ಬಸವನಬಾಗೇವಾಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ನಿಯುಕ್ತಿಗೊಂಡಿರುವ ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗೆ, ಮತಗಟ್ಟೆ ಅಧಿಕಾರಿಗಳಿಗೆ ಭಾನುವಾರ ಮೊದಲ ಹಂತದ ತರಬೇತಿ ಆಯೋಜಿಸಲಾಗಿತ್ತು.
ಬೆಳಗ್ಗೆ ನಿಯುಕ್ತಿಗೊಂಡ ಪಿಆರ್ಓ, ಎಆರ್ಓ ಸಿಬ್ಬಂದಿಗಳು ಆಗಮಿಸಿ ಹಾಜರಾತಿಗೆ ಸಹಿ ಮಾಡಿದ ನಂತರ ತಮಗೆ ನಿಗದಿ ಪಡಿಸಿದ ಕೋಣೆಗಳಿಗೆ ತೆರಳಿ ಮಾಸ್ಟರ್ ಟ್ರೇನರ್ಗಳಿಂದ ಮತಗಟ್ಟೆ ಅಧ್ಯಕ್ಷಾಧಿಕಾರಿಗಳ ಮತ್ತು ಮತಗಟ್ಟಿ ಅಧಿಕಾರಿಗಳ ಕರ್ತವ್ಯಗಳು, ಚುನಾವಣಾ ಆಯೋಗ ನೀಡಿದ ಮಾಹಿತಿಗಳ ಕುರಿತು ತರಬೇತಿಯಲ್ಲಿ ಭಾಗವಹಿಸಿದರು. ತರಬೇತಿಯು ೧೧ ಕೋಣೆಗಳಲ್ಲಿ ಆಯೋಜನೆ ಮಾಡಲಾಗಿತ್ತು. ತರಬೇತಿಯಲ್ಲಿ ಪಿಆರ್ಓ, ಎಪಿಆರ್ಓಗಳಿಗೆ ಬೆಳಗ್ಗೆ ಪ್ರೊಜೆಕ್ಟರ್ ಮೂಲಕ, ಮಧ್ಯಾನ್ಹ ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕತೆ ಮೂಲಕ ಮಾಸ್ಟರ್ ಟ್ರೇನರ್, ಸೆಕ್ಟರ್ ಅಧಿಕಾರಿಗಳು ತರಬೇತಿ ನೀಡಿದರು. ತರಬೇತಿ ಕೋಣೆಗಳಿಗೆ ಜಿಲ್ಲಾ ತರಬೇತಿ ನೋಡಲ್ ಅಧಿಕಾರಿ ಶಂಕರಗೌಡ ಸೋಮನಾಳ ಭೇಟಿ ನೀಡಿ ವೀಕ್ಷಿಸಿದರು.
ನ್ಯಾಯಸಮ್ಮತ, ಪಾರದರ್ಶಕ ಮತದಾನ ನಡೆಯುವಲ್ಲಿ ಚುನಾವಣೆಗೆ ನಿಯುಕ್ತಿಗೊಂಡ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು. ತರಬೇತಿಯಲ್ಲಿ ತಮಗೆ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಸಿಬ್ಬಂದಿಗಳು ಸೂಕ್ತವಾದ ತರಬೇತಿ ಪಡೆದುಕೊಂಡು ಈ ತಾಲೂಕಿನ ಹೆಸರನ್ನು ತರಬೇಕೆಂದು ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ. ಅವರು ಪ್ರತಿ ತರಬೇತಿ ಕೋಣೆಗೆ ಭೇಟಿ ನೀಡಿ ಸಿಬ್ಬಂದಿಗಳಿಗೆ ಹೇಳಿದರು.
ಪಿಆರ್ಓ, ಎಆರ್ಓ ಸೇರಿ ಒಟ್ಟು ೭೩೭ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಇದರಲ್ಲಿ ೧೬ ಸಿಬ್ಬಂದಿ ಗೈರು ಉಳಿದುಕೊಂಡಿದ್ದರು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ. ಅವರು ಮಾಹಿತಿ ನೀಡಿದರು.
ಬಸವನಬಾಗೇವಾಡಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ನಿಡಗುಂದಿ ತಹಸೀಲ್ದಾರ ನೀಲಪ್ರಭ, ಕೊಲ್ಹಾರ ತಹಸೀಲ್ದಾರ ಎಸ್.ಎಸ್. ನಾಯಕಲಮಠ, ಚುನಾವಣಾ ಶಿರಸ್ತೇದಾರ ಮಹೇಶ ಬಳಗಾನೂರ, ವಿಷಯ ನಿರ್ವಾಹಕ ಎಸ್.ಜಿ.ಇಂಗಳೆ, ಆಪರೇಟರ್ ಅನಿಲ ಅವಟಿ,ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರು, ಉಪತಹಸೀಲ್ದಾರರು, ಗ್ರಾಮಾಡಳಿತಾಧಿಕಾರಿಗಳು, ಗ್ರಾಮ ಸಹಾಯಕರು, ೨೧ ಸೆಕ್ಟರ್ ಅಧಿಕಾರಿಗಳು, ೧೩ ಜನ ಮಾಸ್ಟರ್ ಟ್ರೇನರ್ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

