ಲೇಖನ: – ಸಾಯಬಣ್ಣ ಮಾದರ (ಸಲಾದಹಳ್ಳಿ )
ಚುನಾವಣೆ ವ್ಯವಸ್ಥೆಯ ಬಗ್ಗೆ ನಮ್ಮ ಭಾರತ ಸಂವಿಧಾನ ರಚನಾ ಸಭೆಯಲ್ಲಿ ದೀರ್ಘವಾಗಿ ಚರ್ಚಿತವಾದ ವಿಷಯಗಳಲ್ಲೊಂದು ಚುನಾವಣಾ ಪ್ರಕ್ರಿಯೆ ಎಂಬುವುದು, ಭಾರತದ ಅತಿ ದೊಡ್ಡ ಸಯುಕ್ತ ಒಕ್ಕೂಟ ಇಲ್ಲಿ ನೂರಾರು ಭಾಷೆ, ವಿಭಿನ್ನ ಪ್ರಾದೇಶಿಕತೆ, ವಿವಿಧ ಧಾರ್ಮಿಕತೆ, , ಮುಂತಾದವು ವಿವಿಧತೆಯಲ್ಲಿ ಏಕತೆಯನ್ನು ಒಳಗೊಂಡಿದ್ದು, ದೇಶದಲ್ಲಿ ಚುನಾವಣೆ ನಡೆಸುವುದು ಒಂದು ಅತಿ ದೊಡ್ಡ ಸವಾಲಿನ ಕೆಲಸ ಎಂದು ಹೇಳಬಹುದು. ಅದಕ್ಕಾಗಿ ಸಂವಿಧಾನದಲ್ಲಿ ಚುನಾವಣೆ ಆಯೋಗಕ್ಕೆ ಪ್ರತ್ಯೇಕವಾದ ವಿಶೇಷ ಸ್ಥಾನವಿದೆ.
” ಡಾ ಬಿ ಆರ್ ಅಂಬೇಡ್ಕರ್ ಹೇಳಿದಂತೆ ಇನ್ನು ಮುಂದೆ ರಾಜ್ಯರ ಹೊಟ್ಟೆಯಿಂದ ರಾಜರು ಹುಟ್ಟುವುದಿಲ್ಲ ಮತದಾರರ ಮತ ಪೆಟ್ಟಿಗೆಯಿಂದ ಹುಟ್ಟುತ್ತಾನೆ” ಎಂದು ಹೇಳಿದ್ದಾರೆ.
ಅದರಂತೆ ಭಾರತದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆಗಳ ಆವರ್ತನ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳು ದೇಶದಲ್ಲಿ ಮುನ್ನೆಲೆಗೆ ಇತ್ತೀಚಿಗೆ ಬಂದಿವೆ ವಿಶಾಲ ಅಖಂಡ ಭಾರತದಲ್ಲಿ ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ ಯಶಸ್ವಿ ಆಗುತ್ತದೆ ಎಂದು ನಾವು ನೋಡುವುದಾದರೆ ಅದು ತುಂಬಾ ಜಟಿಲವಾದ ಕೆಲಸ ಎಂದು ಹೇಳಬಹುದು .
ಆದರೆ ಏಕ ಕಾಲದಲ್ಲಿ ಚುನಾವಣೆ ನಡೆಸುವುದರ ಬಗ್ಗೆ ವಿಚಾರಗಳು ನಮ್ಮ ದೇಶದಲ್ಲಿ ಹೊಸದೇನಲ್ಲ ಸ್ವಾತಂತ್ರ್ಯ ಬಂದ ಹೊಸದರಲ್ಲಿ ಮೊದಲು ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳಿಗೆ 1951 -52ರ ಸಾರ್ವತ್ರಿಕ ಚುನಾವಣೆಗಳು ನಡೆದಿದ್ದವು ನಂತರ 1957ರಲ್ಲಿ ದೇಶದಲ್ಲಿ ಎಲ್ಲಾ ಚುನಾವಣೆಗಳು ಏಕಕಾಲದಲ್ಲಿ ನಡೆದಿದ್ದವು ತದನಂತರ 1957, 1962ರಲ್ಲಿ, ಮತ್ತು 1967ರಲ್ಲಿ ಮೂರು ಸಾರ್ವತಿಕ ಚುನಾವಣೆಗಳು ಲೋಕಸಭೆಯೊಂದಿಗೆ ಎಲ್ಲಾ ರಾಜ್ಯಗಳ ವಿಧಾನಸಭೆಗಳು ಏಕಕಾಲದಲ್ಲಿ ನಡೆದಿದ್ದು ನಾವು ಗಮನಿಸಬಹುದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ಒಟ್ಟಿಗೆ ನಡೆಸುವ ಪ್ರಸ್ತಾವನೆ ಈಗಿನ ಉಲ್ಲೇಖನವಲ್ಲ .
ಅಂದು 1983 ರಲ್ಲಿ ಚುನಾವಣಾ ಆಯೋಗವು ತನ್ನ ವಾರ್ಷಿಕ ವರದಿಯಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ವ್ಯವಸ್ಥೆಯನ್ನು ರೂಪಿಸಬೇಕೆಂದು ಶಿಫಾರಸ್ಸು ಮಾಡಿತು.
ನಂತರ ಕಾನೂನು ಆಯೋಗವು 1999 ರಲ್ಲಿ 120ನೇ ವರದಿಯ ಪ್ರಕಾರ ಲೋಕಸಭೆ ಮತ್ತು ಎಲ್ಲಾ ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆಸಿ ಹಿಂದಿನ ಕಾಲಕ್ಕೆ ಹಿಂತುರುಗಬೇಕು ಎಂದು ಹೇಳಿತು.
ಇತ್ತೀಚಿಗೆ 2015ರಲ್ಲಿ ಸಂಸದೀಯ ಸ್ಥಾಯಿ ಸಮಿತಿಯು 79ನೇ ವರದಿಯ ಪ್ರಕಾರ ಎನ್ ಐ ಟಿ ಐ ಆಯೋಗವು ಮಾಜಿ ಅಧ್ಯಕ್ಷರ ನೇತೃತ್ವದಲ್ಲಿ ಕಾನೂನು ಸಚಿವಾಲಯದ 8 ಸದಸ್ಯರ ಒಂದು ಕಮಿಟಿ ರಚಿಸಿತ್ತು .
ಭಾರತದಲ್ಲಿ ಏಕಕಾಲಕ್ಕೆ ಚುನಾವಣಾ ನಡೆಸಲು ಕೊಡುವ ಕಾರಣ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳು ಆವರ್ತನ ಮತ್ತು ಅದಕ್ಕೆ ಸಂಬಂಧಿಸಿದ ವೆಚ್ಚ ಕಡಿಮೆ ಮಾಡುವುದು ಎಂದು ಹೇಳುತ್ತವೆ.
ಕೆಲವು ಉದಾಹರಣೆಗಳು ನೋಡುವುದಾದರೆ 2017ರಲ್ಲಿ 1015 ಲಕ್ಷ ಕೋಟಿ ರೂಪಾಯಿಗಳು ವೆಚ್ಚ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅದೇ ತರ 2019 ರ ಚುನಾವಣೆಯು ಅತ್ಯಂತ ದುಬಾರಿ ಚುನಾವಣೆ ಎಂದು ಗುರುತಿಸಲಾಗಿದೆ ಈ ಚುನಾವಣೆಯಲ್ಲಿ 55000 ಕೋಟಿ ರೂಪಾಯಿಗಳು 50 ಲಕ್ಷ ಸಿಬ್ಬಂದಿ ವರ್ಗದವರು 20 ಲಕ್ಷ ಇವಿಎಂ ಮಷೀನ್ ಬಳಕೆ ಮಾಡಲಾಗಿದೆ. ಆದರೆ ಇದನ್ನೇ ಏಕಕಾಲದಲ್ಲಿ ನಾವು ಚುನಾವಣೆ ನಡೆಸಿದರೆ ನಾಲ್ಕು ಲಕ್ಷ ಕೋಟಿ ಉಳಿಸಬಹುದು ಎಂಬುವುದು ಒಂದು ಅಂದಾಜು ಅದರಂತೆ ಹಣ ಉಳಿತಾಯವಾಗುತ್ತದೆ, ಮಾನವನ ಸಂಪನ್ಮೂಲವು ಕಡಿಮೆಯಾಗುತ್ತದೆ ಎಂಬುವುದು ಮೊದಲನೆಯ ವಾದ ಅದೇ ತರ ಎರಡನೇ ವಾದವೇನೆಂದರೆ ಪದೇ ಪದೇ ಚುನಾವಣೆ ನಡೆಸಿದರೆ ಸರ್ಕಾರಿ ಕೆಲಸಗಳಿಗೆ ಅಡಚಣೆ ಮತ್ತು ನೀತಿ ಸಂಹಿತೆ ಜಾರಿಯಾಗುವುದರಿಂದ ಸರ್ಕಾರದ ವೇಗ ಕಳೆದುಕೊಳ್ಳುತ್ತದೆ ಎಂದು.
ನಾಲ್ಕು ಲಕ್ಷ ಕೋಟಿ ಉಳಿಸಲು ಸಂವಿದಾನಕ್ಕೆ ಮತ್ತು ಚುನಾವಣೆ ವ್ಯವಸ್ಥೆಗೆ ಬಾರಿ ಬದಲಾವಣೆ ಮಾಡಬೇಕಾಗುತ್ತದೆ. ಆದರೆ ಒಂದು ಆಶ್ಚರ್ಯಕರ ಸಂಗತಿ ಏನೆಂದರೆ ಸರ್ಕಾರವು ಪ್ರತಿ ವರ್ಷ ಕಾರ್ಪೊರೇಟ್ ಕಂಪನಿಗಳಿಗೆ ಎರಡು ಲಕ್ಷ ಕೋಟಿ ರೂಪಾಯಿ ಸಬ್ಸಿಡಿ ಕೊಡುತ್ತದೆ ಅದರ ಉದ್ದೇಶ ಸ್ಥಳೀಯರಿಗೆ ಉದ್ಯೋಗ ನೀಡುವುದಾಗಿದೆ ಆದರೆ ಯಾವ ಕಂಪನಿಯೂ ನಿರುದ್ಯೋಗ ನಿವಾರಿಸಲು ಪ್ರಯತ್ನಿಸಿಲ್ಲ ಎಂಬುದು ಕಟು ವಾಸ್ತವ್ಯ.
