ವಿಜಯಪುರ: ಹಿಂದೆಂದೂ ಕಂಡು ಕಾಣದಂತಹ ಬೀಕರ ಬರಗಾಲ ನಮ್ಮ ರಾಜ್ಯಕ್ಕೆ ಒಕ್ಕರಿಸಿದೆ. ಕಳೆದ ೭-೮ ತಿಂಗಳಿನಿಂದ ಮಳೆ ಕಾಣದೇ ಕಂಗಾಲಾಗಿರುವ ರೈತ ಸಮುದಾಯವನ್ನು ಗಣನೆಗೆ ತೆಗೆದುಕೊಂಡು ನಾಳೆ ನಡೆಯಲಿರುವ ಬಜೆಟ್ ಪೂರ್ವ ಅಧಿವೇಶನದಲ್ಲಿ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ೮ ಶಾಸಕರುಗಳು ರೈತರ ಪರವಾಗಿ ಧ್ವನಿ ಎತ್ತಿ ರೈತರ ಮತದಿಂದ ಆರಿಸಿ ಬಂದಿರುವ ತಾವುಗಳು ಅವರ ಋಣ ತೀರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಪತ್ರಿಕೆ ಮೂಲಕ ಆಗ್ರಹಿಸಿದ್ದಾರೆ.
ಅಧಿವೇಶನವೆಂದರೆ ಕೇವಲ ಜಗಳವಾಡುವುದು ಆಗಬಾರದು, ಜಿಲ್ಲೆಗೆ ಹಾಗೂ ಜಿಲ್ಲೆಯ ರೈತರಿಗೆ ಅವಶ್ಯವಾಗಿ ಬೇಕಾಗಿರುವ ಹೊಸ ಯೋಜನೆಗಳ ಕುರಿತು, ಹಾಗೆಯೇ ಹಿಂದೆ ನೆನಗುದಿಗೆ ಬಿದ್ದಿರುವ ಕಾಮಗಾರಿಗಳ ಹಣವನ್ನು ಮಂಜೂರು ಮಾಡುವಂತೆ ಜಿಲ್ಲೆಯ ೮ ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕೆಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅನೇಕ ರೈತರು ಆತ್ಮಹತ್ಯ ಮಾಡಿಕೊಂಡಿದ್ದಾರೆ, ರೈತರ ಬಗ್ಗೆ ಕೇವಲ ಬಾಯಿ ಮಾತಿನಲ್ಲಿ ಕನಿಕರ ತೊರದೇ ಬರಗಾಲದಿಂದ ತತ್ತರಿಸಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಬೆಳೆದಿರುವ ಎಲ್ಲಾ ಬೆಳೆಗಳಿಗೆ ವರ್ಷಪೂರ್ತಿ ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಕೃಷಿಗೆ ಬಡ್ಡಿ ರಹಿತ ಬೇಷರತ್ತ ಸಾಲ ಸಿಗುವಂತಾಗಬೇಕು, ಕೃಷಿ ಚಟುವಟಿಕೆ ನಡೆಯದೇ ರೈತ ಕಾರ್ಮಿಕರು ಗುಳೆ ಹೋಗುತ್ತಿರುವುದನ್ನು ತಪ್ಪಿಸಲು ಉದ್ಯೋಗ ಸೃಷ್ಠಿಸಬೇಕು, ರೈತರಿಗೆ ಸಂಬಂಧಿಸಿದ ಕೃಷಿ, ಅರಣ್ಯ, ತೋಟಗಾರಿಕೆ, ಮೀನು, ಪಶುಸಂಗೋಪನೆ, ಇಲಾಖೆಯಲ್ಲಿ ಅವಶ್ಯವಿರುವ ಎಲ್ಲಾ ಸಾಧನ ಸಲಕರಣೆಗಳು, ಬೀಜ, ಗೊಬ್ಬರ, ಸ್ಪಿಂಕಲರ್ ಪೈಪ ಸೇರಿದಂತೆ ಎಲ್ಲ ಉಪಕರಣಗಳು ದೊರೆಯಬೇಕು ಜೊತೆಗೆ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳಬೇಕು ಎಂದರು.
ಆಲಮಟ್ಟಿ ಆಣೆಕಟ್ಟು ೫೧೯.೬ ರಿಂದ ೫೨೪.೨೫೬ಕ್ಕೆ ಎತ್ತರಿಸಿ, ಪರಿಹಾರ ಹಾಗೂ ಪುರ್ನವಸತಿ ಕಲ್ಪಿಸಬೇಕು, ಜೊತೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಏತ ನೀರಾವರಿ ಯೋಜನೆಗಳನ್ನು ಗುಣಮಟ್ಟದಿಂದ ನಿರ್ಮಿಸಿ, ಜಿಲ್ಲೆಯ ಕಡೆಯ ಹಳ್ಳಿಯ ಕಟ್ಟಕಡೆಯ ರೈತರ ಜಮೀನಿಗೂ ನೀರು ಹರಿಯಬೇಕು.
ರೈತರಿಗೆ ಮರಣ ಶಾಸನವಾಗಿರುವ ಭೂ ಸುಧಾರಣಾ ಕಾಯ್ದೆ, ಕೃಷಿ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆ, ಜಾನುವಾರ ಹತ್ಯೆ, ತಂದಿರುವ ಕೇಂದ್ರ ಹಾಗೂ ರಾಜ್ಯ ಬಿ.ಜೆ.ಪಿ ಸರಕಾರ ತಂದಿರುವುದನ್ನು ದೇಶದ ಎಲ್ಲಾ ರೈತರು ವಿರೋಧಿಸಿರುವ ಪ್ರತಿಫಲವಾಗಿ ಕೇಂದ್ರದಲ್ಲಿ ಮರಳಿ ಪಡೆದಿದ್ದರೂ ರಾಜ್ಯ ಸರಕಾರಗಳು ಇನ್ನು ಮರಳಿ ಪಡೆದಿಲ್ಲ, ಅಧಿಕಾರಕ್ಕೆ ಬರುವ ಮುಂಚೆ ರೈತರಿಗೆ ನೀಡಿರುವ ಆಶ್ವಾಸನೆಯಂತೆ ಕೂಡಲೆ ಈ ಅಧಿವೇಶನದಲ್ಲಿ ಈ ಎಲ್ಲಾ ಕಾಯ್ದೆಗಳನ್ನು ವಾಪಸು ಪಡೆಯಬೇಕು.
ಸರಿಸುಮಾರು ೭೫% ರೈತರು ಕೃಷಿಯನ್ನೆ ಅವಲಂಭಿಸಿರುವ ಈ ರಾಜ್ಯದಲ್ಲಿ ರೈತಪರ ಚಿಂತನೆಗಳನ್ನು ಮಾಡಿ ತಜ್ಞರಿಂದ, ಹಿರಿಯ ರೈತ ಹೋರಾಟಗಾರರಿಂದ ಮಾರ್ಗದರ್ಶನ ಪಡೆದು ರೈತಪರ ಬಜೆಟ್ ಮಂಡನೆ ಮಾಡಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಲ್ಲಿ ಸಮಸ್ತ ರೈತ ಬಾಂಧವರ ಪರವಾಗಿ ಸಗರ ಅವರು ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment