“ವಿದ್ಯಾರ್ಥಿ ನಿಧಿ” ಮಕ್ಕಳ ಕಥೆ- ಮಂಡ್ಯ ಮ.ನಾ.ಉಡುಪ
ಅದೊಂದು ದೊಡ್ಡ ಕಾಡು. ನವಿಲು, ಕೋಗಿಲೆ, ಹಂದಿ, ಕುರಿ, ಕಾಗೆ, ಗೂಬೆ, ಕೋತಿ, ನರಿ ಹೀಗೆ ಹತ್ತು-ಹಲವು ಪ್ರಾಣಿಗಳು ವಾಸವಾಗಿದ್ದವು.
ಆ ಕಾಡಿನ ರಾಜನಾಗಿದ್ದ ಸಿಂಹ ಅಕಾಲಿಕ ಮರಣಕ್ಕೆ ತುತ್ತಾಗಿ ಇಡೀ ಅರಣ್ಯವೇ ರಾಜನಿಲ್ಲದೆ ಅನಾಥವಾಗಿತ್ತು.
ರಾಜನಿಲ್ಲದೇ ಕಾಡುಪ್ರಾಣಿಗಳು ಬೇಸರಗೊಂಡಿದ್ದವು. ಅವುಗಳು ಸಭೆ ಸೇರಿ ಹೊಸರಾಜನ ಆಯ್ಕೆಗೆ ಚರ್ಚೆನಡೆಸಿದ್ದವು. ಯಾರು ತಮ್ಮನೆಲ್ಲ ರಂಜಿಸ್ತಾರೋ ಅವರನ್ನೇ ಹೊಸ ರಾಜನ ಮಾಡುವ ನಿರ್ಧಾರ ಮಾಡಿ ಅದಕ್ಕೊಂದು ದಿನ ಗೊತ್ತು ಮಾಡಿದವು. ಆ ದಿನ ಬಂದೇ ಬಿಟ್ಟಿತು.
ರಾಜನ ಆಯ್ಕೆಗೆ ದೊಡ್ಡದಾದ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಮೊದಲಿಗೆ ಕೋಗಿಲೆ ಬಂದು ಸುಸ್ವರದಿಂದ ಹಾಡಿತು. ನವಿಲೊಂದು ಬಂದು ನೃತ್ಯ ಮಾಡಿತು. ಹೀಗೆ ವಿವಿಧ ಪ್ರಾಣಿಗಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಿದವು. ಕೋತಿಯೊಂದು ತನ್ನ ಆಂಗಿಕ ಚೇಷ್ಟೆಗಳಿಂದ ಪ್ರಾಣಿಗಳ ಮನಸೂರೆಗೊಂಡಿತ್ತು.
ಹೆಚ್ಚಿನ ಪ್ರಾಣಿಗಳು ಮಂಗನನ್ನೇ ಆರಿಸಿದ್ದರಿಂದ ಮಂಗವೇ ವನರಾಜನಾಗಿ ಸರ್ವಾನುಮತದ ಆಯ್ಕೆಯಾಯಿತು. ಮಂಗ ಸಂತೋಷದಿಂದ ಉಬ್ಬಿಹೋಯಿತು.
ಆದರೆ ಮಂಗನ ಆಯ್ಕೆ ಠಕ್ಕ ನರಿಗೆ ಖುಷಿ ತರಲಿಲ್ಲ. ಆದರೂ ರಾಜನನ್ನು ಎದರು ಹಾಕಿಕೊಳ್ಳುವಂತಿಲ್ಲದ ಪರಿಸ್ಥಿತಿಗೆ ನಿರ್ಮಾಣವಾಗಿತ್ತು. ನರಿ ಮಂಗಣ್ಣನ ಬಳಿಬಂದು
” ನೂತನ ರಾಜರೇ ನಿಮಗೊಂದು ಔತಣಕೂಟ ಏರ್ಪಡಿಸಿದ್ದೇನೆ ಬನ್ನಿ ” ಎಂದು ಆಹ್ವಾನ ನೀಡಿತು. ಮಂಗಣ್ಣ ಖುಷಿಯಿಂದ ನರಿಯ ಜೊತೆಗೆ ಹೊರಟಿತು. ನರಿಯು ಪೊದೆಯೊಂದರ ಬಳಿ ಬಂದು
” ರಾಜರೇ ಈ ಪೊದೆಯೊಳಗೆ ನಿಮಗೆ ಬೇಕಾದ ಎಲ್ಲಾ ಆಹಾರಗಳಿದೆ.. “
ಒಳ ಹೊಕ್ಕು ನೋಡಿದರೆ ನಾನಾ ವಿಧವಾದ ಹಣ್ಣುಗಳಿದ್ದವು. ನರಿ ಹೇಳಿತು
” ಮಹಾರಾಜ ಇನ್ನೂ ಮುಂದೆ ಹೋಗಿ ನೋಡಿ. “
ನರಿಯ ಮಾತು ಕೇಳಿ ಮುಂದೆ ಮುಂದೆ ಹೋದ ಮಂಗವು ಬಲೆಯಲ್ಲಿ ಬಂಧಿಯಾಯಿತು. ಮಂಗ ಕೋಪದಿಂದ ಕೇಳಿತು
” ಎಲೈ ರಾಜದ್ರೋಹಿ ಹೀಗೇಕೆ ಮಾಡಿದೆ …. ?”
ಅದಕ್ಕೆ ನರಿಯೂ ಹೇಳಿತು
” ಎಲ್ಲೈ ಕೋತಿಯೇ ನಿನ್ನ ನೀನು ರಕ್ಷಿಸಿಕೊಳ್ಳಲಾಗದವ ವನವನ್ನು ಹೇಗೆ ಕಾಪಾಡಬಲ್ಲೆ… “
ಎಂದು ಹೇಳಿ ಹೊರಟುಹೋಯಿತು.
ನಾಯಕನಾದವನಿಗೆ ಸಮಾಜವನ್ನು ಕಾಯುವ ಜಾಣ್ಮೆಯಿರಬೇಕು