ಹೂವಿನಹಿಪ್ಪರಗಿಯಲ್ಲಿ ಜರುಗಿದ ಸಂವಿಧಾನ ಜಾಗೃತಿ ಜಾಥಾ
ಬಸವನಬಾಗೇವಾಡಿ: ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಹೂವಿನಹಿಪ್ಪರಗಿ ಗ್ರಾಮ ಪಂಚಾಯತ ಸಹಯೋಗದಲ್ಲಿ ಮಂಗಳವಾರ ಸಂಜೆ ಜರುಗಿದ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು. ಮೆರವಣಿಗೆ ನಂತರ ಜರುಗಿದ ಸಮಾರಂಭದಲ್ಲಿ ಬೆರಳೆಣಿಕೆಯಷ್ಟು ಜನರಿಂದ ಸಪ್ಪೆಯಾಗಿ ಜರುಗಿ ಜನರ ಆಕ್ರೋಶಕ್ಕೆ ಕಾರಣವಾಯಿತು.
ಗ್ರಾಮಕ್ಕೆ ಸಂಜೆ ೬ ಗಂಟೆಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧ ಚಿತ್ರದ ಮೆರವಣಿಗೆಯಲ್ಲಿ ವಿವಿಧ ಶಾಲಾ ಮಕ್ಕಳ ವಿವಿಧ ನೃತ್ಯ, ಕೋಲಾಟ, ಲೇಜಿಮ್, ಬ್ಯಾಂಡ್ ಬಾಜಿ, ಬ್ಯಾಂಜೋ, ಸಾರವಾಡದ ಗೊಂಬೆಗಳು ಭಾಗವಹಿಸುವ ಮೂಲಕ ಮೆರವಣಿಗೆಗೆ ಮೆರಗು ತಂದವು. ಮೆರವಣಿಗೆಯಲ್ಲಿ ವಿವಿಧ ಮುಖಂಡರು, ವಿವಿಧ ಅಧಿಕಾರಿಗಳು, ವಿವಿಧ ಶಾಲಾ ಸಿಬ್ಬಂದಿ ಸೇರಿದಂತೆ ಇತರರು ಭಾಗವಹಿಸಿದ್ದರು. ಮೆರವಣಿಗೆ ಸಾಗುವ ಮಾರ್ಗ ಮಧ್ಯದಲ್ಲಿ ಕೆಲವೆಡೆ ಬೀದಿ ದೀಪದ ವ್ಯವಸ್ಥೆ ಇಲ್ಲದೇ ಇರುವದರಿಂದಾಗಿ ಮಕ್ಕಳು ಕತ್ತಲೆಯಲ್ಲಿ ಸಾಗುವಂತಾಯಿತು.
ಮೆರವಣಿಗೆ ಸಮಾರಂಭ ಹಮ್ಮಿಕೊಂಡಿದ್ದ ಎಂ.ಕೆ. ಮತ್ತು ಡಾ.ಬಿ.ಜಿ.ಬ್ಯಾಕೋಡ ಪದವಿ ಪೂರ್ವ ಮಹಾವಿದ್ಯಾಲಯದ ಆವರಣಕ್ಕೆ ರಾತ್ರಿ ಎಂಟು ಗಂಟೆಗೆ ತಲುಪಿತು. ಮೆರವಣಿಗೆ ತಲುಪುವಷ್ಟರಲ್ಲಿ ಸಮಯ ಬಹಳವಾದ ಹಿನ್ನೆಲೆಯಲ್ಲಿ ಬಹುತೇಕ ಶಾಲಾ ಮಕ್ಕಳು ಮನೆ ಕಡೆಗೆ ಮುಖ ಮಾಡಿದರು. ಇದರಿಂದಾಗಿ ಸಮಾರಂಭದಲ್ಲಿ ಸ್ವಲ್ಪವೇ ಹಾಕಲಾಗಿದ್ದ ಕುರ್ಚಿಗಳು ಇದ್ದರೂ ಬೆರಳಣಿಕೆಯಷ್ಟು ಜನರು ಇದ್ದ ಕಾರಣದಿಂದಾಗಿ ಕುರ್ಚಿಗಳು ಖಾಲಿಯಾಗಿ ಕಂಡುಬಂದವು.
ಜಾಥಾ ಅಂಗವಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಫರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಯಾವುದೇ ಪ್ರಶಸ್ತಿ ಪತ್ರ ನೀಡದೇ ಕೇವಲ ಪುಸ್ತಕಗಳನ್ನು ನೀಡುವ ಮೂಲಕ ಬಹುಮಾನ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ ಅಧ್ಯಕ್ಷೆ ಶಿವುಬಾಯಿ ಮಾದರ ಉದ್ಘಾಟಿಸಿದರು. ಸಮಾರಂಭದಲ್ಲಿ ನೋಡಲ್ ಅಧಿಕಾರಿ ಬಿಇಓ ವಸಂತ ರಾಠೋಡ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಭವಾನಿ ಪಾಟೀಲ, ಉಪತಹಸೀಲ್ದಾರ ಎಸ್.ಕೆ.ಪಾಟೀಲ, ಡಾ.ಎಸ್.ಬಿ.ಸಂದಿಮನಿ, ಗ್ರಾಪಂ ಉಪಾಧ್ಯಕ್ಷ ರಮೇಶ ಶಿವಯೋಗಿ, ಪಿಡಿಓ ಜಿ.ಪಿ.ಕಲ್ಯಾಣಿ, ಮುಖಂಡರಾದ ಶಿವಾನಂದ ತಾಳಿಕೋಟಿ, ಶಾಂತಪ್ಪ ಪೂಜಾರಿ, ಯಲ್ಲಪ್ಪ ಕೋಲಕಾರ, ಅಶೋಕ ಪಾಟೀಲ ಸೇರಿದಂತೆ ಇತರರು ಇದ್ದರು.
ಸಂವಿಧಾನ ಕುರಿತು ಶಿಕ್ಷಕ ಎಂ.ಆರ್.ರಾಜನಾಳ ಉಪನ್ಯಾಸ ನೀಡಿದರು. ಡಿಎಸ್ಎಸ್ ಮುಖಂಡ ಮಹಾಂತೇಶ ಸಾಸಾಬಾಳ ಅವರು ಕ್ರಾಂತಿ ಗೀತೆ ಹಾಡಿ ಸಂವಿಧಾನ ಕುರಿತು ಮಾತನಾಡಿದರು. ಸಿಆರ್ಪಿ ಸುಮಿತ್ರಾ ತೋಟದ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಬಿಆರ್ಪಿ ಎಸ್.ಬಿ.ಬಾಗೇವಾಡಿ ನಿರ್ವಹಿಸಿದರು.