ಸಿಂದಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಜಿ ಶಾಸಕ ರಮೇಶ ಭೂಸನೂರ ಆರೋಪ
ಸಿಂದಗಿ: ಭಾರತದ ನೆಲದಲ್ಲಿ ಜನಿಸಿ ಇಲ್ಲಿ ಅನ್ನವನ್ನುಂಡು ಪಾಕಿಸ್ತಾನಕ್ಕೆ ಜೈ ಎನ್ನುವ ಹೇಡಿ ಸಂಸ್ಕೃತಿ ಮತ್ತು ಕಾಂಗ್ರೆಸ್ ದ್ವಿಮುಖ ನೀತಿಯನ್ನು ಬಲವಾಗಿ ಖಂಡಿಸುತ್ತೇವೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಧಾರಿತ ರಾಜಕೀಯ ಮಾಡುವುದಿಲ್ಲ ಎಂದು ಹೇಳುವ ಶಾಸಕರು ನಿನ್ನೆ ನಡೆದ ಘಟನೆಯನ್ನು ಖಂಡಿಸಬೇಕಾಗಿತ್ತು. ಆದರೆ ಅದನ್ನು ಒಂದು ಧರ್ಮದ ಓಲೈಕೆಗಾಗಿ ದೇಶ ದ್ರೋಹವನ್ನು ಖಂಡಿಸದೆ ಇರುವುದು ಕೂಡ ದೇಶ ದ್ರೋಹವೇ ಸರಿ. ಕ್ಷೇತ್ರದ ಅಭಿವೃದ್ಧಿಗಾಗಿ ರೂ.೧೨೫ಕೋಟಿ ಅನುದಾನ ಮಂಜೂರು ಮಾಡಿದ್ದೇನೆ ಎಂದು ಹೇಳುವ ಶಾಸಕರು ಅದರ ಕುರಿತಾಗಿ ಒಂದಾದರೂ ದಾಖಲೆ ಒದಗಿಸಲಿ. ಅದನ್ನು ಬಿಟ್ಟು ಹಳೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ್ದು ಹೊಸ ಬಾಟಲಿಯಲ್ಲಿ ಹಳೆಯ ಮದ್ಯ ಎನ್ನುವಂತಾಗಿದೆ ಎಂದು ಹರಿಹಾಯ್ದರು.
ಎಸ್.ಸಿ.ಪಿ.ಟಿ ಮತ್ತು ಟಿ.ಎಸ್.ಪಿ ಅನುದಾನದ ಕ್ರಿಯಾಯೋಜನೆಯಲ್ಲಿ ೫ಕೋಟಿ ಬಿಡುಗಡೆಗೊಳಿಸಿ ೬೯ ಪಲಾನುಭವಿಗಳಿಗೆ ಟೆಂಡರ್ ಕರೆಯಲಾಗಿತ್ತು. ಆದರೆ ನನ್ನ ಅವಧಿಯಲ್ಲಿ ಆಯ್ಕೆಯಾದ ಪಲಾನುಭವಿಗಳ ಹೆಸರನ್ನು ಬದಲಾಯಿಸಿ ಬೇರೆ ಹೆಸರುಗಳನ್ನು ಸೇರಿಸುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರಿಗೆ ಪತ್ರ ಬರೆದು ಪಲಾನುಭವಿಗಳನ್ನು ಬದಲಾಯಿಸಿದ್ದು, ದ್ವೇಷ ರಾಜಕಾರಣವಲ್ಲದೇ ಮತ್ತೇನು? ಎಂದು ಪ್ರಶ್ನಿಸಿದ ಮಾಜಿ ಶಾಸಕರು ಆ ಪಲಾನುಭವಿಗಳು ಕೂಡಾ ಎಸ್.ಸಿ/ಎಸ್.ಟಿ ಜನಾಂಗದವರೇ ಆಗಿದ್ದರೂ ಅವರನ್ನು ಬದಲಾಯಿಸಿದ್ದು ದಲಿತ ವಿರೋಧಿ ನೀತಿ ಅಲ್ಲವೇ ಎಂದು ಕಿಡಿ ಕಾರಿದರು.
ಹಳೆಯ ಜೆಜೆಎಂ ಕಾಮಗಾರಿಗಳನ್ನೇ ಹೊಸದಾಗಿ ಗುದ್ದಲಿ ಪೂಜೆ ಮಾಡಿ ದೊಡ್ಡ ಸಾಧನೆ ಎಂಬಂತೆ ಬಿಂಬಿಸುತ್ತಿರುವ ಶಾಸಕರಿಗೆ ನಿಜವಾಗಿಯೂ ಜನಪರ ಕಾಳಜಿ ಇದ್ದರೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಲಿ. ಅಭಿವೃದ್ಧಿಗಾಗಿ ಶಾಸಕರ ಕೈಜೋಡಿಸುತ್ತೇವೆ. ಅಲ್ಲಿ ರಾಜಕಾರಣ ಮಾಡುವುದಿಲ್ಲ ಎಂದರು.
ಈ ವೇಳೆ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಅಶೋಕ ಅಲ್ಲಾಪುರ, ಶ್ರೀಮಂತ ನಾಗೂರ, ಗುರು ತಳವಾರ, ಪ್ರಧಾನಿ ಮೂಲಿಮನಿ, ಶ್ರೀಕಾಂತ ಬಿಜಾಪುರ, ಸಂತೋಷ ಮಣಿಗಿರಿ, ಪೀರು ಕೆರೂರ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

