‘ಪರಿವಾರವಾದಿಗಳು’ & ‘ಭ್ರಷ್ಟಾಚಾರಿಗಳ’ ಮೈತ್ರಿ l.N.D.I.A | 12 ಲಕ್ಷ ಕೋಟಿ ರೂ. ಹಗರಣದ ಕಾಂಗ್ರೆಸ್ | ಅಮಿತ್ ಶಾ ಟೀಕೆ
ಬೆಂಗಳೂರು: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ‘400 ಪಾರ್’ (400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ) ಗುರಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಪಕ್ಷದ ಹಿರಿಯ ನಾಯಕ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಜೊತೆ ಇಂಡಿಯಾ ಬ್ಲಾಕ್ ನ್ನು ಹೋಲಿಸಲು ಸಾಧ್ಯವೇ ಇಲ್ಲ. ಇಂಡಿಯಾ ಬ್ಲಾಕ್ ‘ಪರಿವಾರವಾದಿಗಳು’ (ವಂಶ ರಾಜಕೀಯ ಕುಟುಂಬಗಳು) ಮತ್ತು ‘ಭ್ರಷ್ಟಾಚಾರಿಗಳ’ (ಭ್ರಷ್ಟರು) ಮೈತ್ರಿ ಎಂದು ಬಣ್ಣಿಸಿದ್ದಾರೆ.
ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಭಾಗಗಳ ‘ಶಕ್ತಿ ಕೇಂದ್ರ’ (3-5 ಬೂತ್‌ಗಳ ಸಾಮೂಹಿಕ) ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದರು.
ಕರ್ನಾಟಕದಲ್ಲಿ ಬಿಜೆಪಿ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅಮಿತ್ ಶಾ, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ನಡುವೆ ಯಾವುದೇ ಹೋಲಿಕೆಯಿಲ್ಲ ಎಂದರು.
ಎಂದಿಗೂ ರಜೆ ತೆಗೆದುಕೊಳ್ಳದ ಪ್ರಧಾನಿ ನರೇಂದ್ರ ಮೋದಿ ಮತ್ತು ಬೇಸಿಗೆ ಆರಂಭವಾದಂತೆ ವಿದೇಶ ಪ್ರವಾಸ ಮಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಲ್ಲಿಯ ಹೋಲಿಕೆ ಎಂದು ಟೀಕಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತು ಎನ್‌ಡಿಎ ಒಂದು ಕಡೆ- ನಾವು ಮೋದಿ ನಾಯಕತ್ವದಲ್ಲಿ ಚುನಾವಣಾ ಕಣದಲ್ಲಿದ್ದೇವೆ. ಇನ್ನೊಂದು ಕಡೆ ಕುಟುಂಬ ರಾಜಕೀಯವನ್ನು ನಡೆಸುವ ಭ್ರಷ್ಟಾಚಾರಿಗಳನ್ನು ಒಳಗೊಂಡ ಇಂಡಿಯಾ ಮೈತ್ರಿಕೂಟ ಮತ್ತೊಂದು ಕಡೆಯಾಗಿದೆ ಎಂದರು.
ಕರ್ನಾಟಕದಲ್ಲಿ ಬಿಜೆಪಿ-ಜೆಡಿ(ಎಸ್) ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಖಾತೆ ತೆರೆಯಲು ಬಿಡುವುದಿಲ್ಲ ಎಂದು ಹೇಳಿದರು.
ಯುಪಿಎ ಆಡಳಿತದಲ್ಲಿ ಮಾಧ್ಯಮಗಳು ವರದಿ ಮಾಡಿದ ವಿವಿಧ ಹಗರಣಗಳಾದ ಕಲ್ಲಿದ್ದಲು ಬ್ಲಾಕ್, ಕಾಮನ್‌ವೆಲ್ತ್, 2ಜಿ, ಐಎನ್‌ಎಕ್ಸ್ ಮೀಡಿಯಾ, ಏರ್‌ಸೆಲ್, ಲ್ಯಾಂಡ್ ಫಾರ್ ಜಾಬ್, ಜಮ್ಮು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್, ಇತ್ಯಾದಿಗಳನ್ನು ಪಟ್ಟಿ ಮಾಡಿದ ಶಾ, ಇದರಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಸುಮಾರು 12 ಲಕ್ಷ ಕೋಟಿ ಹಗರಣಗಳನ್ನು ನಡೆಸಿ ಇಂದು ಮೋದಿಯವರ ಜೊತೆ ಪೈಪೋಟಿಗಿಳಿದಿದೆ ಎಂದು ವ್ಯಂಗ್ಯವಾಡಿದರು.
ದೇಶದ ಜನರ ಮುಂದೆ ಸ್ಪಷ್ಟ ಆಯ್ಕೆ ಇದೆ: ಒಂದು ಕಡೆ 23 ವರ್ಷಗಳ ಕಾಲ ಒಂದು ಪೈಸೆಯೂ ಭ್ರಷ್ಟಾಚಾರವಿಲ್ಲದೆ ಆಡಳಿತ ನಡೆಸಿದ ನರೇಂದ್ರ ಮೋದಿಯಿದ್ದರೆ, ಇನ್ನೊಂದು ಕಡೆ 12 ಲಕ್ಷ ಕೋಟಿ ರೂಪಾಯಿ ಹಗರಣದಲ್ಲಿ ಭಾಗಿಯಾಗಿರುವ ಕಾಂಗ್ರೆಸ್. ಈ ಜನರು ಅಧಿಕಾರ ಸಿಕ್ಕಾಗಲೆಲ್ಲಾ ಭ್ರಷ್ಟಾಚಾರದಲ್ಲಿ ತೊಡಗುವುದು ಮಾತ್ರವಲ್ಲ, ಜನರ ಸೇವೆಯತ್ತ ಮನಸ್ಸು ಕೇಂದ್ರೀಕರಿಸುವುದಿಲ್ಲ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಕರ್ನಾಟಕ ಚುನಾವಣಾ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.