ಒಂದು ದೇಶ ಒಂದು ಚುನಾವಣೆ ಬರುವದರಿಂದ ಫೆಡರಲ್ ಸಿಸ್ಟಮ್ ಗೆ ಭಾರಿ ಬದಲಾವಣೆಗೆ ಒಳಪಡುತ್ತದೆ ಏಕಕಾಲಕ್ಕೆ ದೇಶದ ಎಲ್ಲಾ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆದರೆ ಸಂಯುಕ್ತ ಒಕ್ಕೂಟ ವ್ಯವಸ್ಥೆಯ ನಿಯಮವನ್ನು ಗಾಳಿಗೆ ತೋರಿದಂತಾಗುತ್ತದೆ ಏಕೆಂದರೆ ಲೋಕಸಭೆ ಚುನಾವಣೆ ವಿಚಾರವು ರಾಷ್ಟ್ರೀಯತೆ ಮತ್ತು ಅಂತರಾಷ್ಟ್ರೀಯ ವಿಚಾರಗಳು ಜನರ ಮುಂದೆ ಇರುವುದು, ಅದೇ ವಿಧಾನಸಭೆ ಚುನಾವಣೆಯಲ್ಲಿ ಪ್ರಾದೇಶಿಕತೆ ಸಮಸ್ಯೆಗಳು, ಶಿಕ್ಷಣ ಮೂಲಭೂತ ಸೌಲಭ್ಯ ಮುಂತಾದ ವಿಷಯಗಳು ಮುನ್ನಲೆಯಲ್ಲಿ ಬರುತ್ತವೆ ಮುನಿಸಿಪಾಲಿಟಿ ಚುನಾವಣೆಯಲ್ಲಿ ನಗರದ ಸ್ವಚ್ಛತೆ ಸ್ಥಳೀಯ ಸಮಸ್ಯೆಗಳ ಮೇಲೆ ಚುನಾವಣೆ ನಡೆಯುತ್ತದೆ. ಏಕಕಾಲದಲ್ಲಿ ಚುನಾವಣೆ ನಡೆದರೆ ಜನರು ಗೊಂದಲದಲ್ಲಿ ಶಿಲುಕಿಸಿದಂತಾಗುತ್ತದೆ ಜನರು ಅತ್ತ ದರಿತ್ತಪುಲಿ ಇತ್ತ ಪುಲಿ ಹಾಗೆ ಸಾಮಾನ್ಯ ಜನರ ದಿಕ್ಕು ತಪ್ಪಿಸಿದಂತಾಗುತ್ತದೆ
ಭಾರತದ ಸಂಯುಕ್ತ ಒಕ್ಕೂಟದಲ್ಲಿ ಅವುಗಳ ಅಧಿಕಾರದ ಮೊಟಕುಗೊಳಿಸಿ ಕೇಂದ್ರ ಸರ್ಕಾರದ ಅಧೀನದಲ್ಲಿ ಎಲ್ಲಾ ಆಡಳಿತ ವ್ಯವಸ್ಥೆ ಕೇಂದ್ರೀಕರಣ ಗೊಳ್ಳುತ್ತದೆ ಯಾವುದಾದರೂ ರಾಜ್ಯದಲ್ಲಿ ಬಹುಮತ ಕುಸಿತವಾದರೆ ಅಲ್ಲಿ ಚುನಾವಣೆ ನಡೆಸದೆ ರಾಷ್ಟ್ರಪತಿ ಆಡಳಿತವು ಒಳಪಡುವುದು ಇದು ಏನನ್ನು ತೋರಿಸುತ್ತದೆ ಎಂದರೆ, ಬ್ರಿಟಿಷ್ ಸರ್ಕಾರದಲ್ಲಿದ್ದ ಸಹಾಯಕ ಸೈನಿಕ ಪದ್ಧತಿಯನ್ನು ಹೋಲುತ್ತದೆ ಎಂದರೆ ತಪ್ಪಾಗದು, ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವವನ್ನು ಕ್ರಮೇಣ ಕಳೆದುಕೊಳ್ಳುತ್ತವೆ ಎಂದು ಹಲವಾರು ವರದಿಗಳು ಈಗಾಗಲೇ ಹೇಳಿವೆ.
ಭಾರತದ ಸಂವಿಧಾನದಲ್ಲಿ ಚುನಾವಣಾ ಆಯೋಗಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ ಚುನಾವಣಾ ಆಯೋಗ ಎರಡು ಪ್ರಕಾರ ಹೊಂದಿದೆ ಒಂದು ಭಾರತೀಯ ಚುನಾವಣಾ ಆಯೋಗವು ಇದು ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಚುನಾವಣಾ ಆಯೋಗ ನಡೆಸುತ್ತದೆ ಎರಡನೆಯದು ರಾಜ್ಯ ಚುನಾವಣೆ ಆಯೋಗ ಇದು ಸ್ಥಳೀಯ ಸಂಸ್ಥೆಗಳ ಚುನಾವಣೆ ಜವಾಬ್ದಾರಿಯನ್ನು ನಿಭಾಯಿಸುತ್ತದೆ.
ಏಕರೂಪ ಚುನಾವಣೆ ವ್ಯವಸ್ಥೆಯಿಂದ ರಾಷ್ಟ್ರೀಯ ಪಕ್ಷಗಳಿಗೆ ಲಾಭವಿದೆ ಎಂಬುವುದರಲ್ಲಿ ಎರಡು ಮಾತಿಲ್ಲ ಆದರೆ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವಕ್ಕೆ ನೆಲೆ ಸಿಗದು
ಅದರಂತೆ ನಾವು ಅಂತರಾಷ್ಟ್ರೀಯ ದೃಷ್ಟಿಕೋನದಲ್ಲಿ ನೋಡುವುದಾದರೆ ದಕ್ಷಿಣ ಆಫ್ರಿಕಾದಲ್ಲಿ ಚುನಾವಣೆಯು ರಾಷ್ಟ್ರೀಯ ಮತ್ತು ಪ್ರಾಂತೀಯ ಶಾಸಕಾಂಗಗಳಿಗೆ ಐದು ವರ್ಷಗಳ ಕಾಲಕ್ಕೆ ಏಕಕಾಲದಲ್ಲಿ ಚುನಾವಣೆ ನಡೆಸಲಾಗುತ್ತದೆ ಮತ್ತು ಎರಡು ವರ್ಷಗಳ ನಂತರ ಪುರುಸಭೆ ಚುನಾವಣೆಗಳು ನಡೆಯುತ್ತವೆ.
ಇನ್ನು ಸ್ವೀಡನ್ ದೇಶದಲ್ಲಿ ರಾಷ್ಟ್ರೀಯ ಶಾಸಕಾಂಗ ಮತ್ತು ಸ್ಥಳೀಯ ಸಂಸ್ಥೆಗಳಿಗೆ / ಮುನ್ಸಿಪಾಲಿಟಿ ಅಸೆಂಬ್ಲಿಗಳಿಗೆ ನಿಗದಿತ ದಿನಾಕಂದು ಚುನಾವಣೆ ನಡೆಸುತ್ತಾರೆ ಆದರೆ, ಈ ದೇಶಗಳು ಗಟ್ಟಿ ಪ್ರಜಾಪ್ರಭುತ್ವದ ಬೇರುಗಳಲ್ಲ ಎಂಬುದನ್ನು ಅರಿಯಬೇಕು.
ಒಂದು ದೇಶ ಒಂದು ಚುನಾವಣೆ ಜಾರಿಗೆ ತಂದರೆ ಇದು ನಮ್ಮ ಸಂವಿಧಾನ ರಚನೆಗೆ ಮತ್ತು ಮೂಲಭೂತ ತತ್ವಗಳು ದುರ್ಬಲಗೊಳ್ಳುತ್ತವೆ ಹಾಗೂ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಆಡಳಿತ ಪ್ರದೇಶಗಳು,ವೇಳಾಪಟ್ಟಿಗಳು ಸಂಪನ್ಮೂಲಗಳು, ಇತ್ಯಾದಿ ಸಂಯೋಜಿಸುವುದು ಸೇರಿದಂತೆ ಬೃಹತ್ ಲಾಜಿಸ್ಟಿಕಲ್ ಸವಾಲುಗಳು ಎದುರಾಗುತ್ತವೆ.
ಚುನಾವಣೆ ಸಿಂಕ್ರೋನೈಸ್ ಮಾಡುವುದರಿಂದ ಆ ಪ್ರದೇಶದ ಪ್ರಾದೇಶಿಕ ಪರಿಸರದ ಮೇಲೆ ವ್ಯತ್ಯಾಸವಾಗುತ್ತದೆ ಅದರ ವ್ಯವಸ್ಥೆಯು ಸಮರ್ಪಕವಾಗಿ ಪರಿಗಣನೆಗೆ ಬರುವುದಿಲ್ಲ. ಚುನಾವಣೆ ನಡೆಸುವುದು ದುಬಾರಿಯಾಗುತ್ತದೆ ಮತ್ತು ಮಾನವ ಸಂಪನ್ಮೂಲಗಳ ಕೊರತೆ ಉಂಟಾಗಿ ಗಲಭೆಗಳು, ಅಕ್ರಮ ಚಟುವಟಿಕೆಗಳು ಉಂಟಾಗಬಹುದು ಎಂದು ಈಗಾಗಲೇ ಕೇಂದ್ರ ಸರಕಾರಕ್ಕೆ ವರದಿಗಳು ಕೊಡಲ್ಪಟ್ಟಿವೆ.
“ಅಧಿಕಾರದ ಮೇಲೆ ಸಂವಿಧಾನಾತ್ಮಕ ನಿರ್ಧಾರಗಳಿದ್ದರೂ ಕೂಡ ಆ ಅಧಿಕಾರಸ್ತ ಅತ್ಯಂತ ಬಲಿಷ್ಠವಾದ ಕಾರ್ಯಾಂಗದ ಅಧಿಪತಿಯಾಗಿ ಬದಲಾಗುತ್ತಾನೆ” ಎಂದು ಲಾರ್ಡ್ ಬ್ರೈನ್ ಹೇಳಿಕೆಯನ್ನು ನಾವು ಇಲ್ಲಿ ನೋಡಬಹುದು.
ಕೆಲವು ವರ್ಷಗಳ ಅಧಿಕಾರಕ್ಕಾಗಿ ಮುಂದಿನ ಪೀಳಿಗೆಗೆ ಸಂಘರ್ಷದ ರಾಷ್ಟ್ರ ನಿರ್ಮಾಣವಾಗುವುದು ಸೂಕ್ತವಲ್ಲ, ಒಟ್ಟಾರೆಯಾಗಿ ಹೇಳುವುದಾದರೆ ಭಾರತದಲ್ಲಿ ಏಕಕಾಲದಲ್ಲಿ ಚುನಾವಣೆ ವೆಚ್ಚ, ಉಳಿತಾಯ, ಸಮಯ ಮತ್ತು ಕಡಿಮೆ ರಾಜಕೀಯ ಅಡ್ಡಿಪಡಿಸುವ ಸಾಮರ್ಥ್ಯವನ್ನು ನೀಡುತ್ತದೆ ಎಂದು ಹೇಳಬಹುದು. ಆದರೆ, ಅವುಗಳು ಗಮನಾರ್ಹವಾದ ವ್ಯವಸ್ಥಾಪನ, ಸಂವಿಧಾನಿಕ ಮತ್ತು ಆಡಳಿತದ ಸವಾಲುಗಳೊಂದಿಗೆ ಬರುತ್ತದೆ. ಅಲ್ಲದೆ ಆಡಳಿತದ ದುರುಪಯೋಗವಾಗಿ ಸರ್ವಾದಿ ಕಾರತ್ವಕ್ಕೆ ಮುನ್ನುಡಿಯನ್ನು ಬರೆಯಬಹುದು. ಆದ್ದರಿಂದ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ ಈ ಪರಿಕಲ್ಪನೆಯೂ ಯಶಸ್ವಿಯಾಗಿ ಕಾರ್ಯಗತಗೊಳಿಸುವುದು ಸುಲಭ ಸಾಧ್ಯವಾಗದು ಎಂದು ಹೇಳಬಹುದು.

ಲೇಖನ: – ಸಾಯಬಣ್ಣ ಮಾದರ (ಸಲಾದಹಳ್ಳಿ )

