ಸಿಂದಗಿ: ನಗರಕ್ಕೆ ಈಗಾಗಲೇ ಮನೆ ಮನೆಗೆ ನಳ ಸಂಪರ್ಕಕ್ಕೆ ೪೯ಕೋಟಿ ರೂ. ಅನುದಾನವು ಮಂಜೂರಾಗಿದೆ. ನಗರೋತ್ಥಾನ ಅಮೃತ ೨ ಯೋಜನೆಯ ಅಡಿಯಲ್ಲಿ ಪ್ರಾರಂಭವಾಗಲಿದೆ. ನನ್ನ ಈ ೫ ವರ್ಷದ ಅವಧಿಯನ್ನು ಜನ ಸೇವೆಗೆ ಮೀಸಲಿಡುತ್ತೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಭಾನುವಾರ ಸಾಯಂಕಾಲ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಡಾ.ಬಿ.ಆರ್.ಅಂಬೇಡ್ಕರ್ ಆಟೋ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಒಂದು ಆಟೋ ನಿಲ್ದಾಣ ನಿರ್ಮಾಣವಾಗಿದೆ. ಇನ್ನುಳಿದ ಬಸವೇಶ್ವರ ವೃತ್ತ, ವಿವೇಕಾನಂದ ವೃತ್ತ, ಟಿಪ್ಪು ಸುಲ್ತಾನ್ ವೃತ್ತ ಹಾಗೂ ಸಂಗಮ್ ಬಾರ್ ಸೇರಿ ಐದಾರು ಆಟೋ ನಿಲ್ದಾಣಗಳನ್ನು ಐದಾರು ತಿಂಗಳಲ್ಲಿ ನಿರ್ಮಾಣ ಮಾಡಿಕೊಡುವೆ ಎಂದು ಭರವಸೆ ನೀಡಿದರು.
ಸಿಂದಗಿಯಲ್ಲಿ ಈ ಆಟೋ ನಿರ್ಮಾಣವಾಗಬೇಕಾದರೆ ಸಭಾಧ್ಯಕ್ಷರಾದ ಯು.ಟಿ.ಖಾದರ ಅವರ ಪ್ರೇರಣೆಯಾಗಿದೆ. ಏಕೆಂದರೆ ಕಳೆದ ಉಪಚುನಾವಣೆಯಲ್ಲಿ ಬಂದ ಸಂದರ್ಭದಲ್ಲಿ ಅವರು ಆಟೋ ಚಾಲಕರಿಗೆ ಕೊಟ್ಟ ಮಾತಿನಂತೆ ಇಂದು ಈ ಆಟೋ ನಿಲ್ದಾಣ ಮಾಡಲು ಪ್ರೇರಣೆಯಾಗಿದೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ, ಎಂ.ಎ. ಖತೀಬ, ವೈ.ಸಿ. ಮಯೂರ ಮಾತನಾಡಿ, ಜನಪ್ರತಿನಿಧಿಗಳಾದವರು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪ್ರತಿಯೊಬ್ಬರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ನಾಯಕ ಯಾರಾದರೂ ಇದ್ದರೆ ಅವರು ಶಾಸಕ ಮನಗೂಳಿ. ದಿನದ ೨೪ ಗಂಟೆಯೂ ಕೆಲಸ ಮಾಡುವ ನಾಯಕ ದೊರೆತಿರುವುದು ನಮ್ಮ ನಿಮ್ಮೆಲ್ಲರ ಪುಣ್ಯ ಎಂದರು.
ಇದೇ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಸಲೀಮ್ ಅಲ್ದಿ ಮಾತನಾಡಿದರು.
ಈ ವೇಳೆ ಶಾಸಕ ಅಶೋಕ ಮನಗೂಳಿ ಸ್ವಾಮಿ ವಿವೇಕಾನಂದ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಆಟೋ ಶಂಕರನ ವೇಷದಲ್ಲಿ ಆಟೋ ಚಾಲನೆ ಮಾಡಿಕೊಂಡು ಬಂದದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಪಿಡಬ್ಲ್ಯೂಡಿ ಎಇಇ ತಾರಾನಾಥ ರಾಠೋಡ, ಮಂಜು ಬಿಜಾಪುರ, ಅರವಿಂದ ಹಂಗರಗಿ, ಕಸಾಪ ಮಾಜಿ ತಾಲೂಕಾಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಮುತ್ತು ಮುಂಡೇವಾಡಗಿ, ಇರ್ಫಾನ್ ಭಾಗವನ, ಪುರಸಭೆ ಕಿರಿಯ ಆರೋಗ್ಯ ಅಧಿಕಾರಿ ನಬಿರಸೂಲ್ ಉಸ್ತಾದ್, ಮಹಾಂತಗೌಡ ಪಾಟೀಲ್, ಪುರಸಭೆ ಸದಸ್ಯ ಬಸವರಾಜ ಯಾರನಾಳ, ಭಾಷಾ ವಾಲೀಕಾರ, ಶಾಂತು ರಾಣಾಗೋಳ ಸೇರಿದಂತೆ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು, ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment