ದೇವರಹಿಪ್ಪರಗಿ: ಚಿಮ್ಮಲಗಿ ಹಾಗೂ ಮುಳವಾಡ ಏತ ನೀರಾವರಿ ಕಾಲುವೆಗಳ ನೀರು ಪೂರೈಕೆಯಲ್ಲಿ ತಾರತಮ್ಯ ನೀತಿ ಅನುಸರಿಸದೇ ಕೂಡಲೇ ನೀರು ಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕಿನ ರೈತ ಸಮುದಾಯ ಪೂರ್ವಭಾವಿ ಸಭೆಯ ಮೂಲಕ ಆಗ್ರಹಿಸಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸೇರಿದ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಸರ್ಕಾರದ ನೀರು ಹಂಚಿಕೆಯ ತಾರತಮ್ಯ ನೀತಿಯನ್ನು ಚರ್ಚಿಸಿ ಖಂಡಿಸಿದರು. ಈ ಸಂದರ್ಭದಲ್ಲಿ ರೈತಸಂಘದ ನಾಯಕರಾದ ಶಂಕರಗೌಡ ಹಿರೇಗೌಡರ, ಅಜೀಜ್ ಯಲಗಾರ, ಬಸವರಾಜ ಕಲ್ಲೂರ ಮಾತನಾಡಿ, ಪ್ರತಿ ಬಾರಿ ಕಾಲುವೆ ಮೂಲಕ ನೀರು ಪಡೆಯಲು ರೈತರು ಹೋರಾಟ ಮಾಡಬೇಕಾದ ಅನಿವಾರ್ಯತೆಯನ್ನು ಸರ್ಕಾರ ಸೃಷ್ಟಿಸಿದೆ.
ನಮ್ಮ ಭಾಗದ ಚಿಮ್ಮಲಗಿ ಏತ ನೀರಾವರಿ ಕಾಲುವೆಗಳು ಹೆಸರಿಗಷ್ಟೇ ಕಾಲುವೆಗಳೇನಿಸಿವೆ. ಇಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ನೀರು ಹರಿಯುತ್ತದೆ. ಅದು ಅರ್ಧ ಹಂತದವರೆಗೆ ಮಾತ್ರ ಪೂರ್ಣವಾಗಿ ಮುಟ್ಟುವ ಸಂದರ್ಭದಲ್ಲಿ ನೀರು ನಿಲ್ಲಿಸಲಾಗುತ್ತದೆ. ಹೀಗಾಗಿ ಈ ಭಾಗದ ಕೆರೆಗಳು ಬೇಸಿಗೆಯ ಆರಂಭದಲ್ಲಿಯೇ ಖಾಲಿಯಾಗಿವೆ. ಹೀಗಾದರೇ ಬೇಸಿಗೆ ಕಳೆಯುವುದಾದರೂ ಹೇಗೆ? ತೋಟಗಳಲ್ಲಿ ಇರುವ ರೈತಕುಟುಂಬಗಳು, ದನಕರು ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಈಗಲೇ ಆರಂಭಗೊಂಡಿವೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗುವುದರಲ್ಲಿ ಸಂದೇಹವಿಲ್ಲ. ಸರ್ಕಾರ ಮಾತ್ರ ರೈತರನ್ನು ನಿರ್ಲಕ್ಷಿಸಿ ಗ್ಯಾರಂಟಿಗಳ ಪ್ರಚಾರದಲ್ಲಿದೆ ಎಂದು ಆರೋಪಿಸಿದರು. ಒಂದು ವೇಳೆ ಇದೇ ದಿ:೨೦ರ ಒಳಗಾಗಿ ಎರಡು ಕಾಲುವೆಗಳಿಗೆ ನೀರು ಹರಿಸಬೇಕು ಇಲ್ಲವಾದರೇ ರೈತರ ಬೃಹತ್ ಪ್ರತಿಭಟನೆ ಎದುರಿಸಲು ಮುಂದಾಗಬೇಕು ಎಂದು ಎಚ್ಚರಿಸಿದರು.
ಸಭೆಯಲ್ಲಿ ಶಂಕರಗೌಡ ಕೋಟಿಖಾನಿ(ಹರನಾಳ), ಸಂಗನಗೌಡ ಬಿರಾದಾರ(ಮುಳಸಾವಳಗಿ) ಶ್ರೀಮಂತ ತಳವಾರ, ಚನ್ನಪ್ಪ ಕಾರಜೋಳ(ನಿವಾಳಖೇಡ),ರಾಮು ದೇಸಾಯಿ, ಚಂದು ಏಳಕೋಟಿ, ಬಂದೇನವಾಜ್ ಹಳ್ಳಿ, ಬಸನಗೌಡ ಭೈರೋಡಗಿ, ಸಂತೋಷ ಬಿರಾದಾರ(ಇಂಗಳಗಿ), ಸಾಹೇಬಗೌಡ ಬಿರಾದಾರ, ಮುಕ್ಕಣ್ಣ ಬಿರಾದಾರ, ಯಶವಂತ ನಾಯ್ಕೋಡಿ, ಭೀಮಗೊಂಡ ಭಂಟನೂರ, ಚನ್ನಪ್ಪ ಕಣಮುಚನಾಳ, ಸುಭಾಸ ಭಂಟನೂರ, ರಮೇಶ ದೇಸಾಯಿ ಸೇರಿದಂತೆ ಹಲವರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment