ನಾಲ್ವರು ಬೈಕ್ ಕಳ್ಳರು ಮತ್ತು ಮೂವರು ಬ್ಯಾಂಕ್ ಹಾಗೂ ಫೈನಾನ್ಸ್ ಕಳ್ಳರ ಬಂಧನ | ರೂ.16.65 ಲಕ್ಷ ಮೌಲ್ಯದ 37 ಬೈಕ್ ವಶ
ವಿಜಯಪುರ: ಜಿಲ್ಲೆಯ ಸಿಂದಗಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಜನ ಬೈಕ್ ಕಳ್ಳರು ಮತ್ತು ಮೂರು ಜನ ಬ್ಯಾಂಕ್ ಹಾಗೂ ಫೈನಾನ್ಸ್ ಕಳ್ಳರನ್ನು ಬಂಧಿಸಿದ್ದಾರೆ.
ಮೊದಲ ಪ್ರಕರಣದಲ್ಲಿ ಸಿಂದಗಿ ಪೊಲೀಸರು ನಾಲ್ಕು ಜನ ಬೈಕ್ ಕಳ್ಳರನ್ನು ಬಂಧಿಸಿದ್ದು, ಅವರ ಬಳಿಯಿದ್ದ 37 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ರೂ. 16.65 ಲಕ್ಷ ಎಂದು ಅಂದಾಜಿಸಲಾಗಿದೆ.
ಸಿಂದಗಿ ನಗರ ಮತು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ವಿಜಯಪುರ ಎಸ್ಪಿ ಋಷಿಕೇಶ ಸೋನಾವಣೆ ಅವರು ಹೆಚ್ಚುವರಿ ಎಸ್ಪಿಗಳಾದ ರಾಮನಗೌಡ ಎ ಹಟ್ಟಿ ಮತ್ತು ಶಂಕರ ಮಾರಿಹಾಳ, ಇಂಡಿ ಡಿವೈಎಸ್ಪಿ ಜಗದೀಶ ಎಚ್. ಎಸ್. ಅವರ ಮಾರ್ಗದರ್ಶನದಲ್ಲಿ ಸಿಪಿಐ ನಾನಾಗೌಡ ಆರ್. ಪೊಲೀಸ್ ಪಾಟೀಲ ಹಾಗೂ ಸಿಂದಗಿ ಪಿಎಸ್ಐ ಭೀಮಪ್ಪ ಎಂ. ರಬಕವಿ ಅವರ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ.
ಫೆ. 8 ರಂದು ಸಂಜೆ 4 ಗಂಟೆ ಸುಮಾರಿಗೆ ಸಿಂದಗಿ ಪಟ್ಟಣದ ಯಂಕಂಚಿ ಬೈಪಾಸ್ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ ಎರಡು ಮೊಟರ್ ಸೈಕಲ್ ತಡೆದಿದ್ದಾರೆ. ಆಗ ಆ ಬೈಕುಗಳಲ್ಲಿ ನಾಲ್ಕು ಜನ ಆರೋಪಿಗಳನ್ನು ವಿಚಾರಿಸಿದಾಗ ತಾವು ಯಾದಗಿರಿ ಜಿಲ್ಲೆಯ ಶಹಾಪೂರ ಮತ್ತು ಸುರಪುರದವರಾದ ಬಸವರಾಜ ಭೀಮಣ್ಣ ಹುಣಸಿಗಿಡದ(31), ಹುಲುಗಪ್ಪ ಮರೆಪ್ಪ ಕೂಕಲೋರ(22), ಕೊಂಡಯ್ಯ ಭೀಮರಾಯ ಪಾರ್ವತಿದೊಡ್ಡಿ(22), ರವಿಕುಮಾರ ದೇವಿಂದ್ರಪ್ಪ ಪಾರ್ವತಿದೊಡ್ಡಿ ಎಂದು ತಿಳಿಸಿದ್ದಾರೆ. ಅಲ್ಲದೇ, ತಾವು ಒಟ್ಟಾಗಿ ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ ರಾಜನಕೊಳ್ಳೂರ, ಸಿಂದಗಿ, ಯಡ್ರಾಮಿ, ಸೇಡಂ, ಭೀಮರಾಯನಗುಡಿ, ಬಿರೂರ, ಚಾಮನಾಳ, ಬೂದೂನೂರ, ಹದನೂರ, ನೆಲೋಗಿ, ಜೇವರ್ಗಿ, ಮೂದಬಾಳ, ಮಲ್ಲಾ(ಬಿ), ಮಳ್ಳಿ, ಅರಕೇರಾ, ಸಲದಾಪೂರ, ಜಾಲಹಳ್ಳಿ, ಕೊಡೇಕಲ್, ಶಿರಾಳ, ನೇಲ್ಲೋಗಿ, ತಾಳಿಕೋಟೆ ಮುಂತಾದ ಪಟ್ಟಣಗಳು ಮತ್ತು ಗ್ರಾಮಗಳಿಗೆ ತೆರಳಿದಾಗ ಜಮೀನಿನ ದಂಡೆಯಲ್ಲಿ ಹಾಗೂ ಇತರ ಜಾಗಗಳಲ್ಲಿ ನಿಲ್ಲಿಸಿದ ಬೈಕುಗಳ ಹ್ಯಾಂಡ್ ಲಾಕ್ ಮುರಿದು ಮೋಟರ್ ಸೈಕಲ್ ಗಳನ್ನು ಕಳ್ಳತನ ಮಾಡಿರುವ ಕುರಿತು ಬಾಯಿ ಬಿಟ್ಟಿಬಿಟ್ಟಿದ್ದಾರೆ.
