ಸಾವು-ಬದುಕಿನ ಹೋರಾಟದಲ್ಲಿ ಮಂಜುನಾಥ ಬೂದಿಹಾಳ | ಚಿಕಿತ್ಸೆಗೆ ರೂ.15ಲಕ್ಷ ನೆರವಿನ ಅಗತ್ಯ
– ಇಂದುಶೇಖರ ಮಣೂರ

ವಿಜಯಪುರ: ಕೇವಲ ಜ್ವರ ಬಂದರೇನೇ ಆಸ್ಪತ್ರೆಗಳಲ್ಲಿ ಸಾವಿರ-ಸಾವಿರ ಪೀಕುವ ಈ ದಿನಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆ ತಲೆದೋರಿದರೆ ಲಕ್ಷ-ಲಕ್ಷ ಹಣ ಚೆಲ್ಲಬೇಕು. ದುಡ್ಡಿರುವ ಶ್ರೀಮಂತರೇನೋ ಹೈಟೆಕ್ ಆಸ್ಪತ್ರೆಗಳಲ್ಲಿ ನೀರಿನಂತೆ ಹಣ ಖರ್ಚುಮಾಡಿ ಗುಣಮುಖರಾಗ್ತಾರೆ. ಆದರೆ ತಮ್ಮ ದೈನಂದಿನ ತುತ್ತಿನ ಚೀಲ ತುಂಬಿಸಿಕೊಳ್ಳಲೇನೇ ಹೆಣಗುವ ಬಡ ಕುಟುಂಬಗಳಿಗೆ ಗಂಭೀರ ಆರೋಗ್ಯ ಸಮಸ್ಯೆ ತಲೆದೋರಿದರೆ ಅವರೆಲ್ಲಿ ಹೋಗಬೇಕು?
ಈಗ ಇಂತಹದ್ದೇ ಸಂಕಷ್ಠದ ಪ್ರಕರಣವೊಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಬೆಳಕಿಗೆ ಬಂದಿದೆ. ಪಟ್ಟಣದ ಮಂಜುನಾಥ ಕಾಳಪ್ಪ ಬೂದಿಹಾಳ ಎಂಬ ನತದೃಷ್ಟ ಯುವಕನ ಎರಡೂ ಕಿಡ್ನಿಗಳು ವಿಫಲಗೊಂಡು ಈಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಅವನ ಕುಟುಂಬವೀಗ ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಮೂಲತ: ಸೊಂಪೂರ ಗ್ರಾಮದ, ಸಧ್ಯ ಸಿಂದಗಿ ಪಟ್ಟಣದಲ್ಲಿ ವಾಸವಿರುವ ಕಾಳಪ್ಪ ಬೂದಿಹಾಳ ದಂಪತಿಗೆ ಐದು ಜನ ಮಕ್ಕಳು. ಮಗ ಮಂಜುನಾಥ ಹೊರತುಪಡಿಸಿದರೆ ಉಳಿದವರು ಹೆಣ್ಣುಮಕ್ಕಳು. ತಂದೆ ಕಾಳಪ್ಪ ಪೆಟ್ರೋಲ್ ಬಂಕ್ ನಲ್ಲಿ ಕೆಲಸಮಾಡುತ್ತಿದ್ದು, ತಮಗೆ ದೊರೆವ ಮಾಸಿಕ ರೂ.6000/- ಸಂಬಳದಲ್ಲೇ ಕುಟುಂಬದ 7 ಜನರ ನಿರ್ವಹಣೆ ಮಾಡಬೇಕು. 10 × 20 ಅಳತೆಯ ಕುರಿದೊಡ್ಡಿಯಂತಹ ಬಾಡಿಗೆ ಕೋಣೆಯೊಂದರಲ್ಲಿಯೇ ಇವರ ವಾಸ.
ಬಡತನದ ಬವಣೆಯಲ್ಲಿ ಹಾಗೂ-ಹೀಗೂ ಪಿಯುಸಿವರೆಗೆ ಓದಿದ ಮಂಜುನಾಥ, ಕುಟುಂಬದ ಆರ್ಥಿಕ ಸಂಕಷ್ಠದಿಂದಾಗಿ ಓದು ಮುಂದುವರೆಸಲಾಗದೆ ಅಲ್ಪ ಸಂಬಳದ ಖಾಸಗಿ ಕೆಲಸಕ್ಕೆ ಸೇರಿ ತಂದೆಯ ನೆರವಿಗೆ ನಿಂತಿದ್ದ.
