ಡಾ.ಪೂರ್ಣಿಮಾ ಕೆ ಧಾಮಣ್ಣವರಉಪನ್ಯಾಸಕರು, ಕನ್ನಡ ಅಧ್ಯಯನ ವಿಭಾಗ, ರಾಣಿ ಚನ್ನಮ್ಮ ವಿವಿ, ಡಾ ಫ.ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರ ವಿಜಯಪುರ
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿಯಲ್ಲ, ಅವರೊಬ್ಬರು ಮಹಾನಶಕ್ತಿ. ಜ್ಞಾನದ ಶಿಖರವನ್ನೇರಿ ಕುಳಿತ ಜ್ಞಾನಸೂರ್ಯ, ಕಠಿಣ ಪರಿಶ್ರಮ ಮತ್ತು ಸ್ವ ಸಾಮರ್ಥ್ಯದಿಂದ ಈ ದೇಶದ ಅಗ್ರಗಣ್ಯ ರಾಷ್ಟ್ರನಾಯಕನಾಗಿ ಶೋಷಣೆಗೊಳಪಟ್ಟಿದ ಮೇರು ಪುರುಷ ಡಾ ಅಂಬೇಡ್ಕರ್.
೬೦ಕ್ಕಿಂತ ಹೆಚ್ಚು ವಿಶ್ವದ ಎಲ್ಲ ಸಂವಿಧಾನವನ್ನು ಅಧ್ಯಯನ ಮಾಡಿ ಜೀರ್ಣಿಸಿಕೊಂಡವರು ಅಂಬೇಡ್ಕರ್ ಅವರು. ಇಂದು ಪ್ರಪಂಚಕ್ಕೆ ಮಾದರಿಯಾಗಿರುವ ವಿಶ್ವವಿಖ್ಯಾತ ಭಾರತ ಸಂವಿಧಾನವನ್ನು ರಚಿಸುವುದರ ಮೂಲಕ ಡಾ. ಅಂಬೇಡ್ಕರ್ ಯಾರಿಂದಲೂ ಬೆಲೆ ಕಟ್ಟಲಾಗದ ಹಾಗೂ ಈ ಪ್ರಜಾಪ್ರಭುತ್ವ ವ್ಯವಸ್ಥೆ ಇರುವವರೆಗೂ ಶಾಶ್ವತವಾಗಿ ಉಳಿಯುವಂತಹ ಮಹತ್ಕಾರ್ಯ ಮಾಡಿದ್ದಾರೆ.
ಪ್ರಸ್ತುತ ವಿಶ್ವದಲ್ಲಿ ನಮ್ಮ ಭಾರತ ದೇಶಕ್ಕೆ ವಿಶೇಷ ಗೌರವ, ಘನತೆ, ಕೀರ್ತಿ ಲಭಿಸುತ್ತಿರುವುದೇ ನಮ್ಮ ಸಂವಿಧಾನ ಮತ್ತು ಸಂವಿಧಾನದ ಮೂಲಕ ನಿರ್ಮಾಣಗೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಿಂದಾಗಿ ಎಂಬ ವಾಸ್ತವವನ್ನು ಹೇಳಿಕೊಳ್ಳಲು ನಮ್ಮಗೆಲ್ಲ ಹೆಮ್ಮೆಯ ವಿಷಯ.
ಕೊಲಂಬಿಯಾ ವಿಶ್ವವಿದ್ಯಾಲಯ ಅಮೇರಿಕಾದಲ್ಲಿ ಡಾ. ಅಂಬೇಡ್ಕರ್ ಅವರಿಗೆ ಎಲ್.ಎಲ್. ಡಿ ಪ್ರಧಾನ ಮಾಡುವ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರು ಸಂವಿಧಾನದ ಕತೃವಾಗಿ, ಕೇಂದ್ರ ಸಂಪುಟದ ಮತ್ತು ರಾಜ್ಯ ಸಮಿತಿಯ ಸದಸ್ಯರಾಗಿ, ಭಾರತದ ಮಾರ್ಗದರ್ಶಕ ಪ್ರಜೆಯಾಗಿ, ಅಪ್ರತಿಮ ಸಮಾಜ ಸುಧಾರಕರು ಮತ್ತು ಮಾನವ ಹಕ್ಕುಗಳನ್ನು ಎತ್ತಿ ಹಿಡಿದ ಧೀರೋದಾತ್ತ ವೀರಗ್ರಣಿಯಾಗಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಡಾ. ಅಂಬೇಡ್ಕರ್.
ಜಾತಿ ನಿರ್ಮೂಲನೆಯ ಹರಿಕಾರ:
ಜಾತಿಯ ಸಮಸ್ಯೆಯನ್ನು ಅತ್ಯಂತ ಆಳವಾದ ಅಧ್ಯಯನ ಮಾಡಿರುವ ಏಕೈಕ ವ್ಯಕ್ತಿ ಡಾ. ಅಂಬೇಡ್ಕರ್. ಧೈಯ್ ಜಾತಿಗೆ ಆಧಾರವಾದ ಧಾರ್ಮಿಕ ಕಲ್ಪನೆಗಳನ್ನು ನಿರ್ಮೂಲನೆಗೊಳಿಸಿದಾಗ ಮಾತ್ರ ಜಾತಿಯನ್ನು ಮುರಿದು ಹಾಕಲು ಸಾಧ್ಯ ಎಂಬ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡವರು. ರಾಜಕೀಯ ಸುಧಾರಣೆಗಿಂತ ಸಾಮಾಜಿಕ ಸುಧಾರಣೆ ಅಗತ್ಯತೆ ಏಕೆ ಎಂಬುವುದನ್ನು ವಾಸ್ತವಿಕ ಅನಿಷ್ಟ ಘಟನೆಗಳ ಮೂಲಕ ಸಮಾಜದ ಇನ್ನೊಂದು ಮಗ್ಗಲನ್ನು ಡಾ. ಅಂಬೇಡ್ಕರ್ ಅವರು ಪರಿಚಯಿಸುತ್ತಾರೆ.
ಪೇಶ್ವೆಗಳ ಆಳುತ್ತಿದ್ದ ಕಾಲದಲ್ಲಿ ಅಸ್ಪೃಶ್ಯರನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು ಎಂಬುವುದನ್ನು ವಾಸ್ತವಿಕ ಘಟನೆಗಳನ್ನಾಧರಿಸಿ ಗಮನದಲ್ಲಿಟ್ಟುಕೊಂಡು ಕೆಲವೊಂದು ಪ್ರಶ್ನೆಗಳನ್ನ ಮಾಡುತ್ತಾರೆ ಡಾ. ಅಂಬೇಡ್ಕರ್ ಅವರು. – ಸಾರ್ವಜನಿಕ ಬಾವಿಗಳಿಂದ ನೀರು ತರಲಿಕ್ಕೆ ಬಿಡದವರು ರಾಜಕೀಯ ಅಧಿಕಾರ ಕೊಡುತ್ತಾರೆಯೇ? – ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸಲು ಬಿಡದವರು ರಾಜಕೀಯ ಅಧಿಕಾರ ಕೊಡುತ್ತಾರೆಯೇ? – ಬಟ್ಟೆಗಳನ್ನು ಉಡಲು ಆಭರಣಗಳನ್ನು ಧರಿಸಲು ಬಿಡದವರು ರಾಜಕೀಯ ಅಧಿಕಾರ ಕೊಡುತ್ತಾರೆಯೇ?- ಊಟದಲ್ಲಿ ತುಪ್ಪವನ್ನು ಚಪಾತಿಯನ್ನು ತಿನ್ನಲು ಬಿಡದವರು ರಾಜಕೀಯ ಅಧಿಕಾರ ಕೊಡುತ್ತಾರೆಯೇ? ಇದು ಅಸಾಧ್ಯವಾದದ್ದು ಎಂದು ಡಾ. ಅಂಬೇಡ್ಕರ್ ಅವರು ಹೇಳುತ್ತಾರೆ.
ವಿಲ್‌ರ ಹೇಳಿದಂತೆ ಒಂದು ವರ್ಗದ ಜನರನ್ನು ಆಳಲು ಇನ್ನೊಂದು ವರ್ಗದ ಜನರಿಗೆ ಅಧಿಕಾರವಿಲ್ಲ ಎಂಬುವುದನ್ನು ಪ್ರತಿಯೊಬ್ಬ ಹಿಂದೂ ಒಪ್ಪಿಕೊಳ್ಳಲೇಬೇಕೆಂದು ಅಂಬೇಡ್ಕರ್ ತಮ್ಮ ಭಾಷಣದಲ್ಲಿ ಪ್ರಶ್ನಿಸುತ್ತಾರೆ. ಉಚ್ಚಜಾತಿಯ ಸಮಾಜ ಸುಧಾರಕ ಹಿಂದೂಗಳು ಕೇವಲ ವಿಧವಾ ವಿವಾಹದ ಪ್ರತಿಪಾಧನೆ, ಬಾಲ್ಯವಿವಾಹದ ವಿರೋಧ ಇವುಗಳನ್ನಷ್ಟೇ ಪ್ರತಿಪಾಧಿಸುತ್ತಿದ್ದರು. ಏಕೆಂದರೆ ಈ ಸಮಸ್ಯೆಗಳನ್ನು ತಮ್ಮತಮ್ಮ್ಮ ಕುಟುಂಬಗಳಲ್ಲಿ ಎದುರಿಸುತ್ತಿದ್ದರು. ಹೀಗಾಗಿ ಇದು ಕುಟುಂಬದ ಸುಧಾರಣೆಯಾಗಿತ್ತಷ್ಟೇ ಹೊರತು ಜಾತಿಯ ನಿರ್ಮೂಲನೆ ಮಾಡಿ ಹಿಂದೂ ಸಮಾಜದ ಸುಧಾರಣೆಗೆ ಅವರು ಯಾರು ಪ್ರಯತ್ನಿಸಿರಲಿಲ್ಲ. ಸವರ್ಣಿಯ ಹಿಂದೂಗಳ ಸುಧಾರಣೆ ಕುಟುಂಬ ಸುಧಾರಣೆ ಎನ್ನುವ ಸಂಕುಚಿತ ಅರ್ಥದಲ್ಲಿ ಅವರು ನಡೆಸಿದ್ದರು.
ಜಾತಿ ಪ್ರಜ್ಞೆ ಬಲಿಷ್ಟವಾಗಿ ಉಳಿದು ಬಂದಿರುವುದರಿಂದ ಜಾತಿ ಕಲಹಗಳಿಗೆ ಕುಖ್ಯಾತಿ ಪಡೆದಿದೆ. ಈ ಜಾತಿ ಕಲಹಗಳು ಪ್ರಾಚೀನ ಕಾಲದಿಂದ ಅಚ್ಚಳಿಯದ ನೆನಪುಗಳಾಗಿ ಉಳಿದಿದೆ. ಇದರಿಂದ ‘ಏಕತೆ’ ಮರೆಯಾಗಿದೆ ಎನ್ನುತ್ತಾರೆ ಡಾ. ಅಂಬೇಡ್ಕರ್ ಅವರು.
ಜಾತಿ ಎಂಬುವುದು ಇಟ್ಟಿಗೆಗಳಿಂದ ಕಟ್ಟಿದ ಒಂದು ಕಟ್ಟಡವಲ್ಲ, ಮುಳ್ಳು ತಂತಿಯ ಬೇಲಿ ಅಲ್ಲ. ಹೀಗಾಗಿ ಕೈಯಿಂದ ತೆಗೆದು ಹಾಕಲು ಅಸಾಧ್ಯ. ಜಾತಿ ಎಂಬುವುದು ಒಂದು ಮನೋಭಾವ ಜಾತಿ ವಿನಾಶವೆಂದರೆ ಅಂತಹ ಮನಸ್ಥಿಯು ಕೂಡ ನಾಶವಾಗಬೇಕು. ಆ ಮನಸ್ಥಿತಿಗೆ ಮುಖ್ಯವಾದ ಆಧಾರ ಎಂದರೆ ಹಿಂದೂ ಧರ್ಮದ ಗ್ರಂಥಗಳು. ವೇಧ, ಶಾಸ್ತ್ರ, ಪುರಾಣಗಳಿವೆ. ಇವುಗಳ ಬೋಧಕರು ಯಾರು ಎಂದರೆ ಬ್ರಾಹ್ಮಣರು. ಒಂದು ವೇಳೆ ಬ್ರಾಹ್ಮಣರು ಮುಂದಾಳತ್ವದಲ್ಲಿ ಜಾತಿಪದ್ದತಿ ಒಂದು ಪಾಪ ಅದೊಂದು ಕಳಂಕ ಅದನ್ನು ನಿವಾರಿಸಲು ಮತ್ತು ಎಲ್ಲರ ಮನಃ ಪರಿವರ್ತನೆಗಾಗಿ ಹೋರಾಟ ಅದರಲ್ಲೂ ಕ್ರಾಂತಿಕಾರಿ ಹೋರಾಟ ಮಾಡಿದ್ದೇ ಆದರೆ ಜಾತಿ-ವಿನಾಶ ಸಾಧ್ಯವಿದೆ ಎಂದು ಡಾ. ಅಂಬೇಡ್ಕರ್ ಅವರು ಹೇಳುತ್ತಾರೆ. ಹಾಗಾದರೆ ಈ ಮಾರ್ಗ ಸಾಧ್ಯವೇ? ಅಸಾಧ್ಯವಾದದ್ದು.

*ಅಸ್ಪೃಶ್ಯರ ಕುರಿತಾದ ಚಿಂತನೆ
ಡಾ. ಅಂಬೇಡ್ಕರ್‌ರವರ ಪ್ರಮುಖ ಕೃತಿಗಳಲ್ಲಿ ಅಸ್ಪೃಶ್ಯವು ಒಂದು. ಈ ಕೃತಿಯಲ್ಲಿ ಅಸ್ಪೃಶ್ಯರಾಗಿ ಜನಿಸಿದ ಹಾಗೂ ತಮ್ಮ ವ್ಯೆಯಕ್ತಿಕ ಶ್ರದ್ಧಾಭಕ್ತಿ ಮತ್ತು ಸದ್ಗುಣಗಳಿಂದ ಸರ್ವರ ಗೌರವಕ್ಕೆ ಪಾತ್ರರಾದ ನಂದವೀರ, ರವಿದಾಸ ಮತ್ತು ಚೋಖಾವೇಳಾ ಇವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಈ ಕೃತಿ ಅರ್ಪಿಸುತ್ತಾರೆ. ಈ ಕೃತಿಯಲ್ಲಿ ಡಾ. ಅಂಬೇಡ್ಕರ್‌ರವರು ತಮ್ಮ ಅಭಿಪ್ರಾಯವನ್ನು ಈ ರೀತಿ ವ್ಯಕ್ತಪಡಿಸುತ್ತಾರೆ. ಅಸ್ಪೃಶ್ಯರು ಊರ ಹೊರಗೆ ಏಕೆ ವಾಸಿಸುತ್ತಾರೆ? ಎಂಬ ಪ್ರಶ್ನೆ ಅಂಬೇಡ್ಕರ್‌ರವರು ಉತ್ತರವನ್ನು ಹುಡುಕುತ್ತಾ ವಿಶ್ಲೇಷಿಸುತ್ತಾರೆ. ಅದೇ ರೀತಿ ಮನುಸ್ಮೃತಿಯಲ್ಲಿ ವ್ಯಕ್ತಗೊಂಡಿರುವುದನ್ನು ಉಲ್ಲೇಖಿಸಿ ಮನು ಪ್ರಕಾರ ‘ಅಂತ್ಯಜರು ಊರ ಹೊರಗೇ ವಾಸಿಸಬೇಕು. ಅವರು ಮನೆಗಳು ಊರ ಹೊರಗೆ ಇರತಕ್ಕದ್ದು ಮತ್ತು ಅವರನ್ನು ಅಪಾತ್ರರನ್ನಾಗಿ ಮಾಡಬೇಕು. ನಾಯಿ ಮತ್ತು ಕತ್ತೆ ಅವರ ಸಂಪತ್ತು ಆಗಬೇಕು, ಅವರು ಶವಕ್ಕೆ ತೊಡಿಸಿದ ಬಟ್ಟೆಯನ್ನು ತೊಡಬೇಕು, ಅವರ ಆಭರಣಗಳು ಕಬ್ಬಿಣದಿಂದ ಮಾಡಿದಂತವುಗಳೇ ಆಗಿರಬೇಕು, ವ್ಯವಹಾರಕ್ಕೆ ಬಂದಾಗ ತಮ್ಮತಮ್ಮಲ್ಲಿ ನಡೆಯಬೇಕು, ಅಲೆಮಾರಿ ಜೀವನ ನಡೆಸಬೇಕು. ಈ ಕಟ್ಟುನಿಟ್ಟಿನ ನಿಯಮಕ್ಕೆ ಬಾಬಾಸಾಹೇಬರು ಎರಡು ಪ್ರಶ್ನೆಗಳನ್ನು ಮುಂದಿಡುತ್ತಾರೆ. ಮನುವಿನ ಶಾಸ್ತ್ರದ ಪ್ರಕಾರ ಅಸ್ಪೃಶ್ಯರು ಊರ ಹೊರಗೆ ಮೊದಲಿನಿಂದಲೂ ವಾಸಿಸುತ್ತಿದ್ದರೇ? ಎರಡನೆಯದು ಊರಿಂದ ಊರಿಗೆ ಹೊರಗೆ ಸ್ಥಳಾಂತರಿಸಲಾಯಿತೆ?. ಹಾಗಾದರೆ ಈ ಅಸ್ಪೃಶ್ಯರ ಉಗಮ ಹೇಗಾಯಿತು ಎಂಬುವುದರ ಕುರಿತು ಸಂಶೋಧನೆ ಮಾಡಿದ ಏಕೈಕ ಲೇಖಕರಾದ ಸ್ಞಾö್ಯನ್ಲಿ ರೈಸ್‌ರ ಸಿದ್ಧಾಂತವನ್ನು ಇಲ್ಲಿ ಅಂಬೇಡ್ಕರ್‌ರವರು ವಿಸ್ತಾರವಾಗಿ ಚರ್ಚಿಸುತ್ತಾರೆ. ೧. ಅಸ್ಪೃಶ್ಯರ ಮೂಲ ನಿವಾಸಿಗಳಾಗಿದ್ದು ಅವರು ಆರ್ಯ ಮತ್ತು ದ್ರಾವಿಡರಕ್ಕಿಂತ ಭಿನ್ನರಾಗಿದ್ದರೆ? ೨. ದ್ರಾವಿಡರಿಂದ ಅವರು ಸೋಲಿಸಲ್ಪಟ್ಟವರು ಮತ್ತು ಪರಾಧೀನ ಮಾಡಲ್ಪಟ್ಟವರೆ? ಸ್ಟಾö್ಯನ್ಲಿ ರೈಸ್ ಅವರ ಪ್ರಕಾರ ಭಾರತದ ಮೇಲೆ ಎರಡು ಆಕ್ರಮಣಗಳು ಜರುಗಿವೆ.
೧. ಭಾರತದ ಮೇಲೆ ದ್ರಾವಿಡರ ಆಕ್ರಮಣ ಅಸ್ಪೃಶ್ಯರ ಪೂರ್ವಜರಾದ ಮೂಲ ನಿವಾಸಿಗಳನ್ನು ಅವರು ಜಯಿಸಿದರು, ಹಾಗೂ ಅವರನ್ನು ಅಸ್ಪೃಶ್ಯರಾಗಿ ಮಾಡಿದರು.
೨. ಆರ್ಯರ ಆಕ್ರಮಣ ಆರ್ಯರು ದ್ರಾವಿಡರ ಮೇಲೆ ವಿಜಯ ಸಾಧಿಸಿದರು. ಈ ಅಂಶದ ಆಧಾರದ ಮೇಲೆ ಡಾ. ಅಂಬೇಡ್ಕರ್‌ರು ದ್ರಾವಿಡರು ಭಾರತದ ಮೇಲೆರಗಿ ಬಂದು ಮೂಲನಿವಾಸಿಗಳನ್ನು ಸೇರಿಸಿ ಅವರನ್ನು ಅಸ್ಪೃಶ್ಯರನ್ನಾಗಿ ಮಾಡಿದ್ದಾರೆ.
ಹಾಗಾದರೆ ಈ ಅಸ್ಪ್ರಶ್ಯರನ್ನು ಭಾರತೀಯ ಸಮಾಜದ ಮುಖ್ಯವಾಹಿನಿಗೆ ತರುವುದು ಹೇಗೆ ಎಂಬ ವಿಚಾರವನ್ನು ಅಂಬೇಡ್ಕರ್‌ರವರು ತಿಳಿಯಪಡಿಸುತ್ತಾರೆ. ಅದು ಹೇಗೆಂದರೆ ೧ ಅಸ್ಪೃಶ್ಯರ ಕುರಿತಾ ಕಾರ್ಯಕ್ರಮಗಳನ್ನು ಭಾರತೀಯ ಸಮಾಜದ ಮುಖ್ಯವಾಹಿನಿಗೆ ತರುವುದರ ಮೇಲೆ ಕೇಂದ್ರಿಕರಿಸುವುದು. ೨ ಅವರು ವರ್ಣದ ಸಮಾನ ಸ್ಥಾನಮಾನಕ್ಕಾಗಿ ಮಾತ್ರವಲ್ಲದೆ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆ ಮತ್ತು ಎಲ್ಲರಿಗೂ ಸಮಾನ ಅವಕಾಶಕ್ಕಾಗಿ ಹೋರಾಡಬೇಕು. ೩. ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಮತ್ತು ದಿನದಲಿತರ ಸಬಲೀಕರಣಕ್ಕಾಗಿ ಕಾಂಕ್ರೀಟ್ ಪ್ರಸ್ತಾಪವನ್ನು ಮುಂದಿಡುತ್ತಾರೆ. ಡಾ. ಅಂಬೇಡ್ಕರ್‌ರವರು ಭಾರತೀಯ ಸಂವಿಧಾನದಲ್ಲಿ ನಿರ್ಬಂಧನೆಗಳನ್ನು ಮಾಡುವ ಮೂಲಕ ಅಸ್ಪೃಶ್ಯರು ಮತ್ತು ಸಮಾಜದ ಇತರ ದುರ್ಬಲ ವರ್ಗಗಳಿಗೆ ನ್ಯಾಯವನ್ನು ಕೋರಿದರು.
ದಲಿತ ಸಬಲೀಕರಣಕ್ಕೆ ಅವರ ಕೊಡುಗೆ
ದಲಿತ ಸಬಲೀಕರಣಕ್ಕೆ ಹಲವು ಸಂಘಟನೆಗಳನ್ನು ರಚಿಸುವುದರ ಮೂಲಕ ಜನಸಾಮಾನ್ಯರಿಗೆ ಒತ್ತು ನೀಡಿದರು. ಶಿಕ್ಷಣ- ಸಾಮಾಜಿಕ ಗುಲಾಮಗಿರಿಯನ್ನು ತೊಡೆದು ಹಾಕಲು ಶಿಕ್ಷಣವೇ ಸರಿಯಾದ ಅಸ್ತçವಾಗಿದೆ. ಶಿಕ್ಷಣವು ದಿನದಲಿತರ ಮೇಲೆ ಬರಲು ಮತ್ತು ಸಾಮಾಜಿಕ ಸ್ಥಾನಮಾನ ಆರ್ಥಿಕ ಸುಧಾರಣೆ ಮತ್ತು ರಾಜಕೀಯ ಸ್ವಾತಂತ್ರ್ಯ ಪಡೆದಿದೆ ಎಂದು ೧೯೨೩ರಲ್ಲಿ ಅಂಬೇಡ್ಕರ್ ‘ಬಹಿಷ್ಕೃತ ಹಿತಕರ್ಣಿ ಸಭಾ’ ಸ್ಥಾಪಿಸಿ ಅಂಚಿನಲ್ಲಿರುವವರಿಗೆ ಶಿಕ್ಷಣವನ್ನು ಹರಡಲು ಮತ್ತು ಅವರ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಅವರ ‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಘೋಷ ವಾಕ್ಯವನ್ನು ನೀಡಿದರು.
ಹಿಂದೂ ಕೋಡ್ ಬಿಲ್
ಹಿಂದೂ ಕೋಡ್ ಬಿಲ್‌ನ ಅವಶ್ಯಕತೆ ಹಿಂದಿನ ಮರ್ಮದ ಕುರಿತು ಡಾ. ಅಂಬೇಡ್ಕರ ಅವರು ಹಿಂದೂ ನಿಯಮಾವಳಿಗಳು ಉಚ್ಚನ್ಯಾಯಾಲಯಗಳು ಮತ್ತು ಫ್ರೆöÊವಿ ಕೌನ್ಸಿಲ್ ನೀಡಿರುವ ತೀರ್ಪುಗಳು ಬೇರೆ ಬೇರೆಯಾಗಿ ಚೆದುರಿ ಹೋಗಿದ್ದು ಅವು ಜನಸಾಮಾನ್ಯರಿಗೆ ನ್ಯಾಯ ಸಿಗದೇ ವಾಜ್ಯಗಳು ಹೆಚ್ಚಾಗಿ ಕಗ್ಗಂಟುಗಳಿಂದ ತುಂಬಿ ಹೋಗಿತ್ತು. ಹೀಗಾಗಿ ಇವುಗಳನ್ನು ಕಾನೂನು ಬದ್ದವಾಗಿ ರೂಪಿಸಿ ನಿಯಮಗಳನ್ನು ರಚಿಸಲು ಈ ಕಾಯ್ದೆ ಜಾರಿಗೆ ತರಲೇಬೇಕು ಎಂದು ಪಣ ತೊಟ್ಟರು.
ಡಾ. ಅಂಬೇಡ್ಕರವರು ರೂಪಿಸಿದ್ದ ಕಾನೂನುಬದ್ದ ನಿಯಮಾವಳಿಯನ್ನು ಏಳು ವಿಭಿನ್ನ ಅಂಶಗಳ ಆಧಾರದ ಮೇಲೆ ದೇಶದ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ತರುವುದು ಮಹತ್ವಾಕಾಂಕ್ಷೆಯಾಗಿತ್ತು.
ಹೆಣ್ಣು ಧನಲಕ್ಷ್ಮೀ, ಮಹಾಲಕ್ಷ್ಮೀ ಸಂಪತ್ತೆಂದು ಪೂಜಿಸುತ್ತಾ ಅವಳಿಗೆ ಆಸ್ತಿಯ ಹಕ್ಕು ನಿರಾಕರಿಸಲಾಗಿತ್ತು. ಹೆಣ್ಣು ವಿದ್ಯಾದೇವತೆ, ಸರಸ್ವತಿ ಎಂದು ಪೂಜಿಸುತ್ತಾ ವಿದ್ಯೆಯನ್ನು ನಿರಾಕರಿಸಲಾಗಿತ್ತು. ಹೆಣ್ಣು ಶಕ್ತಿದೇವತೆ, ದುರ್ಗಾದೇವತೆ ಪಾರ್ವತಿ ಎಂದು ಪೂಜಿಸುತ್ತಾ ಅಬಲೆಯನ್ನಾಗಿ ಮಾಡಲಾಗಿತ್ತು. ಎಲ್ಲಿ ಹೆಣ್ಣು ಮಕ್ಕಳನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳುತ್ತಾ ಹೆಣ್ಣು ಸ್ವತಂತ್ರ್ಯಕ್ಕೆ ಅನರ್ಹಳು ಎಂಬ ಹಣೆಪಟ್ಟಿ ಕಟ್ಟಲಾಗಿದೆ.
