‘ಉದಯರಶ್ಮಿ’ ದಿನಪತ್ರಿಕೆಯ ಸಂಪಾದಕರಾದ ಶ್ರೀ ಇಂದುಶೇಖರ ಮಣೂರ ಅವರಿಗೆ ವಿಜಯಪುರ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಗೌರವ! ಈ ಗೌರವಕ್ಕೆ ಸರ್ ಭಾಜನರಾಗಿರುವುದು ಅವರ ನಿರಂತರ ಪರಿಶ್ರಮ, ಸಾಮಾಜಿಕ ಕಳಕಳಿ ಹಾಗೂ ಪತ್ರಿಕೋದ್ಯಮದ ಬದ್ಧತೆಗೆ ಸಂದ ಮನ್ನಣೆಯಾಗಿದೆ.
– ಪ್ರಶಾಂತ ಕುಲಕರ್ಣಿ.
ಉಪನ್ಯಾಸಕರು
ಸಿಂದಗಿ – ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಕನ್ನಡ ನಾಡು, ನುಡಿ, ಸಾಹಿತ್ಯ ಹಾಗೂ ಪತ್ರಿಕೋದ್ಯಮದ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವಿಜಯಪುರ ಜಿಲ್ಲೆಯ ಹೆಸರಾಂತ ‘ಉದಯರಶ್ಮಿ’ ದಿನಪತ್ರಿಕೆಯ ಸಂಪಾದಕರಾದ ಶ್ರೀ ಇಂದುಶೇಖರ ಮಣೂರ ಅವರಿಗೆ ವಿಜಯಪುರ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ದೊರೆತಿರುವುದು ಅತ್ಯಂತ ಸಂತೋಷದ ಮತ್ತು ಹೆಮ್ಮೆಯ ಸಂಗತಿ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಸಾಧಕರಿಗೆ ನೀಡಲಾಗುವ ಈ ಗೌರವಕ್ಕೆ ಸರ್ ಭಾಜನರಾಗಿರುವುದು ಅವರ ನಿರಂತರ ಪರಿಶ್ರಮ, ಸಾಮಾಜಿಕ ಕಳಕಳಿ ಹಾಗೂ ಪತ್ರಿಕೋದ್ಯಮದ ಬದ್ಧತೆಗೆ ಸಂದ ಮನ್ನಣೆಯಾಗಿದೆ. ನವೆಂಬರ್ 1ರಂದು ವಿಜಯಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಎಂ.ಬಿ. ಪಾಟೀಲ ಅವರಿಂದ ಗೌರವ ಸನ್ಮಾನಗೊಳ್ಳುತ್ತಿರುವುದು ಮತ್ತಷ್ಟು ಸಂತಸದ ಸಂಗತಿ.
ನನಗೆ ಈ ಸಂತೋಷ ವೈಯಕ್ತಿಕವಾಗಿಯೂ ವಿಶೇಷವಾಗಿದೆ.
ಏಕೆಂದರೆ, ಒಬ್ಬ ಬರಹಗಾರನಾಗಿ ನನ್ನೊಳಗಿನ ಬರವಣಿಗೆಯ ಆಸಕ್ತಿಗೆ ಪ್ರೋತ್ಸಾಹ ನೀಡಿ, ತಮ್ಮ ಹೆಸರಾಂತ ಪತ್ರಿಕೆಯಲ್ಲಿ ‘ಪ್ರಶಾಂತ ಪಥ’ ಎಂಬ ಅಂಕಣದ ಮೂಲಕ ನನ್ನ ವಿಚಾರಗಳನ್ನು ಓದುಗರೊಂದಿಗೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟವರು ನಮ್ಮ ಆತ್ಮೀಯ ಸಂಪಾದಕರಾದ ಶ್ರೀ ಇಂದುಶೇಖರ ಮಣೂರ ಸರ್. ಒಬ್ಬ ಬರಹಗಾರನಿಗೆ ಬರೆಯುವ ಅವಕಾಶ ನೀಡುವುದು ಎಂದರೆ ಕೇವಲ ವೇದಿಕೆ ಒದಗಿಸುವುದಲ್ಲ; ಅವನ ಆಲೋಚನೆಗಳಿಗೆ ಅಕ್ಷರ ರೂಪ ನೀಡಿ, ಅವನ ಅಭಿವ್ಯಕ್ತಿಗೆ ಹೊಸ ದಾರಿಯನ್ನು ತೆರೆದಂತೆಯೇ ಸರಿ.

ನನ್ನಂತಹ ಬರಹಗಾರನಿಗೆ ಪ್ರೋತ್ಸಾಹದ ಬೆಳಕಾಗಿ ನಿಂತಿರುವ ಸರ್ ಅವರಿಗೆ ಸಂದಿರುವ ಈ ಗೌರವವನ್ನು ಕಂಡು ಒಬ್ಬ ಬರಹಗಾರನಾಗಿ, ‘ಉದಯರಶ್ಮಿ’ ಪತ್ರಿಕೆಯ ಓದುಗನಾಗಿ ಹಾಗೂ ಅವರ ಅಭಿಮಾನಿಯಾಗಿ ಹೃದಯ ತುಂಬಿ ಬಂದಿದೆ. ಸರ್ ಅವರ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಅವರ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಸಾಹಿತ್ಯದ ಮೇಲಿನ ಪ್ರೀತಿ ಇನ್ನಷ್ಟು ಬರಹಗಾರರಿಗೆ ಸ್ಫೂರ್ತಿಯಾಗಲಿ ಎಂಬುದು ನನ್ನ ಆಶಯ.
ಸರ್ ಅವರಿಗೆ ದೊರೆತಿರುವ ಈ ಪ್ರಶಸ್ತಿ ಕೇವಲ ವ್ಯಕ್ತಿಗತ ಗೌರವವಲ್ಲ; ಕನ್ನಡ ಪತ್ರಿಕೋದ್ಯಮದ ಬದ್ಧತೆಗೂ, ಸಾಹಿತ್ಯದ ಪ್ರೀತಿಗೂ ಹಾಗೂ ಸಮಾಜಮುಖಿ ಚಿಂತನೆಗೂ ಸಂದ ಗೌರವವಾಗಿದೆ.
ಮುಂದಿನ ದಿನಗಳಲ್ಲಿಯೂ ಸರ್ ಅವರಿಂದ ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಮಾಜಕ್ಕೆ ಇನ್ನಷ್ಟು ಅಮೂಲ್ಯ ಕೊಡುಗೆಗಳು ದೊರೆಯಲಿ. ಅವರ ಸಾಧನೆಯ ಪಯಣ ಹೀಗೆಯೇ ನಿರಂತರವಾಗಿ ಸಾಗಲಿ. ಇನ್ನೂ ಅನೇಕ ಗೌರವಗಳು ಅವರನ್ನು ಅರಸಿ ಬರಲಿ ಎಂದು ಹಾರೈಸುತ್ತೇನೆ.
ನಮ್ಮ ಆತ್ಮೀಯ ಸಂಪಾದಕರಾದ ಶ್ರೀ ಇಂದುಶೇಖರ ಮಣೂರ ಸರ್ ಅವರಿಗೆ ವಿಜಯಪುರ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ದೊರೆತಿರುವುದಕ್ಕೆ ಹೃದಯಪೂರ್ವಕ ಅಭಿನಂದನೆಗಳು ಹಾಗೂ ಅನಂತ ಶುಭಾಶಯಗಳು.


