ಆಲಮಟ್ಟಿಯಲ್ಲಿ ಅರಣ್ಯ ದಿನಗೂಲಿ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ
ಆಲಮಟ್ಟಿ: ಆಲಮಟ್ಟಿಯ ವಿವಿಧ ಉದ್ಯಾನಗಳ ನಿರ್ವಹಣೆ ಕಾಮಗಾರಿಗೆ ಕರೆದಿರುವ ಟೆಂಡರ್ ನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಅರಣ್ಯ ದಿನಗೂಲಿ ಕಾರ್ಮಿಕರು ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಂಗಳವಾರ ಎರಡು ದಿನ ಪೂರ್ಣಗೊಳಿಸಿತು.
ಕಳೆದ ೨೫ ವರ್ಷಗಳಿಂದ ನಾವು ಕೆಬಿಜೆಎನ್ ಎಲ್ ಅರಣ್ಯ ಇಲಾಖೆ ನೀಡುವ ದಿನಗೂಲಿ ವೇತನದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದೇವೆ. ಟೆಂಡರ್ ಪ್ರಕ್ರಿಯೆ ನಡೆದರೆ ನಾವು ಕೆಲಸ ಕಳೆದುಕೊಳ್ಳುವ ಭೀತಿ ಆವರಿಸಿದೆ. ನಮ್ಮ ಸಮಸ್ಯೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕು, ಇಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಕಾರ್ಮಿಕರು ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಸಂತ್ರಸ್ತರಿದ್ದಾರೆ. ಒಂದೆಡೆ ಮನೆ, ಜಮೀನು ಕಳೆದುಕೊಂಡು ಕೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅದಕ್ಕೂ ಹೊಡೆತ ಬೀಳುವ ಭಯ ಆವರಿಸಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಪ್ರತಿಭಟನೆಯಲ್ಲಿ ದ್ಯಾಮಣ್ಣ ಬಿರಾದಾರ, ಸಂಗಮೇಶ ಯರನಾಳ, ಗುರುಲಿಂಗಯ್ಯ ಗೌಡರ, ಮೀನಾಕ್ಷಿ ರಾಓಡ, ಶಾಂತಾ ಚಿಮ್ಮಲಗಿ, ಯಲ್ಲವ್ವ ಮೇಟಿ, ಚನ್ನಮ್ಮ ಮಠ, ಪ್ರಭು ಹಿರೇಮಠ, ಅವ್ವಪ್ಪ ತಳೇವಾಡ, ಲಕ್ಷ್ಮಣ ಬ್ಯಾಲ್ಯಾಳ, ರಮೆಶ ಅಸ್ಕಿ, ಸತೀಶ ಮುಕಾರ್ತಿಹಾಳ, ಭೀಮಶಿ ನಾಯಕ ಮತ್ತೀತರರು ಇದ್ದರು.