ರಾಜಕೀಯವಾಗಿ ಮತದಾನ ನೀಡುವ ಅಧಿಕಾರವನ್ನು ಮತ್ತು ಉದ್ಯೋಗಸ್ಥ ಮಹಿಳೆಗೆ ಹೆರಿಗೆ ಸಂದರ್ಭದಲ್ಲಿ(ಅವಧಿ)ವೇತನ ಸಹಿತ ರಜೆಯನ್ನು ವಿಶ್ರಾಂತಿ ಸಹಿತ ಎಂಟು ತಾಸು ಕೆಲಸದ ಅವಧಿ ಮತ್ತು ಸಮಾನ ವೇತನವನ್ನು ಕಾನೂನುಗಳ ಮೂಲಕ ಯಾವ ದೇವಾನುದೇವತೆಗಳು ಮಾಡಲಾಗದ್ದನ್ನು ಬಾಬಾಸಾಹೇಬ ಅಂಬೇಡ್ಕರ್ ಅವರು ಮಾಡಿದ್ದಾರೆ. ಅದೇ ರೀತಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಭಾರತದ ಸಮಸ್ತ ಹೆಣ್ಣು ಮಕ್ಕಳಿಗಾಗಿಯೇ ‘ಹಿಂದೂ ಕೋಡ್ ಬಿಲ್’ ತರಲು ಪಣತೊಟ್ಟು ಫೆಬ್ರುವರಿ ೬-೧೯೫೧ರಲ್ಲಿ ಸಂಸತ್ತಿನಲ್ಲಿ ಮಂಡನೆ ಮಾಡುತ್ತಾರೆ.
ಹಿಂದೂ ಕೋಡ್ ಬಿಲ್‌ನಲ್ಲಿ ಮಂಡಿಸಿದ ಏಳು ಮಸೂದೆಗಳನ್ನು ಈ ಮುಂದಿನಂತಿವೆ.
೧. ಆಸ್ತಿ ಮೇಲಿನ ಜನ್ಮಸಿದ್ದ ಹಕ್ಕನ್ನು ರದ್ದುಪಡಿಸಿ ಉತ್ತರ ಜೀವಿತಾವಧಿಕಾರ ಆಧಾರದಿಂದ ಆಸ್ತಿಯನ್ನು ಪಡೆಯುವುದು.
೨. ಮೃತ ತಂದೆಯ ಆಸ್ತಿಯಲ್ಲಿ ಮಗಳಿಗೆ ಅರ್ಧಪಾಲನ್ನು ಪಡೆಯಲು ಕಾನೂನುಗೊಳಿಸುವುದು.
೩. ಮೃತ ಪತಿಯ ಆಸ್ತಿಯಲ್ಲಿ ಮಹಿಳೆಯ ಸೀಮಿತ ಸಂಪದಾಸ್ತಿಯಲ್ಲಿ ಪೂರ್ಣ ಹಕ್ಕನ್ನಾಗಿ ಪರಿವರ್ತಿಸುವುದು.
೪. ವಿವಾಹ ಮತ್ತು ದತ್ತು ಸ್ವೀಕಾರದಲ್ಲಿ ಜಾತಿಪದ್ದತಿಯನ್ನು ಹೋಗಲಾಡಿಸಲು ಸ್ವಜಾತಿ ನಿರ್ಭಂದವನ್ನು ತಗೆದು ಹಾಕುವುದು.
೫. ಬಹುಪತ್ನಿತ್ವವನ್ನು ರದ್ದುಪಡಿಸಿ ಏಕಪತ್ನಿತ್ವವನ್ನು ಕಾನೂನುಗೊಳಿಸುವುದು.
೬. ವಿವಾಹ ವಿಚ್ಛೇದನೆಗೆ ನಿಯಮಗಳನ್ನು ರೂಪಿಸುವುದು.
೭. ಅವಿಭಜಿತ ಆಸ್ತಿ ಪದ್ದತಿಯನ್ನು ತೆಗೆದು ಹಾಕಿ ವೈಯಕ್ತಿಕ ಆಸ್ತಿ ಪದ್ದತಿಗೆ ಹಕ್ಕನ್ನು ರೂಪಿಸುವುದು.
ಸಾಮಾಜಿಕ ಶ್ರೇಣಿಕೃತ ರಚನೆ
ಜಾತಿ ಅನಿಷ್ಠಗಳ ವಿರುದ್ಧ ಆಂದೋಲನವನ್ನು ಹೆಚ್ಚಿಸುವ ಮೂಲಕ ಜಾತಿ ವಿನಾಶಕ್ಕಾಗಿ ಹೋರಾಡಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು. ಸ್ವಂತಃ ದಲಿತರಾಗಿದ್ದ ಅವರು ಭಾರತೀಯ ಸಮಾಜದ ಶ್ರೇಣಿಕೃತ ರಚನೆಗಳನ್ನು ಬದಲಾಯಿಸಲು ಮತ್ತು ಅಂಚಿನಲ್ಲಿರುವವರಿಗೆ ಸಮಾನ ಹಕ್ಕುಗಳು, ನ್ಯಾಯವನ್ನು ಮರು ಸ್ಥಾಪಿಸಲು ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ತಮ್ಮ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ.
ಜಾತಿಬೇಧದಿಂದ ಮುಕ್ತವಾದ ಸಮಾನತೆಯ ತತ್ವದ ಮೇಲೆ ಹಿಂದೂ ಸಮಜದ ಸಂಪೂರ್ಣ ಮರು ಸಂಘಟನೆ ಮತ್ತು ಪುನಃ ನಿರ್ಮಾಣಕ್ಕೆ ಅವರು ನಿಂತರು. ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ಅವರು ಶಾಂತಿಯುತ ಮತ್ತು ಸಂವಿಧಾನಿಕ ವಿಧಾನಗಳನ್ನು ಆರಿಸಿಕೊಂಡರು. ಅಂಬೇಡ್ಕರ್‌ರವರು ಸ್ವಾತಂತ್ರ, ಸಮಾನತೆ ಮತ್ತು ಭಾತೃತ್ವದ ೩ ಮೂಲಭೂತ ತತ್ವಗಳ ಆಧಾರದ ಮೇಲೆ ಸಮಾಜವನ್ನು ಪ್ರತಿಪಾಧಿಸಿದ್ದಾರೆ. ಚುನಾವಣೆಯಲ್ಲಿ ಮೀಸಲತಿ ೧೯೩೦ರಲ್ಲಿ ದುಂಡುಮೇಜಿನ ಸಮ್ಮೇಳನದಲ್ಲಿ ಅಸ್ಪೃಶ್ಯವನ್ನು ಪ್ರತಿನಿಧಿಸಿದರು. ಅವರ ನಿರಂತರ ಪ್ರಯತ್ನದಿಂದ ಹರಿಜನರಿಗೆ ಚುನಾವಣೆಯಲ್ಲಿ ಸ್ಥಾನ ಮೀಸಲತಿ ನೀಡಲಾಯಿತು.
ಸಂವಿಧಾನ ರಚನೆಯಲ್ಲಿ ಡಾ. ಅಂಬೇಡ್ಕರ್
ಸ್ವತಂತ್ರ ಭಾರತದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅವರು ೧೯೪೭- ಸಂವಿಧಾನ ರಚನಾ ಸಮಿತಿಯು ಕರುಡು ಸಮಿತಿಯ ಅಧ್ಯಕ್ಷರಾಗಿ ನೇಮಕರಾಗುತ್ತಾರೆ. ಸಂವಿಧಾನ ತಜ್ಞರಾಗಿದ್ದರು, ಸುಮಾರು ೬೦ಕ್ಕಿಂತ ಹೆಚ್ಚು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತದ ಸಂವಿಧಾನವನ್ನು ರಚನೆ ಮಡಿ ‘ಭಾರತದ ಸಂವಿಧಾನದ ಪಿತಾಮಹ’ ಎಂದು ಗುರುತಿಸಿಕೊಂಡರು. ಡ. ಅಂಬೇಡ್ಕರ್‌ರವರು ಸಿದ್ಧಪಡಿಸಿದ ಪಠ್ಯವು ಧಾರ್ಮಿಕ, ಸ್ವಾತಂತ್ರ್ಯ, ಅಸ್ಪೃಶ್ಯತೆ ನಿರ್ಮೂಲನೆ ಮತ್ತು ಎಲ್ಲಾ ರೀತಿಯ ತಾರತಮ್ಯವನ್ನು ಕಾನೂನುಬಾಹಿರ ಸೇರಿದಂತೆ ವ್ಯಾಪಕ ಶ್ರೇಣಿಯ ನಾಗರಿಕ ಸ್ವಾತಂತ್ರöಗಳಿಗೆ ವೈಯಕ್ತಿಕ ನಾಗರಿಕರಿಗೆ ಸಾಂವಿಧಾನಿಕ ಖಾತರಿಗಳು ಮತ್ತು ರಕ್ಷಣೆಗಳು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ಡಾ. ಅಂಬೇಡ್ಕರ್‌ರವರು ಮಹಿಳೆಯರಿಗೆ ವ್ಯಾಪಕವಾದ ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ಪ್ರತಿಪಾಧಿಸಿದ್ದಾರೆ. ನಾಗರಿಕ ಸೇವೆಗಳು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿ ಇತರ ಹಿಂದೂಳಿದ ವರ್ಗದ ಸದಸ್ಯರಿಗೆ ಮೀಸಲಾತಿ ವ್ಯವಸ್ಥೆಯನ್ನು ಪರಿಚಯಿಸಲು ವಿಧಾನ ಸಭೆಯ ಬೆಂಬಲವನ್ನು ಗೆದ್ದರು. ಧಾರ್ಮಿಕ, ಲಿಂಗ ಮತ್ತು ಜಾತಿ ಸಮಾನತೆಗೆ ಒತ್ತು ನೀಡಿದರು. ಅಂಬೇಡ್ಕರ್‌ರವರು ಕೂಡ ಸಾಮಾಜಿಕ ಸುಧಾರಣೆ ತರಲು ಏಕರೂಪ ನಾಗರಿಕ ಸಂಹಿತೆಯನ್ನು ಅಳವಡಿಸಿಕೊಳ್ಳಲು ಶಿಪಾರಸ್ಸು ಮಾಡಿದರು. ಈ ಆನೆಗಾತ್ರದ ಸಂವಿಧಾನವನ್ನು ೨ವರ್ಷ ೧೧ ತಿಂಗಳು ೧೮ ದಿನಗಳ ಕಾಲ ಬರೆದು ಇಡೀ ವಿಶ್ವವೇ ಮೆಚ್ಚುವಂತಹ ಪುಸ್ತಕವನ್ನು ನೀಡಿದರು.
