ಮಲತಾಯಿ ಧೋರಣೆ ವಿರೋಧಿಸಿ ಕೇಂದ್ರದ ವಿರುದ್ಧದ ಪ್ರತಿಭಟನೆಗೆ ಬಿಜೆಪಿಯನ್ನು ಆಹ್ವಾನಿಸಿದ ಸಿಎಂ
ಬೆಂಗಳೂರು: ನಮ್ಮ ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯ, ತಾರತಮ್ಯ, ಮಲತಾಯಿ ಧೋರಣೆ ವಿರೋಧಿಸಿ ರಾಜ್ಯದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಫೆಬ್ರವರಿ 07ರಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಬೆಳಿಗ್ಗೆ 11.00 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಶಾಸಕರು, ಸಂಸದರು, ನಾಯಕರಿಗೂ ಈ ಮೂಲಕ ನಾವು ಪ್ರತಿಭಟನೆಗೆ ಕರೆ ಕೊಡುತ್ತಿದ್ದೇವೆ. ನಾವು ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ. ರಾಜ್ಯದ ಪರವಾಗಿ ಪ್ರತಿಭಟಿಸುತ್ತಿದ್ದೇವೆ. ನೀವೂ ರಾಜ್ಯದ ಜನರ ಧ್ವನಿಯಾಗಿ, ರಾಜ್ಯದ ಜನರ ಪರವಾಗಿ ನಿಲ್ಲಿ ಎಂದು ಬಿಜೆಪಿಯವರಿಗೆ ಕರೆ ಕೊಡುತ್ತೇವೆ. ಕನ್ನಡಿಗರಿಗೆ ದ್ರೋಹ ಮಾಡಬೇಡಿ, ಬನ್ನಿ ರಾಜ್ಯದ ಪರವಾಗಿ ಧ್ವನಿ ಎತ್ತೋಣ ಎಂದು ಕರೆಯುತ್ತಿದ್ದೇವೆ. ಪ್ರತಿಭಟಿಸದೆ ಸುಮ್ಮನಿದ್ದರೆ ಕನ್ನಡಿಗರಿಗೆ ದ್ರೋಹ ಮಾಡಿದಂತಾಗುತ್ತದೆ’ ಎಂದು ಹೇಳಿದ್ದಾರೆ.
‘ರಾಜ್ಯದ ಜನತೆ ನಮಗೆ ಕೊಟ್ಟ ಅವಕಾಶಕ್ಕೆ ನ್ಯಾಯ ಒದಗಿಸಬೇಕಾದುದ್ದು ನಮ್ಮ ಕರ್ತವ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನ್ಯಾಯ ಒದಗಿಸಿಕೊಡಲಿದೆ ಎಂದು ಇಲ್ಲಿಯವರೆಗೂ ತಾಳ್ಮೆಯಿಂದ ಕಾಯುತ್ತಿದ್ದೆವು. ಕಳೆದ ಸಾಲಿನ ಬಜೆಟ್ ನಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಕಾದಿದ್ದೆವು. ಆದರೆ ಇದುವರೆಗೂ ಅನ್ಯಾಯ ಸರಿ ಪಡಿಸಿಲ್ಲ. ಇದರ ವಿರುದ್ಧ ಧ್ವನಿ ಎತ್ತಲೇಬೇಕಾಗಿದೆ. ಹೋರಾಟಕ್ಕೆ ಜೊತೆ ನೀಡಲು ಇಡೀ ಸರ್ಕಾರ ಪಕ್ಷ ಭೇದ ಮರೆತು ಆಹ್ವಾನ ನೀಡಿದ್ದೇವೆ. ಕನ್ನಡಿಗರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ. ಕೇಂದ್ರದ ಕಿವಿಯನ್ನು ತೆರೆಸಲು ಹೋರಾಡುತ್ತಿದ್ದೇವೆ’ ಎಂದು ಹೇಳಿದರು.
‘ಭದ್ರಾ ಯೋಜನೆಗೆ ₹5,300 ಕೋಟಿ ಕೊಡುತ್ತೇವೆ ಎಂದು ಕಳೆದ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿ ಈವರಗೆ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ಬರ ಪರಿಹಾರದ ಹಣವೂ ಇಲ್ಲ. ನರೇಗಾ ಅಡಿ 150 ಮಾನವ ದಿನಗಳಿಗೆ ಕೂಲಿ ಕೊಡಲು ಕೂಡ ಅನುಮತಿ ನೀಡಿಲ್ಲ. ಇಂಥ ಹಲವು ಕಾರಣಗಳಿಗಾಗಿ ಅನಿವಾರ್ಯವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದರು.
‘ದೇಶದ ಜನರ ಗಮನ ಸೆಳೆಯಬೇಕು, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ, ಹಣಕಾಸು ಹಂಚಿಕೆಯಲ್ಲಾಗಿರುವ ತಾರತಮ್ಯ, ಬರ ಪರಿಹಾರದಲ್ಲಿ ತೋರಿರುವ ಮಲತಾಯಿ ಧೋರಣೆ ಬಗ್ಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲ ಶಾಸಕರು, ಮೇಲ್ಮನೆ ಶಾಸಕರು ಭಾಗವಹಿಸುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲಕ ಕೇಂದ್ರ ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿ ಜನರ ಸೇವೆಯನ್ನು ಮಾಡಲು ಒಪ್ಪಿಕೊಂಡಿದ್ದೇವೆ. ಕೇಂದ್ರ ಸರ್ಕಾರದ ತೆರಿಗೆ ಹಣವೆಂದರೆ ರಾಜ್ಯಗಳಿಂದ ಬರುವ ತೆರಿಗೆ ಹಣ, ಸೆಸ್, ಪೆಟ್ರೋಲ್ ಡೀಸೆಲ್, ಸರ್ಚಾರ್ಜ್. ಇವುಗಳಿಂದ ಸಂಗ್ರಹವಾಗುವ ಹಣವನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಹಂಚಿಕೆಯಾಗಬೇಕೆಂದು ಹಣಕಾಸು ಆಯೋಗ ರಚನೆಯಾಗಿದೆ. ಸಂವಿಧಾನದ 7ನೇ ಪರಿಚ್ಛೇಧ ಅದನ್ನು ಸ್ವತಂತ್ರ ಸಂಸ್ಥೆಯಾಗಿಸಿದೆ. ಇಲ್ಲಿಯವರೆಗೆ 15 ಹಣಕಾಸು ಆಯೋಗಗಳು ಆಗಿವೆ. ಪ್ರಸ್ತುತ 16ನೇ ಹಣಕಾಸು ಆಯೋಗ ರಚನೆಯಾಗಿದ್ದು, ಅಧ್ಯಕ್ಷರ ನೇಮಕವಾಗಿದೆ’ ಎಂದು ವಿವರಿಸಿದರು.
‘ನರೇಂದ್ರ ಮೋದಿಯವರು ಸೂಕ್ಷ್ಮ ಇದ್ದಾರೆ, ಪ್ರತಿಭಟನೆ ಬಳಿಕವಾದರೂ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ ಕರ್ನಾಟಕದ ಪಾಲಿನ ಹಣವನ್ನು ವಾಪಾಸ್ ಕೊಡಬಹುದು ಎಂಬ ಆಶಾಭಾವನೆ ಇದೆ.
ಮುಂಬರುವ ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸಲು ರಾಜ್ಯ ಸರ್ಕಾರವು ಚಿಂತನೆ ನಡೆಸಿದೆ’ ಎಂದು ಹೇಳಿದರು.

