ಬಸವನಬಾಗೇವಾಡಿ: ಆರೂಢ ಮಹಾರಾಜಿ ಕೀ ಜೈ… ಎನ್ನುವ ಮುಗಿಲು ಮುಟ್ಟುವ ಜಯಘೋಷದೊಂದಿಗೆ ಭಕ್ತಾಧಿಗಳ ಸಮ್ಮುಖದಲ್ಲಿ ತಾಲ್ಲೂಕಿನ ಸುಕ್ಷೇತ್ರ ಆರೂಢರ ಐಕ್ಯಸ್ಥಳ ಆರೂಢ ನಂದಿಹಾಳದ ಬ್ರಹ್ಮಸ್ವರೂಪಿ ಶ್ರೀಗುರು ಆರೂಢರ ೪೨ನೇ ಜಾತ್ರಾ ಮಹೋತ್ಸವ ನಿಮಿತ್ಯ ರಥೋತ್ಸವ ಭಾರತ ಹುಣ್ಣಿಮೆಯ ದ್ವಿತೀಯ ದಿನವಾದ ಸೋಮವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಜಾತ್ರಾ ದಿನದಂದು ಶ್ರೀಗುರು ಆರೂಢರ ಐಕ್ಯ ಮಂಟಪಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಭೀಷೇಕದ ನಂತರ ಕಳಸವನ್ನು ಹೆಂಗಳೆಯರಿಂದ ಕಳಸದೊಂದಿಗೆ ಗಂಗಾಸ್ಥಳಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸಿ ಡೊಳ್ಳಿನ ಮೇಳದೊಂದಿಗೆ ಗ್ರಾಮದ ತುಂಬೆಲ್ಲಾ ಪಲ್ಲಕ್ಕಿ ಹಾಗೂ ಮಹಿಳೆಯರಿಂದ ಕುಂಭ ಮೆರವಣಿಗೆ ನಡೆಸಿ ಆರೂಢರು ಸಾಧನೆಗೈದ ಕೊಂಪಿಗೆ ಸಾಗಿ ಶ್ರೀಮಠಕ್ಕೆ ಆಗಮಿಸಿತು.
ಗ್ರಾಮದ ಗುರುನಗೌಡ ಪಾಟೀಲ, ಬಸಯ್ಯ ಹಿರೇಮಠ, ರಾಮನಗೌಡ ಹಳ್ಳಿ, ಕೆಂಚು ವಾಲೀಕಾರ, ನಿಂಗಣ್ಣ ಮದರಿ ಅವರ ಮನೆಗಳಿಂದ ಕಳಸ, ಹಗ್ಗ, ಛತ್ರಿ ಛಾಮರಗಳನ್ನು ವಾದ್ಯ ವೈಭವಗಳೊಂದಿಗೆ ತರಲಾಯಿತು.
ಸಂಜೆ ಪುಣೆ, ಗೋವಾ, ಮೈಸೂರು, ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಯಾದಗಿರಿ, ಕಲಬುರ್ಗಿ, ಬಾಗಲಕೋಟೆ, ರಾಯಚೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಸಹಸ್ರ ಸಂಖ್ಯೆಯ ಭಕ್ತಾಧಿಗಳು ಶ್ರೀ ಮಠದಿಂದ ಯಾಳವಾರ ರಸ್ತೆಯಲ್ಲಿರುವ ಪಾದಗಟ್ಟೆವರೆಗೆ ಭವ್ಯವಾದ ರಥ ಎಳೆದು ಭಕ್ತಿ ಸಮರ್ಪಿಸಿದರು. ಜಾತ್ರೆಗೆ ಆಗಮಿಸಿದ್ದ ಭಕ್ತರು ಉತ್ತತ್ತಿ, ಹೂ, ಸಮರ್ಪಿಸಿದರು.
ಈ ಸಂದರ್ಭದಲ್ಲಿ ಯಾಳವಾರ ಹೊರ ಪೋಲೀಸ್ ಠಾಣೆ ವತಿಯಿಂದ ಪೋಲೀಸ್ ಬಿಗಿ ಬಂದೊಬಸ್ತ ವ್ಯವಸ್ಥೆ ಮಾಡಲಾಗಿತ್ತು.
ರಥವನ್ನು ಕಡಕೋಳ ಹಿರೇಮಠದ ರಾಜಗುರು ಮಹಾಲಿಂಗ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಗ್ರಾಮದ ಅನೇಕ ಗಣ್ಯರು, ಕಮೀಟಿ ಪದಾಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಶಿಷ್ಯವರ್ಗ ಹಾಗೂ ಭಕ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