ಬೌದ್ಧ ಧರ್ಮಕ್ಕೆ ಸೇರುವಾಗ ಮಾಡಿದ ಪ್ರತಿಜ್ಞೆ
‘ಹಿಂದೂ ಆಗಿ ಹುಟ್ಟಿದ್ದೇನೆ ಆದರೆ ಹಿಂದೂ ಆಗಿ ಸಾಯಲಾರೆ’ ಎಂದು ಹೇಳುತ್ತಾರೆ ಬಾಬಾರವರು. ಎಲ್ಲ ಧರ್ಮಕ್ಕಿಂತ ಬೌದ್ಧ ಧರ್ಮ ಪವಿತ್ರವಾದದ್ದು ಅಂತ ಅರಿತು ಮತಾಂತರ ಆಗುತ್ತಾರೆ. ಆ ಸಂದರ್ಭದಲ್ಲಿ ಮಾಡಿದ ಪ್ರತಿಜ್ಞೆ – ನಾನು ಅಸ್ಪೃಶ್ಯತೆ ಆಚರಿಸುವುದಿಲ್ಲ ಮತ್ತು ಎಲ್ಲ ಮನುಷ್ಯರನ್ನು ಸಮಾನಾಗಿ ಕಾಣುತ್ತೇನೆ. ೨. ಕೊಲ್ಲುವುದಿಲ್ಲ, ಕದಿಯುವುದಿಲ್ಲ, ಮಧ್ಯ ಕುಡಿಯುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ. ತಪ್ಪಾದ ಲೈಂಗಿಕ ವರ್ತನೆ ತೋರುವುದಿಲ್ಲ ಎಂಬ ಪಂಚಶೀಲ ತತ್ವಗಳನ್ನು ಅನುಸರಿಸುತ್ತೇನೆ. ೩. ಜ್ಞಾನ ಸಹಾನುಭೂತಿ ಮತ್ತು ಕರ್ತವ್ಯದ ಮೂರು ಪ್ರಮುಖ ತತ್ವಗಳ ಆಧಾರದ ನೆಲೆಯಾಗಿರುವ ಬೌದ್ಧ ಧರ್ಮ ಮತ್ತು ನಿಜವಾದ ಧರ್ಮ ಎಂದು ನಾನು ನಂಬಿದ್ದೇನೆ. ಹಾಗಾಗಿಯೇ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವ ಹೊಸ ಹುಟ್ಟು ಪಡೆದುಕೊಂಡಿದ್ದೇನೆ.
ಅಂಬೇಡ್ಕರ್‌ರವರ ಕೊನೆ ಸಂದೇಶ
ಅಂಬೇಡ್ಕರ್‌ರವರ ಅಪ್ತ ಕಾರ್ಯದರ್ಶಿ ಸರ್ ನಾನಕ್ ಚಂದ್ ರತ್ತು ತಮ್ಮ ಗ್ರಂಥದಲ್ಲಿ ದಾಖಲಿಸಿದ್ದಾರೆ. ಈ ಪ್ರಪಂಚದ ಪ್ರತಿಯೊಂದು ವರ್ಗಕ್ಕೆ ವಿಮೋಚಕನೊಬ್ಬನು ತೋರುವ ದಿವ್ಯ ಮಾರ್ಗದಂತೆ ಕಾಣುತ್ತದೆ. ನಾನಕ್ ಚಂದ್ ನನ್ನ ಜನರಿಗೆ ಹೇಳು ‘ನಾನು ಇದುವರೆಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನ ಪರ್ಯಂತ ನನ್ನ ಶತ್ರುಗಳ ಜೊತೆ ಕದಾಡುತ್ತಾ ನಿರಂತರ ನೋವು ಅನುಭವಿಸುತ್ತಾ ಪಡೆದಿದ್ದೇನೆ. ತುಂಬಾ ಶ್ರಮವಹಿಸಿ ನನ್ನ ಹೋರಾಟದ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ ಅಡೆತಡೆ ಬರಲಿ ಅದರ ಮಾರ್ಗದಲ್ಲಿ ಎಂತಹದೇ ಏರುಪೇರುಗಳಾಗಲೀ ತೊಂದರೆಗಳಾಗಲೀ ಆ ಹೋರಾಟದ ರಥ ಮುನ್ನಡಿಯಲೇಬೇಕು. ಆಕಸ್ಮಾತ್ ಈ ರಥವನ್ನು ನನ್ನ ಜನ ಮತ್ತು ಸಹಪಾಠಿಗಳು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನ ಅಲ್ಲಿಯೇ ಬಿಡಿ, ಯಾವುದೇ ಕಾರಣಕ್ಕೂ ಹಿಂದೆ ಸರಿಯಲು ಬಿಡಬಾರದು. ನನ್ನ ಅನಾರೋಗ್ಯದ ಸಂದರ್ಭದಲ್ಲಿ ಇದು ನನ್ನ ಜನರಿಗೆ ನಾನು ನೀಡುತ್ತಿರುವ ಕೊನೆ ಸಂದೇಶ. ಇದನ್ನು ನೀನು ಅವರಿಗೆ ಹೇಳು, ಹೋಗಿ ಹೇಳು ಎನ್ನುತ್ತಾ ಚೀರ ನಿದ್ರೆಗೆ ಜಾರಿದರು.
ಡಾ. ಅಂಬೇಡ್ಕರ್ ಎಂದರೆ ದಿವ್ಯಜ್ಞಾನ, ಸಾಹಸ, ನಿತ್ಯ ಸತ್ಯ ಚೇತನ, ಪರಿಶ್ರಮ, ಛಲ, ಸ್ಪೂರ್ತಿ,ರಕ್ಷಾ ಕವಚ, ಜ್ಞಾನಸುಧೆ, ಆತ್ಮವಿಶ್ವಾಸ, ಶಿಸ್ತಿನ ಸಾಮ್ರಾಟ, ಮಹಾನಾಯಕನ ಜೀವನಗಾಥೆಯೇ ಒಂದು ಸಂದೇಶ, ಅವರ ಬದುಕೆ ಒಂದು ಆದರ್ಶ.

– ಡಾ.ಪೂರ್ಣಿಮಾ ಕೆ ಧಾಮಣ್ಣವರ
ಉಪನ್ಯಾಸಕರು, ಕನ್ನಡ ಅಧ್ಯಯನ ವಿಭಾಗ, ರಾಣಿ ಚನ್ನಮ್ಮ ವಿವಿ, ಡಾ ಫ.ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರ ವಿಜಯಪುರ

