ವಿಜಯಪುರ: ವಾರಣಾಸಿಯ ಜ್ಞಾನವಾಪಿಯನ್ನು ನಾವೆಂದೂ ಮುಸ್ಲಿಂರಿಂದ ಕಸಿಯಲು ಬಿಟ್ಟು ಕೊಡುವುದಿಲ್ಲ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷ ತಿಳಿಸಿದೆ.
ಶುಕ್ರವಾರ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಪಕ್ಷವು, ಸಂವಿಧಾನದ ಮೂಲಕ ಬರುವ ಹಕ್ಕುಗಳನ್ನು ಯಾರು ಕಸಿಯಲಾರರು ಎಂಬ ನಂಬಿಕೆ ಅಚಲವಾಗಿರುತ್ತದೆ. ಆ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸತ್ತು ಕೈಗೊಳ್ಳುವ ಕಾಯ್ದೆ, ಕಾನೂನುಗಳು ಸಂವಿಧಾನದ ಪರಿಧಿಯಲ್ಲಿರುತ್ತವೆ. ಅಂತಹದ್ದೇ ಒಂದು ಕಾಯ್ದೆ ೧೯೯೧ರ ಪೂಜಾ ಸ್ಥಳಗಳ ಕಾಯ್ದೆ. ಹಾಗಿದ್ದೂ ಜ್ಞಾನವಾಪಿ ಮಸೀದಿಯನ್ನು ಷಡ್ಯಂತ್ರದ ಮೂಲಕ ಮುಸ್ಲಿಮರಿಂದ ಕಸಿಯುವ ಪ್ರಯತ್ನ ನಡೆಯುತ್ತಿದೆ.
ಬಿಜೆಪಿ ಮತ್ತು ಸಂಘಪರಿವಾರ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಮಾರ್ಪಡಿಸಬೇಕು ಎಂದು ಷಡ್ಯಂತ್ರ ರೂಪಿಸುತ್ತಿದೆ. ಅದರ ಭಾಗವಾಗಿ ಮುಸ್ಲಿಮರ ಸಾಂಸ್ಕೃತಿಕ ಗುರುತುಗಳನ್ನು ಅಳಿಸಿ ಹಾಕುವ ಅಪಾಯಕಾರಿ ಯೋಜನೆಗಳನ್ನು ರೂಪಿಸಿಕೊಂಡು ಅದನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರುತ್ತಿದೆ. ಹೆಸರು ಬದಲಾವಣೆ ಎಂಬುದು ಅವರ ಒಂದು ಅಸ್ತ್ರವಾದರೆ, ಇನ್ನೊಂದು ಪ್ರಬಲ ಅಸ್ತ್ರ ಮುಸ್ಲಿಮರ ನಂಬಿಕೆಗಳ ಮೇಲೆ ಪ್ರಹಾರ ನಡೆಸುವುದು. ಮುಸ್ಲಿಮರ ಮಸೀದಿಗಳನ್ನು ಅವರಿಂದ ಕಿತ್ತುಕೊಳ್ಳುವ ಮೂಲಕ ಅವರ ನಂಬಿಕೆಗಳ ಮೇಲೆ ಪ್ರಹಾರ ನಡೆಸಬೇಕು ಎಂಬುದು ಫ್ಯಾಸಿಸ್ಟ್ ಬಿಜೆಪಿ ಮತ್ತು ಸಂಘ ಪರಿವಾರದ ತಂತ್ರ. ಅದರ ಭಾಗವಾಗಿ ಈಗಾಗಲೇ ಬಾಬರಿ ಮಸೀದಿಯನ್ನು ದೇಶದ ಮುಸ್ಲಿಮರ ಪಾಲಿಗೆ ಇಲ್ಲವಾಗಿಸಿದ್ದಾರೆ. ಈಗ ಜ್ಞಾನವಾಪಿ ಮಸೀದಿಯನ್ನು ಕೂಡ ಅದೇ ಸಾಲಿಗೆ ಸೇರಿಸಲು ಹವಣಿಸುತ್ತಿದ್ದಾರೆ ಎಂದು ಎಸ್.ಡಿ.ಪಿ.ಐ ತನ್ನ ಪ್ರಕಟಣೆಯಲ್ಲಿ ಆಕ್ರೋಶವನ್ನು ಹೊರ ಹಾಕಿದೆ.
ಶುಕ್ರವಾರ ನಗರದ ಡಾ ಅಂಬೇಡ್ಕರ್ ವೃತ್ತ ಹತ್ತಿರ ಎಸ್ ಡಿ ಪಿ ಐ ಪಕ್ಷದ ನಾಯಕರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಥಾವುಲ್ಲಾ ದ್ರಾಕ್ಷೀ ಮಾತನಾಡಿದರು. ಹಾಗೂ ಜಿಲ್ಲಾ ಸಮಿತಿ ಮುಖಂಡರು ಹಾಗೂ ನಗರ ಸಮಿತಿಯ ಸದಸ್ಯರು ಹಾಗೂ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment