ಎರಡು ದಿನಗಳ ತರಬೇತಿ ಕಾರ್ಯಾಗಾರ | ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಕರ್ತವ್ಯ ಪಾಲನೆಗೆ ಸಿಇಓ ಕರೆ
ವಿಜಯಪುರ: ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಬೇಕು. ಪ್ರತಿಯೊಬ್ಬರು ಮತದಾನ ಮಾಡುವುದಲ್ಲದೇ ಮತದಾನ ಮಾಡಲು ಕುಟುಂಬ ಸದಸ್ಯರು, ನೆರೆಹೊರೆಯವನ್ನು ಪ್ರೇರೆಪಿಸುವುದ ನಮ್ಮ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಹೇಳಿದರು.
ಮಂಗಳವಾರ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರದಲ್ಲಿ ನಡೆಯುತ್ತಿರುವ ಆಹಾರ ಭದ್ರತಾ ಕಾಯ್ದೆ ೨೦೧೩ರ ಜಾರಿಯಲ್ಲಿ ಬಾಲ ವಿಕಾಸ ಸಮಿತಿ ಸದಸ್ಯರ ಕರ್ತವ್ಯ ಮತ್ತು ಜವಾಬ್ದಾರಿ ಸಾಮರ್ಥ್ಯಾಭಿವೃದ್ಧಿ ತರಬೇತಿ ಹಾಗೂ ಜಿಲ್ಲಾ ಪಂಚಾಯಿಯ ಎನ್‌ಆರ್‌ಎಲ್‌ಎಂ ಯೋಜನೆಯಡಿ ಚಡಚಣ ತಾಲೂಕಿನ ೧೩ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಗ್ರಾಮೀಣ ಬಡತನ ನಿರ್ಮೂಲನೆ ಯೋಜನೆ” ತಯಾರಿಕೆ ಕುರಿತಂತೆ ಎರಡು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ರಾಜ್ಯ ಚುನಾವಣಾ ಆಯೋಗದಿಂದ ಮತದಾರರ ಜಾಗೃತಿ ಕುರಿತು ಇರುವ ವಿಡಿಯೋವನ್ನು ಉದ್ಘಾಟಿಸಿ, ಶಿಬಿರಾರ್ಥಿಗಳೊಂದಿಗೆ ವೀಕ್ಷಿಸಿದ ಅವರು, ತರಬೇತಿಯಲ್ಲಿ ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಮತದಾನದ ಮಹತ್ವದ ಕುರಿತು ಅವರು ಮಾತನಾಡಿದರು.
ಮತದಾನವು ನಮ್ಮೆಲ್ಲರ ಹಕ್ಕು, ನಮ್ಮ ಹಕ್ಕನ್ನು ನಾವು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನಮ್ಮ ಕರ್ತವ್ಯವನ್ನು ನಿಭಾಯಿಸೋಣ. ಪ್ರಸ್ತುತ ವರ್ಷ ಲೋಕಸಭಾ ಚುನಾವಣೆ-೨೦೨೪ ನ್ನು ವಿಶೇಷವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಶೇ.೧೦೦ರಷ್ಟು ಮತದಾನವಾಗುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಗ್ರಾಮೀಣ ಮಟ್ಟದಲ್ಲಿ ಅನೇಕ ಜನರು ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಗೆ ವಲಸೆ ಹೋಗಿರುತ್ತಾರೆ ಅಂತಹವರನ್ನು ಕರೆ ಮಾಡುವ ಮೂಲಕ ಸಂಪರ್ಕಿಸಿ ಅವರಿಗೂ ಸಹ ಮತದಾನದ ಕುರಿತು ಮಾಹಿತಿ ನೀಡಿ ಮತದಾನ ಮಾಡಲು ಪ್ರೇರೇಪಣೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಚುನಾವಣಾ ಆಯೋಗವು ಮತದಾರರಿಗೆ ಚುನಾವಣೆ ಕುರಿತು ಎಲ್ಲ ಮಾಹಿತಿಗಳು ಲಭ್ಯವಾಗುವಂತೆ ವೋಟರ್ ಹೆಲ್ಪಲೈನ್ (ವಿಎಚ್‌ಎ) ಆಪ್ ನ್ನು ಜಾರಿಗೆ ತಂದಿದ್ದು, ಈ ಆಪ್ ನ್ನು ತಮ್ಮ ಮೊಬೈಲ್ ಗಳಲ್ಲಿ ಡೌನ್ಲೋಡ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಲು, ಹೊಸದಾಗಿ ಹೆಸರನ್ನು ನೊಂದಾಯಿಸಿಕೊಳ್ಳಲು ನಮೂನೆಗಳ ಬಗ್ಗೆ ತಿಳಿದುಕೊಳ್ಳಿ ಹಾಗೂ ಚುನಾವಣಾ ಸಹಾಯವಾಣಿ ಸಂಖ್ಯೆ ೧೯೫೦ ಗೆ ಕರೆ ಮಾಡಿ ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಸಿ. ಬಿ ದೇವರಮನಿ, ಮಹಾನಗರ ಪಾಲಿಕೆ ಆಯುಕ್ತರಾದ ಬದ್ರೂದ್ದೀನ ಸೌದಾಗರ, ಉಪ ಆಯುಕ್ತರು ಮಹಾವೀರ ಬೋರಣ್ಣವರ ಸೇರಿದಂತೆ ಜಿಲ್ಲಾ ಪಂಚಾಯತಿಯ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.