾಯದ ಭಾವನೆಗಳಿಗೆ ಸದಾ ಸ್ಪಂದಿಸಿದ್ದಾರೆ. ಅನ್ಯ ಪಕ್ಷದಲ್ಲಿರುವ ನಮ್ಮವರು ಪಕ್ಷಭೇದ ಮರೆತು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕಿದೆ.”
– ಸಂಗಮೇಶ ಬಬಲೇಶ್ವರ
ಪಂಚಮಸಾಲಿ ಸಮಾಜದ ಮುಖಂಡರು

