ಪರೀಕ್ಷೆ ಉತ್ತೀರ್ಣಕ್ಕೆ ಕಠಿಣ ಅಧ್ಯಯನ ಮುಖ್ಯ
ಪರೀಕ್ಷೆ ಉತ್ತೀರ್ಣಕ್ಕೆ ಕಠಿಣ ಅಧ್ಯಯನ ಮುಖ್ಯ
ವಿಜಯಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವದ ಮೊದಲ ಘಟ್ಟವಾಗಿದೆ. ಈ ಪರೀಕ್ಷೆಯು ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶೈಕ್ಷಣಿಕ ಜೀವನದ ಮಾರ್ಗಸೂಚಿಯಂತೆ ಕೆಲಸ ಮಾಡುವುದಲ್ಲದೇ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಅಲ್ಲದೇ ನಿಮ್ಮ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.೧೦೦ಕ್ಕೆ ತಲುಪಲು ಪ್ರಯತ್ನಿಸಿ ಎಂದು ನಗರ ವಲಯದ ಬಿಇಓ ಬಸವರಾಜ ತಳವಾರ ಹೇಳಿದರು.
ಬಿಜಾಪುರ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ನಗರ ವಲಯದ ಬಿಇಓ ಬಸವರಾಜ ತಳವಾರರವರು ಭೇಟಿ ನೀಡಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯನ್ನು ತಗೆದುಕೊಂಡು ಮಾತನಾಡಿದ ಅವರು. ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಹಲವಾರು ಕ್ರಮಗಳನ್ನು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿ ವಿವಿಧ ಮತ್ತು ವಿನೂತನ ಕ್ರಿಯಾಯೋಜನೆ ತಯಾರಿಸುವುದು ಅತ್ಯಂತ ಪ್ರಮುಖವಾಗಿದೆ.
ಯಾವುದೇ ಒಂದು ಪರೀಕ್ಷೆ ಉತ್ತೀರ್ಣರಾಗಬೇಕೆಂದರೆ ಕಠಿಣ ಅಧ್ಯಯನ ಬಹಳ ಮುಖ್ಯ. ಈಗಾಗಲೇ ಪೂರಕ ಪರೀಕ್ಷೆಗಳನ್ನು ಎದುರಿಸುತ್ತಿರುವ ತಮಗೆ ಪರೀಕ್ಷೆಯಲ್ಲಿ ಮುಂಚೆ ಎಲ್ಲಿ ತಪ್ಪು ಮಾಡಿದ್ದೀರಿ ಎಂದು ಮನವರಿಕೆ ಮಾಡಿಕೊಳ್ಳಿ, ಈ ತಪ್ಪುಗಳನ್ನ ಗಮನದಲ್ಲಿಟ್ಟುಕೊಂಡು ಅಧ್ಯಯನ ಮಾಡಿ. ಆ ತಪ್ಪುಗಳು ಪುನರಾವರ್ತನೆ ಆಗದ ಹಾಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ. ನಿಮಗೆ ಯಾವ ವಿಷಯ ಬಹಳ ಕಠಿಣ ಎನಿಸುತ್ತದೆ. ಆ ವಿಷಯದ ಮೇಲೆ ಹೆಚ್ಚಿನ ಗಮನ ಹರಿಸಿ, ಅಧ್ಯಯನ ಮಾಡಿ ಎಂದು ಹೇಳಿದರು.
ಈ ವೇಳೆ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿಯವರು ಮಾತನಾಡಿದರು.
ಈ ಸಂದರ್ಭದಲ್ಲಿ ಬಿಆರ್‌ಸಿ ಎಚ್.ಡಿ.ಮಸೂತಿ, ಸಿಆರ್‌ಸಿ ಸಂತೋಷ ತಳವಾರ, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸಂದೀಪ ರಾಠೋಡ ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆ ಎ.ಎಂ.ನಾಗೊಂಡ ಹಾಗೂ ವಂದನಾರ್ಪಣೆಯನ್ನು ಇ.ಡಿ.ಲಮಾಣಿಯವರು ನೆರವೇರಿಸಿದರು.