ಆದರೀಗ ತನ್ನ ಏಕೈಕ ಸುಪುತ್ರ ಮಂಜುನಾಥನ ಎರಡೂ ಕಿಡ್ನಿಗಳು ಫೇಲ್ ಆಗಿದ್ದರಿಂದ ತಂದೆ ಕಾಳಪ್ಪಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಈಗ ಮಗನಿಗೆ ವಾರಕ್ಕೆರಡು ಬಾರಿ ವಿಜಯಪುರ ನಗರಕ್ಕೆ ಹೋಗಿ ಡಯಾಲಿಸಿಸ್ ಮಾಡಿಸಲು ಸುಮಾರು ರೂ.ಐದು ಸಾವಿರ ಖರ್ಚು ಮಾಡುತ್ತಿದ್ದಾನೆ. ಈಗಾಗಲೇ ಆಸ್ಪತ್ರೆ ಖರ್ಚು ಹಾಗೂ ಡಯಾಲಿಸಿಸ್ ಗಾಗಿ ಕಾಳಪ್ಪ ಸಾಲ-ಸೋಲ ಮಾಡಿ ರೂ.ಎರಡು ಲಕ್ಷ ಖರ್ಚು ಮಾಡಿದ್ದಾನೆ. ಮಗನ ಆರೈಕೆಗಾಗಿ ಈಗ ತಾನೂ ಅನಿವಾರ್ಯವಾಗಿ ಕೆಲಸಕ್ಕೆ ಹೋಗಲಾಗದೆ ಮುಂದೆ ಹೇಗೆಂಬ ಚಿಂತೆಯಲ್ಲಿ ಅಸಹಾಯಕನಾಗಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ.
ಈಗ ಮಂಜುನಾಥನಿಗೆ ಕಿಡ್ನಿ ಹೊಂದಿಸಿ ಕಸಿ ಮಾಡಲು ರೂ.15ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆಯಿದೆ. ಇನ್ನು 30 ದಿನಗಳೊಳಗಾಗಿ ಕಿಡ್ನಿ ಕಸಿ ಮಾಡಿಸಲೇಬೇಕೆಂದು ಅವನಿಗೆ ಚಿಕಿತ್ಸೆ ನೀಡುತ್ತಿರುವ ಬಿಎಲ್ಡಿಇ ಆಸ್ಪತ್ರೆ ವೈದ್ಯರಾದ ಡಾ.ಸಂದೀಪ ಪಾಟೀಲ ಹಾಗೂ ಡಾ.ಆರ್.ಎಂ.ಹೊನ್ನುಟಗಿ ತಿಳಿಸಿದ್ದಾರೆ.
ಹೀಗಾಗಿ ಕಾಳಪ್ಪಗೆ ತಿಂಗಳೊಳಗಾಗಿ ರೂ.15/- ಲಕ್ಷ ಹೊಂದಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾನೆ. ತನ್ನ ಏಕೈಕ ಮಗನ ಉಳಿವಿಗೆ ಸ್ಪಂದಿಸುವ, ಮಾನವೀಯ ನೆರವು ನೀಡುವ ದಾನಿಗಳ ನಿರೀಕ್ಷೆಯಲ್ಲಿದ್ದಾನೆ. ಈ ಕುಟುಂಬದ ಆಸರೆಗೆ ದಾನಿಗಳು ಕೈಲಾದಷ್ಟು ಆರ್ಥಿಕ ಸಹಾಯ ನೀಡಿ ಮಾನವೀಯತೆ ಮೆರೆಯಬೇಕಿದೆ. ಈ ಕುಟುಂಬದ ನೋವಿಗೆ ನಾವೆಲ್ಲ ಸ್ಪಂದಿಸುವ ಜರೂರತ್ತಿದೆ.
ಆರ್ಥಿಕ ಸಹಾಯ ಮಾಡಲಿಚ್ಛಿಸುವವರು ಈ ಕೆಳಕಂಡ ಖಾತೆಗೆ ಜಮೆ ಅಥವಾ ಫೋನ್ ನಂಬರಗೆ ಫೋನ್-ಪೇ ಮಾಡಬಹುದು.
Phonepay no: 8884461687 (manjunath kalappa Budihal)
ಬ್ಯಾಂಕ್ ವಿವರ
State bank of India
Branch: Sindagi
Name: Kalappa B. Budihal (Sompur)
SB A/C NO: 30638176444
IFSC CODE: SBIN0001019