ಬಬಲೇಶ್ವರ: ವಿಕಸಿತ ಭಾರತದ ಸಂಕಲ್ಪ ತೊಟ್ಟಿರುವ ಸಮರ್ಥ ನಾಯಕ ನರೇಂದ್ರ ಮೋದಿಯವರು ಮೂರನೇ ಬಾರಿ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಅವರು 3 ನೇ ಬಾರಿ ಪ್ರಧಾನಿಯಾಗಲು ಸಂಸತ್ ನಲ್ಲಿ ನಾನು ಅವರ ಪರವಾಗಿ ಮತ್ತೆ ಕೈ ಎತ್ತಬೇಕೆಂಬುದು ನನ್ನ ಕೊನೆಯ ಆಸೆಯಾಗಿದೆ ಎಂದು ಸಂಸದ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿ ರಮೇಶ ಜಿಗಜಿಣಗಿ ಅಭಿಲಾಷೆ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣಾ ಪ್ರಚಾರಾರ್ಥ ಬಬಲೇಶ್ವರ ಮತಕ್ಷೇತ್ರದ ಮಮದಾಪುರ ಬಿಜೆಪಿ ಮಹಾಶಕ್ತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ರಕ್ಷಣೆ ಮತ್ತು ಉಳಿವಿಗಾಗಿ ಈ ಹಿಂದೆ ಎರಡು ಬಾರಿ ಮೋದಿಯವರ ಪರವಾಗಿ ಕೈ ಎತ್ತಲು ವಿಜಯಪುರ ಜನ ನನಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಇನ್ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಮೋದಿಯವರನ್ನು ಮೂರನೇ ಸಲ ಪ್ರಧಾನಿ ಮಾಡಲು ನಾನು ಈ ಬಾರಿಯೂ ಕೈ ಎತ್ತಬೇಕು ಎಂಬುದು ನನ್ನ ಕೊನೆಯ ಆಸೆ. ಹಾಗಾಗಿ ಈ ಬಾರಿಯೂ ವಿಜಯಪುರ ಜನತೆ ನನಗೆ ಆಶಿರ್ವದಿಸಬೇಕೆಂಬುದು ನನ್ನ ಪ್ರಾರ್ಥನೆ. ಪ್ರಧಾನಿಯಾಗಲು ಉತ್ಕೃಷ್ಠ ವ್ಯಕ್ತಿತ್ವ ಹೊಂದಿರುವ ಸಮರ್ಥ ನಾಯಕನಾಗಿರಬೇಕು. ಕಾಂಗ್ರೆಸ್ ನವರು ಪಪ್ಪು ಎಂದು ಕರೆಯುವ ಹುಡುಗನನ್ನು ದೇಶದ ಪ್ರಧಾನಿ ಮಾಡಲು ಹೊರಟ್ಟಿದ್ದಾರೆ. ಇಂತಹ ವ್ಯಕ್ತಿಯನ್ನು ಜನ ಒಪ್ಪಲು ಸಾಧ್ಯವೇ ಎಂದು ಜಿಗಜಿಣಗಿ ಪ್ರಶ್ನಿಸಿದರು.
ಈ ಹಿಂದೆ ನಾನು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಜನ ನನ್ನನ್ನು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲಿಸಿದರು. ರಾಮಕೃಷ್ಣ ಹೆಗಡೆ ಅವರ ನಿಧನ ನಂತರ ಬಹಳಷ್ಟು ಜನ ನನಗೆ ಕಾಂಗ್ರೆಸ್ ಪಕ್ಷ ಸೇರಿಕೊಳ್ಳುವಂತೆ ಒತ್ತಡ ಹಾಕಿದರು. ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಂತ್ಯ ಸಂಸ್ಕಾರಕ್ಕೆ ಕೇವಲ 6 ಅಡಿ ಜಾಗ ನೀಡಲಿಲ್ಲ. ಅಂತಹ ಕಾಂಗ್ರೆಸ್ ಪಕ್ಷ ನಾನು ಸೇರುವುದಿಲ್ಲ ಎಂದು ತಿರಸ್ಕರಿಸಿದೆ. ಆಗಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪ ಅವರಿಗೆ ಒತ್ತಡ ಹೇರಿ ನಾನು ಬಿಜೆಪಿ ಸೇರಿಕೊಂಡೆ. ಅಂದಿನಿಂದ ಇಂದಿನವರೆಗೂ ಬಿಜೆಪಿಯಲ್ಲಿ ನಿಷ್ಠನಾಗಿದ್ದೇನೆ ಎಂದರು.
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ 2004 ರಿಂದ ವಿಜಯಪುರ ಜನ ಸತತ ಮೂರು ಬಾರಿ ನನ್ನನ್ನು ಆರಿಸಿ ತಂದಿದ್ದೀರಿ. ಹಾಗೆಂದು ನಾನು ಸುಮ್ಮನೇ ಕೂಡದೇ ವಿಜಯಪುರ ಮತಕ್ಷೇತ್ರದ ಅಭಿವೃದ್ಧಿಗೆ ಜಿಲ್ಲೆಯಲ್ಲಿ ಈ ಹಿಂದಿನ ಕಾಂಗ್ರೆಸ್ ಸಂಸದರಾರೂ ತರಲಾರದಷ್ಟು ಹೆಚ್ಚು ಅನುದಾನ ಕೇಂದ್ರದಿಂದ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನಮ್ಮ ಹಾಗೂ ದೇಶದ ರಕ್ಷಣೆಗಾಗಿ ಮೋದಿ ಮತ್ತೊಮ್ಮೆ ಬರಲೇಬೇಕು ಎಂದು ಇಡಿ ದೇಶವೇ ಕೂಗಿ ಹೇಳುತ್ತಿದೆ ಎಂದರು.
ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಮಾತನಾಡಿ, ಅಭಿವೃದ್ಧಿಗೆ ಮತ್ತೊಂದು ಹೆಸರು ಬಿಜೆಪಿ. ಅಧಿಕಾರವಿರಲಿ, ಬಿಡಲಿ ಪಕ್ಷದ ಸಾಮಾನ್ಯ ಕಾರ್ಯರ್ತನಾಗಿ, ಬಬಲೇಶ್ವರ ಮತಕ್ಷೇತ್ರದ ಮನೆಯ ಮಗನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಮೋದಿಯವರ ಕೈ ಬಲಪಡಿಸಲು ಬಬಲೇಶ್ವರ ಮತಕ್ಷೇತ್ರ ಹಾಗೂ ಜಿಲ್ಲೆಯ ಜನತೆ ಈ ಬಾರಿಯೂ ರಮೇಶ ಜಿಗಜಿಣಗಿ ಅವರಿಗೆ ಮತ್ತೊಮ್ಮೆ ಆಶಿರ್ವದಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿದರು.
ಈ ವೇಳೆ ಜಿಲ್ಲಾ ಚುನಾವಣಾ ಸಂಚಾಲಕ ಅರುಣ ಶಹಾಪುರ, ಮಂಡಲ ಅಧ್ಯಕ್ಷ ಸಂತೋಷ ಕುರದಡ್ಡಿ, ಕ್ಷೇತ್ರ ಸಂಚಾಲಕ ಸಂಜಯ ಬಿ. ಪಾಟೀಲ ಕನಮಡಿ, ಕ್ಷೇತ್ರ ಪ್ರಭಾರಿ ಕೃಷ್ಣಾ ಗುನ್ನಾಳಕರ, ಜಿಲ್ಲಾ ಉಪಾಧ್ಯಕ್ಷ ಉಮೇಶ ಕೊಳಕುರ, ವಿವೇಕ ಡಬ್ಬಿ, ಮಂಡಲ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಸಾಬು ಮಾಶ್ಯಾಳ ಮಂಡಲ ಕಾರ್ಯಕಾರಿಣಿ ಸದಸ್ಯರು, ಮೋರ್ಚಾ ಕಾರ್ಯಕಾರಿಣಿ ಸದಸ್ಯರು, ಮಮದಾಪುರ ಮಹಾಶಕ್ತಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ನನ್ನ ಗೆಲ್ಲಿಸಿ :ಜಿಗಜಿಣಗಿ
Related Posts
Add A Comment

