ದ್ರಾಕ್ಷಿ, ದಾಳಿಂಬೆ, ಲಿಂಬೆ, ಕಬ್ಬು, ತೊಗರಿ, ಅಜಿವಾನ, ಮೆಣಸಿನಕಾಯಿಗೆ ಬೆಂಬಲ ಬೆಲೆಗೆ ಖರೀದಿಸಲು ಆಗ್ರಹ
ವಿಜಯಪುರ: ಎಲ್ಲ ಜಿಲ್ಲೆಯ ರೈತ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಮುಂಬರುವ ಬಜೆಟ್ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರೈತ ಮುಖಂಡರಿಗೆ ಹೇಳಿದರು.
೨೦೨೪-೨೫ ನೇ ಸಾಲಿನ ಬಜೆಟ್ ನಿಮಿತ್ಯ ನಡೆಯಲಿರುವ ಅಧಿವೇಶನದ ಪೂರ್ವವಾಗಿ ರಾಜ್ಯದ ಎಲ್ಲಾ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಬರಗಾಲದ ನಿಮಿತ್ಯ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಅನುಕೂಲವಾಗಲಿ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಣ ಮಿಸಲಿಟ್ಟು ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ, ನಾನು ಕೂಡಾ ರೈತ ಕುಟುಂಬದಿಂದ ಬಂದವನು, ರೈತರ ಕಷ್ಟ ಗೊತ್ತಿದೆ, ರೈತರ ಪರವಾಗಿ ಯಾವಾಗಲೂ ಇರುತ್ತೆನೆ ಎಂದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ಮಾತನಾಡಿ, ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ಕೂಡಲೇ ಕೆ.ಬಿ.ಜೆ.ಎನ್.ಎಲ್ ಕಚೇರಿಯನ್ನು ಬೆಂಗಳೂರಿನಿಂದ ಆಲಮಟ್ಟಿಗೆ ಸ್ಥಳಾಂತರಿಸಬೇಕು. ಕೃಷ್ಣಾ ಕಣಿವೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು, ಆಲಮಟ್ಟಿ ಜಲಾಶಯದ ಎತ್ತರವನ್ನು ೫೧೯.೬ ರಿಂದ ೫೨೪.೨೫೬ ಮೀಟರ್ ಎತ್ತರಕ್ಕೆ ಎತ್ತರಿಸಬೇಕು, ನಷ್ಟ ಪರಿಹಾರ ಹಾಗೂ ಪುರ್ನವಸತಿ ನೀಡಬೇಕು, ಜಿಲ್ಲೆಯಲ್ಲಿ ಮಾಡಲಾಗಿರುವ ಎಲ್ಲಾ ನೀರಾವರಿ ಯೋಜನೆಯ ಕಾಲುವೆ ಹಾಗೂ ಉಪ ಕಾಲುವೆಗಳಲ್ಲಿ ಮಣ್ಣು ಬಿದ್ದು, ಜಾಲಿಕಂಠಿಗಳು ಬೆಳೆದು ನೀರು ಸಾಗುತ್ತಿಲ್ಲ, ಮುಂಜಾಗೃತವಾಗಿ ಮಳೆಗಾಲಕ್ಕೂ ಮುಂಚಿತವಾಗಿಯೇ ವ್ಯವಸ್ಥೆ ಮಾಡಬೇಕು, ಅದಕ್ಕಾಗಿ ಪ್ರತೈಕ ಹಣ ಮಿಸಲಿಡಬೇಕು. ಬರಗಾಲದ ನಿಮಿತ್ಯ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಬರಗಾಲ ನಿವಾರಣೆಗೆ ಮುಂಜಾಗೃತವಾಗಿ ವಿಶೇಷ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿದರು.
ಇದೇ ವೇಳೆ ಕೋಲಾರ ತಾಲೂಕು ಅಧ್ಯಕ್ಷರಾದ ಸೋಮು ಭೀ. ಬಿರಾದಾರ ಮಾತನಾಡಿದರು.
ಈ ವೇಳೆ ಮುಖಂಡರಾದ ಲಕ್ಷ್ಮಣ ಹಂಚಿನಾಳ, ಅಶೋಕ ಕಳಸಗೊಂಡ, ಸಂತೋಷ ಹಂಚಿನಾಳ ಅಭಿಷೇಕ ಹೂಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.